
ಲಖನೌ: ಶ್ರೀಮಂತ ಕುಟುಂಬದ ಮಹಿಳೆಯರಿಗೆ ಉಚಿತ ತರಬೇತಿ ಹೆಸರಲ್ಲಿ ಜಿಮ್‌ಗೆ ಸೇರಿಸಿಕೊಂಡು ಬಳಿಕ ಅವರನ್ನು ಮತಾಂತರ ಮಾಡುವ ಮತ್ತು ಅವರೊಂದಿಗಿನ ಸಲುಗೆ ದೃಶ್ಯವನ್ನು ಹಣ ಸುಲಿಗೆ ಮಾಡಲು ಬಳಸುತ್ತಿದ್ದ ಜಾಲವೊಂದನ್ನು ಯುಪಿ ಪೊಲೀಸರು ಬಯಲಿಗೆಳೆದಿದ್ದಾರೆ. ಜೊತೆಗೆ ಈ ಜಾಲಕ್ಕೆ ವಿದೇಶಿ ನಂಟಿನ ಶಂಕೆಯೂ ವ್ಯಕ್ತವಾಗಿದೆ.
ಮಿರ್ಜಾಪುರದಲ್ಲಿ ಖದೀಮರ ತಂಡವೊಂದು ಜಿಮ್ ಮೂಲಕ ವಂಚನೆಯಲ್ಲಿ ತೊಡಗಿರುವ ಕುರಿತು ಮಹಿಳೆಯೊಬ್ಬರು ಪೊಲೀಸರಿಗೆ ಫೋನ್ ಮೂಲಕ ದೂರು ನೀಡಿದ್ದರು. ಆ ಬೆನ್ನಲ್ಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮೊಹಮ್ಮದ್ ಶೇಖ್ ಅಲಿ ಎಂಬ ಮುಖ್ಯ ಆರೋಪಿಯನ್ನು ಬಂಧಿಸಿದ್ದಾರೆ. ಆತನ ಮೊಬೈಲ್ ಪರಿಶೀಲಿಸಿದಾಗ ಕೆಜಿಎನ್1, ಕೆಜಿಎನ್2.0, ಕೆಜಿಎನ್3, ಐರನ್ ಫೈರ್ ಮತ್ತು ಫಿಟ್ನೆಸ್ ಕ್ಲಬ್‌ನಂತಹ ಜಿಮ್ ಸ್ಥಾಪಿಸಿರುವುದು ಕಂಡುಬಂದಿದೆ.
ಜೊತೆಗೆ ಈತನ ಖಾತೆಯಲ್ಲಿ ಭಾರೀ ಪ್ರಮಾಣದ ಹಣ ಜಮೆ ಆಗಿರುವುದು ಕಂಡುಬಂದಿದೆ. ಅಲ್ಲದೆ ಆರೋಪಿಯೊಬ್ಬನ ಮೊಬೈಲ್‌ನಲ್ಲಿ 50ಕ್ಕೂ ಹೆಚ್ಚು ಸ್ತ್ರೀಯರ ಫೋಟೋ ದೊರಕಿವೆ. ಜಿಲ್ಲೆಯ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿ ಪೊಲೀಸ್ ಪೇದೆ ಶಾಬಾದ್ ಸೇರಿ 6 ಆರೋಪಿಗಳನ್ನು ಬಂಧಿಸಲಾಗಿದೆ.
ಮತ್ತೊಬ್ಬ ಆರೋಪಿ ಇಮ್ರಾನ್ ಖಾನ್‌ನನ್ನು ಬಂಧಿಸಿದ ಬಳಿಕ ಆತ ದುಬೈ ಮತ್ತು ಮಲೇಷಿಯಾಕ್ಕೆ ಸಂಚರಿಸಿರುವುದು ತಿಳಿದುಬಂದಿದೆ. ಹೀಗಾಗಿ ವಂಚಕರ ಜಾಲಕ್ಕೆ ವಿದೇಶಗಳಿಂದಲೂ ಹಣ ಹಾಗೂ ಇತರ ನೆರವು ಹರಿದುಬರುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮುರಾದಾಬಾದ್: ಸಹಪಾಠಿಗೆ ಬುರ್ಖಾ ಧರಿಸುವಂತೆ ಮತ್ತು ಮತಾಂತರಗೊಳ್ಳುವಂತೆ 5 ಅಪ್ರಾಪ್ತ ಮುಸಲ್ಮಾನ ಬಾಲಕಿಯರು ಒತ್ತಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಮತಾಂತರ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕಳೆದ ಡಿ.12ರಂದು ಸೆರೆಯಾದ ವಿಡಿಯೋದಲ್ಲಿ ಹಿಂದೂ ಹುಡುಗಿಯೊಬ್ಬಳು ಬುರ್ಖಾ ಧರಿಸಿದ್ದು, 5 ಮುಸಲ್ಮಾನ ಹುಡುಗಿಯರು ಅದನ್ನು ಸರಿಪಡಿಸುತ್ತಿರುವುದನ್ನು ಕಾಣಬಹುದು. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬೆನ್ನಲ್ಲೇ, ‘ನನ್ನ ಸಹೋದರಿಯ ಸಹಪಾಠಿಗಳಾದ ಆ ಐವರು ಆಕೆಯ ಮತಾಂತರ ಮಾಡಲು ಯತ್ನಿಸುತ್ತಿದ್ದರು’ ಎಂದು ದಕ್ಷ್ ಚೌಧರಿ ಆರೋಪಿಸಿದ್ದರು.
2021ರ ಅಕ್ರಮ ಮತಾಂತರ ತಡೆ ಕಾಯ್ದೆಯ ಸೆಕ್ಷನ್ 3 ಮತ್ತು 5(ಎ) ಅಡಿಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು, ‘ಅವರೆಲ್ಲ ಹೊಟೆಲ್‌ಗೆ ಹೊರಟಿದ್ದು, ತನ್ನಣ್ಣ ನೋಡದಿರಲಿ ಎಂದು ಆಕೆ ಬುರ್ಖಾ ಧರಿಸಿದ್ದಿರಬಹುದು’ ಎಂಬ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ