11 ಸಾವಿರ ಅಡಿ ಎತ್ತರದಲ್ಲಿದೆ ನೀಮು| ವ್ಯೂಹಾತ್ಮಕವಾಗಿ ಮಹತ್ವದ್ದು| ಕಾರ್ಗಿಲ್ ಯುದ್ಧ ವೇಳೆ ಪ್ರಮುಖ ಪಾತ್ರ ವಹಿಸಿದ್ದ ತಾಣ
ನೀಮು(ಜು.04): ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಭೇಟಿ ನೀಡಿದ್ದು ಲಡಾಖ್‌ನ ನೀಮುವಿನಲ್ಲಿ ಇರುವ ಸೇನಾ ನೆಲೆಗೆ. ಪ್ರಧಾನಿ ಭೇಟಿಯೊಂದಿಗೆ ಈ ಊರು ಈಗ ದಿಢೀರ್ ಪ್ರಸಿದ್ಧಿ ಪಡೆದುಕೊಂಡುಬಿಟ್ಟಿದೆ.
ಲಡಾಖ್‌ನ ಲೇಹ್ ಜಿಲ್ಲೆಯಲ್ಲಿದೆ ನೀಮು. ಲೇಹ್‌ನಿಂದ 35 ಕಿ.ಮೀ. ದೂರದಲ್ಲಿರುವ ಲಿಕಿರ್ ತಾಲೂಕಿನಲ್ಲಿದೆ. ಸಮುದ್ರ ಮಟ್ಟದಿಂದ 11 ಸಾವಿರ ಅಡಿ ಎತ್ತರದಲ್ಲಿದೆ. ಇದೊಂದು ದುರ್ಗಮ ಪ್ರದೇಶ. ಝಾನ್ಸ್‌ಕರ್ ಪರ್ವತ ಶ್ರೇಣಿಯಲ್ಲಿ ಸಿಂಧು ನದಿಯ ದಂಡೆಯಲ್ಲಿದೆ. ಈ ಊರಿನ ಬಳಿಯೇ ಸಿಂಧು ನದಿಯಲ್ಲಿ ಝಾನ್ಸ್‌ಕರ್ ನದಿಯು ಸಂಗಮವಾಗುತ್ತದೆ. ಕಾರ್ಗಿಲ್‌ಗೂ ನೀಮು ಸಮೀಪದಲ್ಲಿದ್ದು, 1999ರ ಕಾರ್ಗಿಲ್ ಸಮರದ ವೇಳೆ ಮಹತ್ವದ ಪಾತ್ರವನ್ನು ನಿರ್ವಹಿಸಿತ್ತು. ಹೀಗಾಗಿ ಇದು ವ್ಯೂಹಾತ್ಮಕವಾಗಿಯೂ ಮಹತ್ವದ ಪ್ರದೇಶ. ನೀಮುವಿನಲ್ಲಿ 1100 ಜನರು ವಾಸಿಸುತ್ತಿದ್ದಾರೆ.
ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್!
ಇಲ್ಲೊಂದು ಸಕಲ ಸೌಲಭ್ಯ ಹೊಂದಿದ 14 ಕೋರ್‌ನ ಬ್ರಿಗೇಡ್ ಕೇಂದ್ರ ಕಚೇರಿ ಇದೆ. ನಾಲ್ಕು ಹೆಲಿಕಾಪ್ಟರ್‌ಗಳನ್ನು ಇಳಿಸುವಷ್ಟುಹೆಲಿಪ್ಯಾಡ್ ಇದೆ. ಪ್ರಧಾನಿ ಅವರು ದಿಢೀರ್ ಭೇಟಿಗೆ ನಿರ್ಧರಿಸಿದಾಗ ಎಲ್ಲ ಸೌಲಭ್ಯ ಇರುವ ಕಾರಣ ಈ ಸ್ಥಳವನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ವಿವಾದ ಸೃಷ್ಟಿಯಾಗಿರುವ ಗಲ್ವಾನ್ ಕಣಿವೆಯಿಂದ 250 ಕಿ.ಮೀ. ಹಾಗೂ ಕಾರ್ಗಿಲ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿದೆ.