
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2025ರಲ್ಲಿ ರಷ್ಯನ್ ನಿರ್ಮಿತ ಸು-57 ಐದನೇ ತಲೆಮಾರಿನ ಯುದ್ಧ ವಿಮಾನ ತೋರಿದ ವೈಮಾನಿಕ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ. ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ ವೀಕ್ಷಕರು ಸು-57 ಯುದ್ಧ ವಿಮಾನದ ಕುಶಲ ಚಲನೆಗಳಿಂದ ಪ್ರಭಾವಿತರಾದರು. ಒಂದಷ್ಟು ಜನರು ಭಾರತ ಈ ಯುದ್ಧ ವಿಮಾನವನ್ನು ಖರೀದಿಸುವ ಕುರಿತು ಚಿಂತಿಸಬೇಕೆಂದು ಸಲಹೆ ನೀಡಿದ್ದರು.
ಸು-57: ರಷ್ಯಾದ ಸ್ಟೆಲ್ತ್ ಯುದ್ಧ ವಿಮಾನ
ರಷ್ಯಾದ ಸು-57 ಯುದ್ಧ ವಿಮಾನ 21ನೇ ಶತಮಾನದ ಅವಶ್ಯಕತೆಗಳಿಗೆ ತಕ್ಕಂತೆ ವಿನ್ಯಾಸಗೊಂಡಿರುವ ಆಧುನಿಕ ಯುದ್ಧ ವಿಮಾನವಾಗಿದೆ. ಐದನೇ ತಲೆಮಾರಿನ ಯುದ್ಧ ವಿಮಾನವಾಗಿರುವ ಇದು ಅತ್ಯಂತ ಶಕ್ತಿಶಾಲಿ ಮತ್ತು ಆಧುನಿಕವಾಗಿದ್ದು, ಜಗತ್ತಿನಾದ್ಯಂತ ವಿವಿಧ ದೇಶಗಳ ಗಮನ ಸೆಳೆದಿದೆ.
ಸು-57 ರಷ್ಯಾದ ಹೈಟೆಕ್ ಯುದ್ಧ ವಿಮಾನವಾಗಿದ್ದು, ವಿಶೇಷ ಶಕ್ತಿ ಸಾಮರ್ಥ್ಯಗಳೊಡನೆ, ಸ್ಟೆಲ್ತ್ ಸಾಮರ್ಥ್ಯವನ್ನೂ ಪಡೆದುಕೊಂಡಿದೆ. ಇದನ್ನು ಅಮೆರಿಕನ್ ವಾಯುಪಡೆಯ ಎಫ್-35 ಮತ್ತು ಎಫ್-22 ರಾಪ್ಟರ್ ಯುದ್ಧ ವಿಮಾನಗಳಿಗೆ ಸ್ಪರ್ಧೆಯೊಡ್ಡಲು ಅಭಿವೃದ್ಧಿ ಪಡಿಸಲಾಗಿದೆ.
ಸು-57 ಅನ್ನು ನ್ಯಾಟೋ 'ಫೆಲೊನ್' ಎಂದು ಗುರುತಿಸಿದ್ದು, ಇದೊಂದು ಒಂಟಿ ಆಸನ ಮತ್ತು ಅವಳಿ ಇಂಜಿನ್‌ಗಳನ್ನು ಹೊಂದಿರುವ, ಬಹುಪಾತ್ರದ (ಮಲ್ಟಿರೋಲ್) ಯುದ್ಧ ವಿಮಾನವಾಗಿದೆ.
ಮಲ್ಟಿರೋಲ್ ಯುದ್ಧ ವಿಮಾನ ಎನ್ನುವುದು ಒಂದು ಮಿಲಿಟರಿ ವಿಮಾನವಾಗಿದ್ದು, ವಾಯು ಯುದ್ಧ, ಭೂ ದಾಳಿ, ಮತ್ತು ಕಣ್ಗಾವಲಿನಂತಹ ವಿವಿಧ ಕಾರ್ಯಾಚರಣೆಗಳನ್ನು ಕೈಗೊಳ್ಳಬಲ್ಲದು. ಕೇವಲ ಒಂದು ಉದ್ದೇಶಗಳಿಗೆ ನಿರ್ಮಿಸಿರುವ ವಿಮಾನಗಳಂತಲ್ಲದೆ, ಈ ಯುದ್ಧ ವಿಮಾನಗಳು ವಿವಿಧ ಉದ್ದೇಶಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ವಿನ್ಯಾಸಗೊಂಡಿದ್ದು, ಯುದ್ಧದ ಸನ್ನಿವೇಶಗಳಲ್ಲಿ ಹೆಚ್ಚು ಉಪಯುಕ್ತವಾಗಿವೆ.
ಭಾರತೀಯ ಯುದ್ಧ ವಿಮಾನಗಳಾದ ಎಲ್‌ಸಿಎ ತೇಜಸ್, ರಫೇಲ್ ಮತ್ತು ಸು-30ಎಂಕೆಐಗಳು ಸಹ ಬಹುಪಾತ್ರದ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಹೊಂದಿವೆ.
ಸು-57 ಒಂದು ಸುಗಮವಾದ, ಸುವ್ಯವಸ್ಥಿತವಾದ ಆಕಾರ ಮತ್ತು ಶಕ್ತಿಶಾಲಿಯಾದ ಇಂಜಿನ್‌ಗಳನ್ನು ಹೊಂದಿದ್ದು, ವಿಮಾನಕ್ಕೆ ಅತ್ಯಂತ ವೇಗವಾಗಿ ಹಾರಾಟ ನಡೆಸುವ ಮತ್ತು ಅತ್ಯಂತ ಚುರುಕಾಗಿ ತಿರುಗುವ ಸಾಮರ್ಥ್ಯವನ್ನು ನೀಡಿವೆ. ಇದರ ವಿನ್ಯಾಸ ಯುದ್ಧ ವಿಮಾನವನ್ನು ಅತ್ಯಂತ ಚುರುಕಾಗಿಸಿದ್ದು, ಸಂಕೀರ್ಣ ಚಲನೆಗಳನ್ನು ಬಹಳ ಸುಲಭವಾಗಿ ನಡೆಸಲು ನೆರವಾಗುತ್ತದೆ.
ಸು-57 ಯುದ್ಧ ವಿಮಾನ ಮೊದಲಿಗೆ ಪಿಎಕೆ-ಎಫ್ಎ (ಪ್ರಾಸ್ಪೆಕ್ಟಿವ್ ಏರೋನಾಟಿಕಲ್ ಕಾಂಪ್ಲೆಕ್ಸ್ ಆಫ್ ಫ್ರಂಟ್ ಲೈನ್ ಏರ್ ಫೋರ್ಸಸ್) ಎಂಬ ಹೆಸರು ಹೊಂದಿದ್ದು, ಇದನ್ನು ರಷ್ಯಾದ ಸುಖೋಯಿ ಡಿಸೈನ್ ಬ್ಯೂರೋ ಅಭಿವೃದ್ಧಿ ಪಡಿಸಿದೆ. ಇದೊಂದು, ಸ್ಟೆಲ್ತ್, ಅತ್ಯಂತ ವೇಗದ ಯುದ್ಧ ಮತ್ತು ಅತ್ಯಂತ ತೀಕ್ಷ್ಣವಾದ ಚಲನೆಯ ಸಾಮರ್ಥ್ಯಗಳನ್ನು ಹೊಂದಿ, ರಷ್ಯನ್ ವಾಯುಪಡೆಗೆ ಬಹುದೊಡ್ಡ ಆಸ್ತಿಯಾಗಿದೆ.
ಪಿಎಕೆ-ಎಫ್ಎ ಯೋಜನೆ ಮೂಲತಃ ಪಾಶ್ಚಾತ್ಯ ಯುದ್ಧ ವಿಮಾನಗಳಾದ ಎಫ್-22 ಮತ್ತು ಎಫ್-35ನಂತಹ ಪಾಶ್ಚಾತ್ಯ ಯುದ್ಧ ವಿಮಾನಗಳೊಡನೆ ಸ್ಪರ್ಧಿಸಬಲ್ಲ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ನಿರ್ಮಿಸುವ ಗುರಿ ಹೊಂದಿತ್ತು. ಆದರೆ, ಈ ಅಭಿವೃದ್ಧಿ ಯೋಜನೆ, ಏರ್ ಫ್ರೇಮಿನಲ್ಲಿನ ಬಿರುಕು, ಇಂಜಿನ್ ಸಮಸ್ಯೆಗಳು, ಮತ್ತು ಮಾದರಿ ವಿಮಾನದ ಪತನಗಳೂ ಸೇರಿದಂತೆ, ಹಲವಾರು ತೊಡಕುಗಳನ್ನು ಎದುರಿಸಿ, ಬಹಳಷ್ಟು ವಿಳಂಬ ಎದುರಿಸುವಂತಾಯಿತು.
ಸು-57 ಯುದ್ಧ ವಿಮಾನದ ಅತ್ಯಂತ ಮುಖ್ಯ ವೈಶಿಷ್ಟ್ಯವೆಂದರೆ, ಅದು ಹೊಂದಿರುವ ಸ್ಟೆಲ್ತ್ ತಂತ್ರಜ್ಞಾನ. ಇದು ವಿಮಾನಕ್ಕೆ ಶತ್ರುಗಳ ರೇಡಾರ್ ಕಣ್ಣಿನಿಂದ ತಪ್ಪಿಸಲು ನೆರವಾಗುತ್ತದೆ. ಈ ವಿಮಾನ ಶಕ್ತಿಯುತ ರೇಡಾರ್, ಇನ್‌ಫ್ರಾರೆಡ್ ಟ್ರ್ಯಾಕಿಂಗ್, ಮತ್ತು ಇಲೆಕ್ಟ್ರಾನಿಕ್ ಪ್ರತಿಕ್ರಮಗಳಂತಹ ಆಧುನಿಕ ತಂತ್ರಜ್ಞಾನದ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಶತ್ರುಗಳ ಸಂಕೇತಗಳ ದಿಕ್ಕುತಪ್ಪಿಸಲು ನೆರವಾಗುತ್ತವೆ.
ಇಂತಹ ಆಧುನಿಕ ತಂತ್ರಜ್ಞಾನಗಳು ಪೈಲಟ್‌ಗೆ ಯುದ್ಧರಂಗವನ್ನು ಹೆಚ್ಚು ಸ್ಪಷ್ಟವಾಗಿ ವೀಕ್ಷಿಸಲು ನೆರವಾಗಿ, ಏಕಕಾಲದಲ್ಲಿ ಹಲವು ಗುರಿಗಳ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಡುತ್ತವೆ.
ಸು-57 ಯುದ್ಧ ವಿಮಾನ ಒಂದು 30ಎಂಎಂ ಆಂತರಿಕ ಸ್ವಯಂಚಾಲಿತ ಕ್ಯಾನನ್ ಹೊಂದಿದ್ದು, ಕ್ಷಿಪಣಿಗಳು ಮತ್ತು ಬಾಂಬ್‌ಗಳನ್ನು ಒಯ್ಯಲು 12 ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದೆ. ವಿಮಾನ ಹೊಂದಿರುವ ಆಧುನಿಕ ಗುರಿ ಹಿಡಿಯುವ ವ್ಯವಸ್ಥೆಗಳಿಂದಾಗಿ ಇದು ಆಕಾಶದಲ್ಲಿ ಮತ್ತು ಭೂಮಿಯಲ್ಲಿರುವ ಗುರಿಗಳನ್ನು ನಿಖರವಾಗಿ ಗುರುತಿಸಿ ದಾಳಿ ನಡೆಸಬಲ್ಲದು. ಈ ಸಾಮರ್ಥ್ಯ ಇದನ್ನು ಅತ್ಯಂತ ಪರಿಣಾಮಕಾರಿ ಯುದ್ಧ ವಿಮಾನವನ್ನಾಗಿಸುತ್ತದೆ.
ಸು-57 ಇಂಜಿನ್ ಅತ್ಯಂತ ಸಮರ್ಥವಾಗಿದ್ದು, ಅಧಿಕ ಥ್ರಸ್ಟ್ ಟು ವೆಯ್ಟ್ ಅನುಪಾತವನ್ನು ಒದಗಿಸುತ್ತದೆ. ಆ ಮೂಲಕ ವಿಮಾನ ಸುಲಭವಾಗಿ ಸೂಪರ್‌ಸಾನಿಕ್ ವೇಗವನ್ನು ತಲುಪಿ, ಅಸಾಧಾರಣ ಚಲನೆಗಳನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ.
ಹೆಚ್ಚಿನ ಥ್ರಸ್ಟ್ ಟು ವೆಯ್ಟ್ ಅನುಪಾತ ಎಂದರೆ, ಸು-57ರ ಇಂಜಿನ್‌ಗಳು ಅದರ ತೂಕಕ್ಕಿಂತಲೂ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತವೆ. ಆ ಮೂಲಕ ವಿಮಾನ ಬಹಳ ಕಡಿಮೆ ಸಮಯದಲ್ಲಿ ಹೆಚ್ಚಿನ ವೇಗ, ಹೆಚ್ಚಿನ ಎತ್ತರವನ್ನು ಸಾಧಿಸಿ, ತೀಕ್ಷ್ಣ ತಿರುವುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಅದರೊಡನೆ, ಅತ್ಯಂತ ಹೆಚ್ಚಿನ ವೇಗದಲ್ಲೂ ವಿಮಾನ ಸುಲಲಿತವಾಗಿ ಚಲಿಸುತ್ತದೆ.
ಸು-57 ಆವೃತ್ತಿಗಳು
ಸು-57 (ಬೇಸ್‌ಲೈನ್ ಆವೃತ್ತಿ): ಸು-57 ಒಂದು ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನವಾಗಿದ್ದು, ರಷ್ಯಾದ ವಾಯುಪಡೆಗಾಗಿ ಸುಖೋಯಿ ಸಂಸ್ಥೆ ಇದನ್ನು ನಿರ್ಮಿಸಿದೆ. ಇದು ವಾಯು ಪಾರಮ್ಯ, ನಿಖರ ದಾಳಿ ಮತ್ತು ಕಣ್ಗಾವಲು (ಗುಪ್ತಚರ ಮಾಹಿತಿ ಕಲೆಹಾಕುವುದು ಮತ್ತು ಶತ್ರುಗಳ ಚಟುವಟಿಕೆಗಳನ್ನು ಗಮನಿಸುವುದು) ಕಾರ್ಯಾಚರಣೆಗಳಿಗಾಗಿ ನಿರ್ಮಾಣಗೊಂಡಿದೆ. ಇದು ಹೊಂದಿರುವ ಸ್ಟೆಲ್ತ್ ಸಾಮರ್ಥ್ಯ ಮತ್ತು ಹೈಟೆಕ್ ಸಿಸ್ಟಮ್‌ಗಳು ವಿಮಾನಕ್ಕೆ ತನ್ನ ಕಾರ್ಯಾಚರಣೆಗಳನ್ನು ಸುಲಭವಾಗಿ ನಡೆಸಲು ನೆರವಾಗುತ್ತವೆ.
ಸು-57ಇ (ರಫ್ತು ಆವೃತ್ತಿ): ಸು-57ಇ ಯುದ್ಧ ವಿಮಾನ ರಫ್ತು ಉದ್ದೇಶಕ್ಕಾಗಿ ನಿರ್ಮಿಸಿರುವ ಆವೃತ್ತಿಯಾಗಿದ್ದು, ಎಂಎಕೆಸ್-2019 ವೈಮಾನಿಕ ಪ್ರದರ್ಶನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇದನ್ನು ಅಂತಾರಾಷ್ಟ್ರೀಯ ಖರೀದಿದಾರರಿಗಾಗಿ ಅಭಿವೃದ್ಧಿ ಪಡಿಸಿದ್ದು, ಸ್ಟೆಲ್ತ್ ಮತ್ತು ಬಹುಪಾತ್ರದ ಸಾಮರ್ಥ್ಯಗಳನ್ನು ಉಳಿಸಿಕೊಂಡು, ರಫ್ತು ಮಾಡಲು ಬೇಕಾದ ನಿಯಮಾವಳಿಗಳನ್ನು ಪಾಲಿಸುತ್ತದೆ.
ಸು-57ಎಂ (ಅಭಿವೃದ್ಧಿ ಆವೃತ್ತಿ): ಸು-57ಎಂ ಯುದ್ಧ ವಿಮಾನ ಸು-57ರ ಸುಧಾರಿತ ಆವೃತ್ತಿಯಾಗಿದ್ದು, ಹೆಚ್ಚಿನ ಥ್ರಸ್ಟ್, ಇಂಧನ ದಕ್ಷತೆ ಮತ್ತು ನಿರಂತರ ಸೂಪರ್‌ಸಾನಿಕ್ ಹಾರಾಟಕ್ಕಾಗಿ ಇಜ್ಡೆ಼ಲಿಯ್ 30 ಇಂಜಿನ್‌ಗಳನ್ನು ಹೊಂದಿದೆ. ಇದು ಸುಧಾರಿತ ಏವಿಯಾನಿಕ್ಸ್ ಮತ್ತು ಇನ್ನಷ್ಟು ಉತ್ತಮ ಸ್ಟೆಲ್ತ್ ಸಾಮರ್ಥ್ಯಗಳನ್ನು ಹೊಂದಿರುವ ನಿರೀಕ್ಷೆಗಳಿವೆ.
ಸು-75 ಚೆಕ್‌ಮೇಟ್ (ಒಂಟಿ ಇಂಜಿನ್ ಆವೃತ್ತಿ): ಸು-75 ಚೆಕ್‌ಮೇಟ್ ಒಂದು ಹಗುರವಾದ, ಒಂಟಿ ಇಂಜಿನ್ ಯುದ್ಧ ವಿಮಾನವಾಗಿದ್ದು, ಸು-57ರ ವಿನ್ಯಾಸದಿಂದ ಪ್ರಭಾವಿತವಾಗಿದೆ. ಇದು ಕಡಿಮೆ ವೆಚ್ಚದಾಯಕ, ನಿರ್ವಹಿಸಲು ಸುಲಭವಾಗಿದ್ದು, ಸ್ಟೆಲ್ತ್ ಸಾಮರ್ಥ್ಯವನ್ನೂ ಗಳಿಸಿದೆ. ಇದು ಸು-57ರ ಹಗುರ ಆವೃತ್ತಿ ಎಂದು ಪರಿಗಣಿತವಾಗಿದ್ದು, ಅಂತಾರಾಷ್ಟ್ರೀಯ ಗ್ರಾಹಕರನ್ನು ಗುರಿಯಾಗಿಸಿದೆ.
ಎಫ್‌ಜಿಎಫ್ಎ (ಫಿಫ್ತ್ ಜನರೇಶನ್ ಫೈಟರ್ ಏರ್‌ಕ್ರಾಫ್ಟ್): ಎಫ್‌ಜಿಎಫ್ ಎನ್ನುವುದು ಸು-57 ಯುದ್ಧ ವಿಮಾನದ ಆಧಾರಿತವಾಗಿದ್ದು, ಭಾರತ ಮತ್ತು ರಷ್ಯಾಗಳ ಜಂಟಿ ನಿರ್ಮಾಣಕ್ಕಾಗಿ ಉದ್ದೇಶಿಸಲಾಗಿತ್ತು. ಇದನ್ನು ಭಾರತದ ಅವಶ್ಯಕತೆಗಳಿಗೆ ತಕ್ಕಂತಹ ಮಾರ್ಪಾಡುಗಳನ್ನು ಹೊಂದಿರುವ ಆವೃತ್ತಿಯನ್ನಾಗಿಸಲು ಉದ್ದೇಶಿಸಲಾಗಿತ್ತು. ಆದರೆ, ವೆಚ್ಚ ಹೆಚ್ಚಾಗುವ ಮತ್ತು ಪ್ರದರ್ಶನದ ಸಮಸ್ಯೆಗಳ ಕಾರಣದಿಂದ 2018ರಲ್ಲಿ ಇದನ್ನು ಕೈಬಿಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ