
ಪ್ರಯಾಗರಾಜ್(ಜ.29) ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆ ಹಿನ್ನಲ್ಲೆ ಕೋಟ್ಯಾಂತರ ಭಕ್ತರು ಸೇರಿದ್ದಾರೆ. ಅಮೃತ ಸ್ನಾನ ಮಾಡಲು ಭಕ್ತರು ಸರದಿ ಸಾಲಿನಲ್ಲಿ ತೆರಳಿದ್ದಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ತಡೆಗೋಡೆಗಳನ್ನು ದಾಟಿ ಅಮೃತಸ್ನಾನಕ್ಕೆ ತೆರಳಿದ್ದಾರೆ, ಇದು ನೂಕು ನುಗ್ಗಲಿಗೆ ಕಾರಣವಾಗಿದೆ. ಘಟನೆಯಿಂದ ಹಲವು ಭಕ್ತರು ಗಾಯಗೊಂಡಿದ್ದರೆ, 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಆದರೆ ಸ್ಥಳದಲ್ಲಿರುವ ಮೂಲಗಳ ಮಾಹಿತಿಗಳ ಪ್ರಕಾರ ಯಾವುದೇ ಭಕ್ತರು ಮೃತಪಟ್ಟಿಲ್ಲ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಕಾಲ್ತುಳಿತ ಪ್ರಕರಣ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಮಾತನಾಡಿದ್ದಾರೆ. ಘಟನೆ ಮಾಹಿತಿ ಪಡೆದು ಎಲ್ಲಾ ನೆರವಿಗೆ ಸೂಚಿಸಿದ್ದರೆ. ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು, ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಪರಿಸ್ಥಿತಿಯನ್ನು ಪ್ರಧಾನಿ ನಿರಂತರವಾಗಿ ಗಮನಿಸುತ್ತಿದ್ದಾರೆ.
ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ಮಂಗಳವಾರ-ಬುಧವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಅವಘಡ ಸಂಭವಿಸಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಭಕ್ತರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇತ್ತ 40ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಕುಂಭ ಮೇಳದ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿ ಆಕಾಂಕ್ಷಾ ರಾಣಾ ಪ್ರಕಾರ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದಾರೆ. ಇದರಿಂದ ತಡೆಗೋಡೆಗಳು ಮುರಿದಿದೆ ಎಂದಿದ್ದಾರೆ. ಇದರಿಂದಾಗಿ ಜನರು ಗಾಯಗೊಂಡರು. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಾರೀ ಜನಸಂದಣಿಯಿಂದಾಗಿ ಗಾಯಗೊಂಡವರನ್ನು ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
10 ಕೋಟಿ ಭಕ್ತರ ಆಗಮನ
ಬುಧವಾರ ಮೌನಿ ಅಮಾವಾಸ್ಯೆ. ಈ ಸಂದರ್ಭದಲ್ಲಿ ಅಮೃತ ಸ್ನಾನ ನಡೆಯಬೇಕಿತ್ತು. ಇದಕ್ಕಾಗಿ ಸುಮಾರು10 ಕೋಟಿ ಜನರು ಕುಂಭ ಮೇಳಕ್ಕೆ ಆಗಮಿಸಿದ್ದರು. ಅತಿಯಾದ ಜನಸಂದಣಿಯಿಂದಾಗಿ ಅವಘಡ ಸಂಭವಿಸಿದೆ. ಅನೇಕರಿಗೆ ಉಸಿರಾಟದ ಸಮಸ್ಯೆ ಎದುರಾಗಿದೆ, ಜನರು ಪ್ರಜ್ಞೆ ತಪ್ಪಿದರು. ಅಂತಹ ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. 40ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು.
ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನ ರದ್ದು
ಅವಘಡದಿಂದ ಎಲ್ಲಾ 13 ಅಖಾಡಗಳು ಸಾಧು ಸಂತರ ಶಾಹಿ ಸ್ನಾನವನ್ನು ರದ್ದುಗೊಳಿಸಿದ್ದಾರೆ. ಮುಂದಿನ ಅಮೃತ ಸ್ನಾನ ಬಸಂತ್ ಪಂಚಮಿಯಂದು ನಡೆಯಲಿದೆ. ಜನಸಂದಣಿಯನ್ನು ನಿಯಂತ್ರಿಸಲು ಎಲ್ಲಾ 30 ಪ್ಲಟೂನ್ ಸೇತುವೆಗಳನ್ನು ತೆರೆಯಲಾಗಿದೆ. ಪ್ರಯಾಗ್‌ರಾಜ್‌ಗೆ ಕುಂಭ ಮೇಳಕ್ಕೆ ಹೋಗುವವರ ಪ್ರವೇಶವನ್ನು ನಿಲ್ಲಿಸಲಾಗಿದೆ. ರಸ್ತೆಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ