
ಜೈಪುರ(ನ.21): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ಹಾಗೂ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ (Congress Leader Sachin Pilot) ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ರಾಜಸ್ಥಾನದಲ್ಲಿ (Rajasthan) ಶನಿವಾರ ಮಹತ್ವದ ಬೆಳವಣಿಗೆ ನಡೆದಿದೆ. ಗೆಹ್ಲೋಟ್ ಅವರು ಶನಿವಾರ ಸಂಜೆ ತಮ್ಮ ಸಂಪುಟದ ಎಲ್ಲಾ 21 ಸಚಿವರ ರಾಜೀನಾಮೆ (Resignation) ಪಡೆದಿದ್ದಾರೆ. ಭಾನುವಾರ ಅಥವಾ ಸೋಮವಾರ ಹೊಸ ಸಂಪುಟ ರಚನೆ ಆಗುವ ಸಾಧ್ಯತೆ ಇದೆ.
ನಿಯಮಾನುಸಾರ ಸಂಪುಟದಲ್ಲಿ 30 ಮಂದಿ ಸೇರಲು ಅವಕಾಶವಿದೆ. ಇದರಲ್ಲಿ 6 ಮಂದಿ ಪೈಲಟ್ ಬೆಂಬಲಿಗರು ಮತ್ತು ಕಾಂಗ್ರೆಸ್ ಜತೆ ವಿಲೀನವಾಗಿರುವ ಬಿಎಸ್‌ಪಿಯ (BSP) ಕೆಲ ಶಾಸಕರಿಗೂ ನೂತನ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಅಲ್ಲದೆ ಪೈಲಟ್ ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ (national Politics) ಮಹತ್ವದ ಹುದ್ದೆ ಸಿಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಸಭೆಯ ಬಗ್ಗೆ ಮಾಹಿತಿ ನೀಡಿದ ನಿರ್ಗಮಿತ ಸಚಿವ ಪ್ರತಾಪ್ ಸಿಂಗ್ (Pratap Singh), ‘ಗೆಹ್ಲೋಟ್ ನಿವಾಸದಲ್ಲಿ ಶನಿವಾರ 2 ಗಂಟೆಗೆ ಆರಂಭವಾದ ಸಭೆಯು ಸಂಜೆ 7 ಗಂಟೆಗೆ ಮುಕ್ತಾಯವಾಗಿದ್ದು, ಈ ವೇಳೆ ಎಲ್ಲಾ ಸಚಿವರು ರಾಜೀನಾಮೆ ಸಲ್ಲಿಸಿದ್ದೇವೆ. ಹೊಸ ಸಚಿವ ಸಂಪುಟದಲ್ಲಿ ಯಾವೆಲ್ಲಾ ನಾಯಕರಿಗೆ ಸ್ಥಾನಮಾನ ನೀಡಬೇಕು ಎಂದು ಮುಖ್ಯಮಂತ್ರಿ ಮತ್ತು ಹೈಕಮಾಂಡ್ (High Command) ತೀರ್ಮಾನಿಸಲಿದೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ’ ಎಂದರು.
ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕನ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ ಸಿಂಗ್ ದೋತಸ್ರಾ ಸೇರಿ ಇನ್ನಿತರರು ಇದ್ದರು.
ಬಿಕ್ಕಟ್ಟೇನು?:
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದಾಗಿನಿಂದಲೂ ಗೆಹ್ಲೋಟ್ ಮತ್ತು ಪೈಲಟ್ (Gehlot Vs Pilot) ಬಣಗಳ ಮಧ್ಯೆ ಅಧಿಕಾರ ಸಂಘರ್ಷವಿತ್ತು. ಪೈಲಟ್ ಬಣದ ಹಲವು ಶಾಸಕರು ಸಚಿವಾಕಾಂಕ್ಷಿಗಳಾಗಿದ್ದರು. ಪೈಲಟ್ ದೆಹಲಿಗೆ ಭೇಟಿ ನೀಡಿ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ ಇನ್ನಿತರ ನಾಯಕರನ್ನು ಭೇಟಿ ನೀಡಿ ತಮ್ಮ ಬೆಂಬಲಿಗರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಬಳಿಕ ಗೆಹ್ಲೋಟ್ ಅವರು ಸೋನಿಯಾ ಸೇರಿ ಇನ್ನಿತರ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದರು.
- ಪೈಲಟ್ ಬಣದ 6 ಸಚಿವರಿಗೆ ಗೆಹ್ಲೋಟ್ ಸಂಪುಟದಲ್ಲಿ ಸ್ಥಾನ?
- ಪೈಲಟ್‌ಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆ ನಿರೀಕ್ಷೆ
- ಗೆಹ್ಲೋಟ್-ಪೈಲಟ್ ಸಂಘರ್ಷಕ್ಕೆ ‘ಕೈ’ಕಮಾಂಡ್ ತೇಪೆ
ಮತ್ತೆ ಗೆಹ್ಲೋಟ್ ಬದಲಾವಣೆ ಗುಸುಗುಸು
ರಾಜಸ್ಥಾನ ಸರ್ಕಾರದ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಯುತ್ತಿರುವ ನಡುವೆಯೇ ನಾಯಕತ್ವ ಬದಲಾವಣೆಯ ಗುಲ್ಲು ಮತ್ತೆ ಎದ್ದಿದೆ. ಶುಕ್ರವಾರ ಶಾಸಕ ಹಾಗೂ ಯುವ ನಾಯಕ ಸಚಿನ್ ಪೈಲಟ್ ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಆಡಿದ ಮಾತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬದಲಾವಣೆಯ ಊಹಾಪೋಹಕ್ಕೆ ನಾಂದಿ ಹಾಡಿವೆ.
ಭೇಟಿ ಬಳಿಕ ಮಾತನಾಡಿದ ಸಚಿನ್ ಪೈಲಟ್, ‘ಭೇಟಿ ವೇಳೆ ರಾಜ್ಯದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಏನಾದರೂ ‘ಬದಲಾವಣೆ’ ಅಗತ್ಯವಿದ್ದರೆ ಅದನ್ನು ಮಾಡಲೇಬೇಕು’ ಎಂದರು. ಇದು ಕುತೂಹಲ ಕೆರಳಿಸಿದೆ.
ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷವು 2023ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದೆ’ ಎಂದು ಸ್ಪಷ್ಟಪಡಿಸಿದರು.
ಗುರುವಾರವಷ್ಟೇ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರನ್ನು ದೆಹಲಿಗೆ ಕರೆಸಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತುಕತೆ ನಡೆಸಿದ್ದರು. ಎರಡೂ ಬಣಗಳು ರಾಜ್ಯದಲ್ಲಿ ರಾಜಕೀಯ ಮೇಲಾಟ ನಡೆಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ