ಕೃಷಿ ಕುಟುಂಬದ ವಿದ್ಯಾರ್ಥಿನಿ ನೆರವಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

By Kannadaprabha NewsFirst Published Dec 31, 2021, 7:28 AM IST
Highlights

* ಉ.ಪ್ರದ ನಂದಿನಿ ವಿದ್ಯಾಭ್ಯಾಸಕ್ಕೆ ನೆರವಿನ ಭರವಸೆ

* ಕೃಷಿ ಕುಟುಂಬದ ವಿದ್ಯಾರ್ಥಿನಿ ನೆರವಿಗೆ ಕೇಂದ್ರ ಸಚಿವ ರಾಜೀವ್‌

ಮೇರಠ್‌ (ಡಿ31).): ಮಣ್ಣಿಗೆ ಸೂಕ್ತವಾದ ಬೆಳೆಯನ್ನು ಗುರುತಿಸುವ ಸ್ಮಾರ್ಟ್‌ ಡೇಟಾ ಆಧಾರಿತ ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ (ಕೃತಕ ಬುದ್ಧಿಮತ್ತೆ) ರೂಪಿಸಿದ ವಿದ್ಯಾರ್ಥಿನಿ ಉತ್ತರ ಪ್ರದೇಶದ ನಂದಿನಿ ಕುಶ್ವಾಹ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಘೋಷಿಸಿದ್ದಾರೆ.

ರೈತ ಕುಟುಂಬದ ನಂದಿನಿ ಉತ್ತರ ಪ್ರದೇಶದ ಲಲಿತ್‌ಪುರ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಂದಿನಿ ಮಣ್ಣಿನಲ್ಲಿರುವ ವಿವಿಧ ಪೋಷಕಾಂಶಗಳನ್ನು ವಿಶ್ಲೇಷಿಸುವ ಮೂಲಕ ಭೂಮಿಯ ಫಲವತ್ತತೆ ಮತ್ತು ಅದಕ್ಕೆ ಸೂಕ್ತವಾದ ಬೆಳೆಯನ್ನು ಗುರುತಿಸುವ ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಗುರುವಾರ ಉತ್ತರ ಪ್ರದೇಶದ ಮೇರಠ್‌ನಲ್ಲಿ 5ನೇ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ ಉದ್ಘಾಟಿಸಿದ ರಾಜೀವ್‌ ಚಂದ್ರಶೇಖರ್‌, ‘ತಂತ್ರಜ್ಞಾನ ಜನರ ಬದುಕನ್ನೇ ಬದಲಾಯಿಸುತ್ತಿದೆ. ಯುವ ಜನರು ಹೆಚ್ಚೆಚ್ಚು ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ’ ಎಂದರು. ಇದೇ ವೇಳೆ ನಂದಿನಿ ಸಾಧನೆಯನ್ನು ಉಲ್ಲೇಖಿಸಿ, ‘ಇವರೇ ಡಿಜಿಟಲ್‌ ಉತ್ತರ ಪ್ರದೇಶದ ರಾಯಭಾರಿಗಳು. ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ಇಂಥ ಪ್ರತಿಭೆಗಳ ಪರವಾಗಿ ಇರುತ್ತದೆ’ ಎಂದು ಹೇಳಿದರು.

ನಂತರ ಆಕೆಗೆ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ ಫೋನ್‌ ನೀಡಿದರು. ಜೊತೆಗೆ ಕಾಲೇಜುಮಟ್ಟದ ವರೆಗೂ ಶಿಕ್ಷಣಕ್ಕೆ ಸಂಪೂರ್ಣ ನೆರವಾಗುವುದಾಗಿ ತಿಳಿಸಿದರು.

click me!