
ನವದೆಹಲಿ (ಫೆ. 15): ಗಲ್ಲು ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ತ್ವರಿತ ವಿಚಾರಣೆ ನಡೆಯುವಂತಾಗಲು ನಿಯಮಾವಳಿಗಳನ್ನು ಬದಲಿಸಿ ಎಂಬ ಕೇಂದ್ರ ಸರ್ಕಾರದ ಮನವಿಗೆ ಸುಪ್ರೀಂ ಕೋರ್ಟ್ ಓಗೊಟ್ಟಿದೆ.
ಮರಣದಂಡನೆಗೆ ಹೈಕೋರ್ಟ್ ಆದೇಶಿಸಿದ 6 ತಿಂಗಳ ಒಳಗೆ ಅದಕ್ಕೆ ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ಆರಂಭವಾಗಬೇಕು ಎಂಬ ನಿಯಮಾವಳಿಗಳನ್ನು ಅದು ಜಾರಿಗೆ ತಂದಿದೆ.
ಇತ್ತೀಚೆಗೆ ನಿರ್ಭಯಾ ಗ್ಯಾಂಗ್‌ರೇಪ್ ಪ್ರಕರಣದ ದೋಷಿಗಳು ತಮ್ಮ ಗಲ್ಲು ಶಿಕ್ಷೆಯನ್ನು ಮುಂದೂಡಿಸಿಕೊಳ್ಳಲು ಮೇಲ್ಮನವಿಗಳ ಮೇಲೆ ಮೇಲ್ಮನವಿ ಸಲ್ಲಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
7 ವರ್ಷ ಸರಿದರೂ ಸಿಗದ ನ್ಯಾಯ: ಪ್ರತಿಭಟನೆಗೆ ಮುಂದಾದ ನಿರ್ಭಯಾ ತಾಯಿ!
ಈ ಹಿನ್ನೆಲೆಯಲ್ಲಿ ‘ತ್ವರಿತವಾಗಿ ಈ ಪ್ರಕರಣಗಳ ವಿಚಾರಣೆ ನಡೆಯುವಂತಾಗಬೇಕು. ಇದಕ್ಕಾಗಿ ಹೊಸ ಗಡುವಿನೊಂದಿಗೆ ನಿಯಮಾವಳಿ ರೂಪಿಸಿ’ ಎಂದು ಕೇಂದ್ರ ಗೃಹ ಸಚಿವಾಲಯವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ನಿಯಮಾವಳಿಗಳು ಮಹತ್ವ ಪಡೆದಿವೆ.
ಹೊಸ ನಿಯಮಾವಳಿ ಹೀಗಿವೆ:
- ಗಲ್ಲು ಶಿಕ್ಷೆಗೆ ಆದೇಶಿಸಿ ಹೈಕೋರ್ಟ್ ನೀಡಿದ ತೀರ್ಪಿನ 6 ತಿಂಗಳ ಗಡುವಿನಲ್ಲಿ, ಅದರ ವಿರುದ್ಧದ ಮೇಲ್ಮನವಿಗಳ ವಿಚಾರಣೆ ಆರಂಭವಾಗಬೇಕು.
- ಮೇಲ್ಮನವಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಡೆಸಬೇಕು
- ಮೇಲ್ಮನವಿ ಸಲ್ಲಿಕೆಯಾದ ತಕ್ಷಣವೇ ವಿಷಯವನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ, ನ್ಯಾಯಪೀಠದ ಗಮನಕ್ಕೆ ತರಬೇಕು.
- ಮೇಲ್ಮನವಿ ಸಲ್ಲಿಕೆಯಾದ 60 ದಿನದೊಳಗೆ ಅಥವಾ ಕೋರ್ಟ್ ನಿಗದಿಪಡಿಸಿದ ದಿನಾಂಕದೊಳಗೆ ಸಂಬಂಧಿಸಿದ ಮೂಲ ದಾಖಲಾತಿ ನೀಡಬೇಕು
- ಅನ್ಯ ಭಾಷೆಯಲ್ಲಿ ಮೂಲ ದಾಖಲೆಗಳಿದ್ದರೆ ಅವುಗಳನ್ನು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಲಾದ ದಾಖಲೆಗಳನ್ನು ಸಲ್ಲಿಸಬೇಕು
- ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡರೆ, 30 ದಿನದೊಳಗೆ ಹೆಚ್ಚುವರಿ ದಾಖಲೆ ಕೊಡಿ ಎಂದು ಕಕ್ಷಿದಾರರಿಗೆ ರಿಜಿಸ್ಟ್ರಿ ಸೂಚಿಸಬೇಕು
- ಒಂದು ವೇಳೆ ನಿಗದಿತ ಸಮಯದೊಳಗೆ ದಾಖಲೆ ಸಲ್ಲಿಕೆಯಾಗದೇ ಇದ್ದಲ್ಲಿ ಪ್ರಕರಣವನ್ನು ರಿಜಿಸ್ಟ್ರಿಯಲ್ಲಿ ಲಿಸ್ಟ್ ಮಾಡಿಸುವ ಬದಲು, ಚೇಂಬರ್‌ನಲ್ಲೇ ವಿಚಾರಣೆ ನಡೆಸಲು ಪಟ್ಟಿಮಾಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ