ರಿಲಯನ್ಸ್‌ನಿಂದ ವಿಶ್ವದ ಅತಿದೊಡ್ಡ ಮೃಗಾಲಯ!

By Kannadaprabha NewsFirst Published Dec 21, 2020, 1:27 PM IST
Highlights

ರಿಲಯನ್ಸ್‌ನಿಂದ ವಿಶ್ವದ ಅತಿದೊಡ್ಡ ಮೃಗಾಲಯ| ಗುಜರಾತಲ್ಲಿ 2 ವರ್ಷದಲ್ಲಿ ಕಾರ್ಯಾರಂಭ| ಅಂಬಾನಿ ಕಿರಿಯ ಪುತ್ರನ ಕನಸಿನ ಝೂ

ಅಹಮದಾಬಾದ್(ಡಿ.21)‌: ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಗುಜರಾತಿನಲ್ಲಿ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯವೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ. ಉದ್ದೇಶಿತ ಮೃಗಾಲಯದಲ್ಲಿ ದೇಶ- ವಿದೇಶಗಳ ವಿವಿಧ ಪ್ರಾಣಿ, ಪಕ್ಷಿ, ಸರಿಸೃಪಗಳ 100 ಭಿನ್ನ ಪ್ರಭೇದಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂಬಾನಿ ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ ಅವರ ನೆಚ್ಚಿನ ಯೋಜನೆ ಇದಾಗಿದೆ. ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರವನ್ನು ರಿಲಯನ್ಸ್‌ ಕಂಪನಿ ಹೊಂದಿದ್ದು, ಅದರ ಸಮೀಪದಲ್ಲೇ ಇರುವ ಮೋತಿ ಖಾವ್ಡಿ ಎಂಬಲ್ಲಿ 280 ಎಕರೆ ಪ್ರದೇಶದಲ್ಲಿ ಝೂ ನಿರ್ಮಿಸಲು ಉದ್ದೇಶಿಸಲಾಗಿದೆ.

ಕೊರೋನಾ ಕಾರಣದಿಂದ ಈ ಯೋಜನೆ ವಿಳಂಬವಾಗಿದೆ. ಇನ್ನು ಮುಂದೆ ಯಾವುದೇ ಸಮಸ್ಯೆಯಾಗದಿದ್ದರೆ ಎರಡು ವರ್ಷಗಳಲ್ಲಿ ಮೃಗಾಲಯ ಕಾಯಾರಂಭ ಮಾಡಲಿದೆ ಎಂದು ರಿಲಯನ್ಸ್‌ ಕಂಪನಿಯ ನಿರ್ದೇಶಕ (ಕಾರ್ಪೋರೆಟ್‌ ವ್ಯವಹಾರ)ರಾದ ಪರಿಮಳ ನಾಥವಾನಿ ಅವರು ತಿಳಿಸಿದ್ದಾರೆ. ಈ ಮೃಗಾಲಯಕ್ಕೆ ‘ಗ್ರೀನ್ಸ್‌ ಝವಲಾಜಿಕಲ್‌ ರೆಸ್ಕು್ಯ ಅಂಡ್‌ ರಿಹಾಬಿಲಿಟೇಷನ್‌ ಕಿಂಗ್‌ಡಮ್‌’ ಎಂದು ನಾಮಕರಣ ಮಾಡಲಾಗುತ್ತದೆ. ಝೂ ಸ್ಥಾಪನೆಗೆ ಬೇಕಾದ ಎಲ್ಲ ಅನುಮತಿಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳಿಂದ ಪಡೆಯಲಾಗಿದೆ ಎಂದು ವಿವರಿಸಿದ್ದಾರೆ.

click me!