
ಕೋಲ್ಕತ್ತಾ (ಏ.22): ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಕೋಲ್ಕತ್ತಾ ಹೈಕೋರ್ಟ್ ಸೋಮವಾರ ಮಹಾಪ್ರಹಾರ ನಡೆಸಿದೆ. 2016ರಲ್ಲಿ ನೇಮಕವಾದ ಎಲ್ಲಾ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ನೇಮಕಾತಿಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದು ಮಾಡಿದೆ. ಪಶ್ಚಿಮ ಬಂಗಾಳ ಸ್ಕೂಲ್ ಸರ್ವೀಸ್ ಕಮೀಷನ್ (ಡಬ್ಲ್ಯುಬಿಎಸ್‌ಸಿಸಿ) ನೇತೃತ್ವದಲ್ಲಿ ನಡೆದ ಈ ಪರೀಕ್ಷೆಗಳು ಸಂಪೂರ್ನ ಅಕ್ರಮವಾಗಿತ್ತು. ಅಂದಾಜು 25,753 ಶಿಕ್ಷಕರು ಹಾಗೂ ಸಿಬ್ಬಂದಿ ನೇಮಕಾತಿಯನ್ನು ರದ್ದು ಮಾಡಿ ತೀರ್ಪು ನೀಡಿದೆ. ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಕ್ರಮವಾಗಿ (ಖಾಲಿ ಒಎಂಆರ್ ಶೀಟ್) ನೇಮಕಗೊಂಡಿರುವ ಶಾಲಾ ಶಿಕ್ಷಕರಿಗೆ ನಾಲ್ಕು ವಾರಗಳಲ್ಲಿ ತಮ್ಮ ವೇತನವನ್ನು ಹಿಂದಿರುಗಿಸಬೇಕು ಎಂದು ಹೇಳಿದೆ. ಈ ಶಿಕ್ಷಕರಿಂದ ಹಣ ವಸೂಲಿ ಮಾಡುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ. 2016 ರಿಂದ 2024ರವರೆಗೆ ಅಂದರೆ ಈ ಶಿಕ್ಷಕರು ಹಾಗೂ ಸಿಬ್ಬಂದಿಗಳು ಎಂಟು ವರ್ಷದ ವೇತನವನ್ನು ಸರ್ಕಾರಕ್ಕೆ ವಾಪಾಸ್ ಮಾಡಬೇಕಾಗಿದೆ.
ರದ್ದಾದ ನೇಮಕಾತಿ ಘಟಕವು, 2016 ರಲ್ಲಿ WBSC ಪ್ರವೇಶ ಪರೀಕ್ಷೆಯ ಮೂಲಕ ಬಂಗಾಳದ ವಿವಿಧ ರಾಜ್ಯ-ಸರ್ಕಾರ-ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಗೊಂಡ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಎಲ್ಲಾ ನೇಮಕಾತಿಗಳನ್ನು ಒಳಗೊಂಡಿದೆ. ನಡೆಸಲಾಗಿತುವ ನೇಮಕಾತಿ ಪ್ರವೇಶ ಪರೀಕ್ಷೆಯ 23 ಲಕ್ಷ ಓಎಂಆರ್ ಹಾಳೆಗಳನ್ನು (ಪರೀಕ್ಷಾ ಪತ್ರಿಕೆ) ಮರು ಮೌಲ್ಯಮಾಪನ ಮಾಡಲು ಪೀಠವು ಆದೇಶಿಸಿದೆ.
ಆದೇಶಕ್ಕೆ ತಡೆ ನೀಡುವಂತೆ ಕೆಲವು ಮೇಲ್ಮನವಿದಾರರು ಮಾಡಿದ ಮನವಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲು ಮತ್ತು ಮೂರು ತಿಂಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಪೀಠವು ಸಿಬಿಐಗೆ ಸೂಚನೆ ನೀಡಿದೆ. ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು WBSSC ಗೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ ನೀಡಿದೆ.
24,000 ಕ್ಕೂ ಹೆಚ್ಚು ಶಿಕ್ಷಕರ ಖಾಲಿ ಹುದ್ದೆಗಳಿಗೆ WBSSC ನಡೆಸಿದ 2016 ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆಗೆ (SLST) 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಬಳಿಕ ಒಂದು ಸಾವಿರಕ್ಕೂ ಅಧಿಕ ಬೋಧಕೇತರ ಸಿಬ್ಬಂದಿಗಳನ್ನೂ ಆಯ್ಕೆ ಮಾಡಲಾಗಿತ್ತು. ತೀರ್ಪಿಗಾಗಿ ನ್ಯಾಯಾಲಯದ ಆವರಣದ ಹೊರಗೆ ಕಾದು ಕುಳಿತಿದ್ದ ನೂರಾರು ಉದ್ಯೋಗಾಕಾಂಕ್ಷಿಗಳು, ತೀರ್ಪು ಹೊರಬೀಳುತ್ತಿದ್ದಂತೆಯೇ ಸಂಭ್ರಮಿಸಿದ್ದಾರೆ.
ಏನಿದು ನೇಮಕಾತಿ ಹಗರಣ: ಇಲ್ಲಿವೆ ಇದರ ಸಂಪೂರ್ಣ ಸುದ್ದಿಗಳು
ಮಾರ್ಚ್ 20 ರಂದು ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಕ್ತಾಯಗೊಳಿಸಿತ್ತು ಮತ್ತು ತೀರ್ಪನ್ನು ವಿಭಾಗೀಯ ಪೀಠವು ಕಾಯ್ದಿರಿಸಿತ್ತು. ನ್ಯಾಯಾಲಯದ ಹಿಂದಿನ ಆದೇಶದ ಮೇರೆಗೆ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿತ್ತು. ಕೇಂದ್ರದ ಏಜೆನ್ಸಿಯು 2022 ರಲ್ಲಿ ಮಾಜಿ ಬಂಗಾಳ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವರನ್ನು ಇದೇ ಕಾರಣಕ್ಕಾಗಿ ಬಂಧನ ಮಾಡಿತ್ತು. ಈ ವೇಳೆ ಅವರ ನಿವಾಸಗಳಲ್ಲಿ ಹಣದ ಬೆಟ್ಟವೇ ಕಂಡುಬಂದಿತ್ತು. ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ ತಮ್ಲುಕ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೂಲಿ ಅವರು ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದ್ದರು.
'ಹೇಳು ಪಾರ್ಥ..' ಎಂದು ಚಟರ್ಜಿಗೆ ಗಂಟುಬಿದ್ದಿದ್ಯಾಕೆ ED, ಅಷ್ಟಕ್ಕೂ ಯಾರೀಕೆ ಅರ್ಪಿತಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ