
ಮುಂಬೈ(ಫೆ.18): 26/11 ಮುಂಬೈ ದಾಳಿಯಲ್ಲಿ ಸೆರೆಸಿಕ್ಕು ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಯೋತ್ಪಾದಕ ಅಜ್ಮಲ್ ಕಸಬ್’ಗೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಮುಂಬೈ ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ಪಾಕ್ ಹಾಗೂ ISI ಸೇರಿ ಭಾರೀ ಸಂಚು ರೂಪಿಸಿದ್ದರು ಎಂದು ರಾಕೇಶ್ ಮರಿಯಾ ತಮ್ಮ ‘ಲೆಟ್ ಮಿ ಸೇ ಇಟ್ ನೌ' ಎಂಬ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದಾರೆ.
ಅಜ್ಮಲ್ ಕಸಬ್ ಬೆಂಗಳೂರಿನ ಸಮೀರ್ ಚೌಧರಿ ಎಂಬಂತೆ ಬಿಂಬಿಸಲು ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಿರುವ ರಾಕೇಶ್ ಮರಿಯಾ, ಉದ್ದೇಶಪೂರ್ವಕವಾಗಿಯೇ ಆತನ ಕೈಯಲ್ಲಿ ಕೆಂಪು ದಾರವನ್ನು ಕಟ್ಟಲಾಗಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಎಲ್‌ಇಟಿ ಪಾಕ್ ಪ್ರಚೋದಿತ ಭಯೋತ್ಪಾದನೆ ದಾಳಿಯನ್ನು "ಹಿಂದೂ ಭಯೋತ್ಪಾದನೆ" ಎಂದು ಬಿಂಬಿಸುವ ಯತ್ನ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಪಾಕ್ ಹಾಗೂ ISI ಕೈವಾಡ ಇತ್ತು ಎಂದು ರಾಕೇಶ್ ಮರಿಯಾ ಸ್ಪಷ್ಟಪಡಿಸಿದ್ದಾರೆ.
ಪಾಕ್ ಹಾಗೂ ISI ಕಸಬ್’ನನ್ನು ಜೈಲಿನಲ್ಲಿಯೇ ಮುಗಿಸಲು ಯತ್ನ ನಡೆಸಿದ್ದವು. ದಾವೂದ್ ಇಬ್ರಾಹಿಂ ನೇತೃತ್ವದ ‘ಡಿ ಕಂಪನಿ’ಗೆ ಕಸಬ್’ನನ್ನು ಮುಗಿಸುವ ಕೆಲಸವನ್ನು ವಹಿಸಲಾಗಿತ್ತು ಎಂದು ರಾಕೇಶ್ ತಮ್ಮ ಆತ್ಮಕತೆಯಲ್ಲಿ ಬರೆದಿದ್ದಾರೆ.
ಎಲ್ಲವೂ ಯೋಜನೆಯ ಪ್ರಕಾರ ನಡೆದಿದ್ದರೆ, ಕಸಬ್ ಬೆಂಗಳೂರಿನ ಸಮೀರ್ ಚೌಧರಿಯಾಗಿ ಸಾಯುತ್ತಿದ್ದ. ಈ ಮೂಲಕ ಪಾಕ್ ಹಾಗೂ ISI ಹಿಂದೂ ಭಯೋತ್ಪಾದನೆ ಮುಂದು ಮಾಡಿ ಜಾರಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ಛಾಯಾಚಿತ್ರದಲ್ಲಿ ಕಸಬ್ ತನ್ನ ಬಲ ಮಣಿಕಟ್ಟಿನ ಮೇಲೆ ಕೆಂಪು ದಾರವನ್ನು ಧರಿಸಿರುವುದು ಕಂಡುಬಂದಿದೆ. ಇದು ಪವಿತ್ರ ಹಿಂದೂ ದಾರ ಎಂದು ನಂಬಿಸಲಾಗಿತ್ತು. 26/11 ದಾಳಿಯನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಕ್ಕೆ ಇದು ಸಾಕ್ಷಿ ಎಂದು ರಾಕೇಶ್ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 26, 2008 ರಂದು ಮುಂಬೈನಲ್ಲಿ ಪಾಕಿಸ್ತಾನದ 10 ಭಾರಿ ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ದಾಳಿಯ ವೇಳೆ ಜೀವಂತವಾಗಿ ಸೆರೆಹಿಡಿಯಲ್ಪಟ್ಟ ಏಕೈಕ ಭಯೋತ್ಪಾದಕ ಕಸಬ್’ನನ್ನು 2012 ರ ನವೆಂಬರ್ 21 ರಂದು ಗಲ್ಲಿಗೇರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ