ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ವಿರುದ್ಧ ಶುಕ್ರವಾರ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದಿದೆ. ಕರ್ನಾಟಕದ ಪ್ರಮುಖ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು, ಕೆಲವೆಡೆ ಆಕ್ರೋಶ, ಹಿಂಸಾಚಾರಕ್ಕೆ ತಿರುಗಿದೆ.
ಬೆಂಗಳೂರು/ನವದೆಹಲಿ(ಜೂನ್. 10): ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮ ಅವರ ಬಂಧನಕ್ಕೆ ಆಗ್ರಹಿಸಿ, ದೇಶಾದ್ಯಂತ ಶುಕ್ರವಾರ ಭಾರೀ ಪ್ರತಿಭಟನೆ ನಡೆದಿದೆ. ಕರ್ನಾಟಕದ ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಪ್ರಾರ್ಥನೆ ಬಳಿಕ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದ್ದು ಕೆಲವೆಡೆ ಹಿಂಸಾಚಾರವೂ ನಡೆದಿದೆ.
ಈಗಾಗಲೇ ಬಿಜೆಪಿ ನೂಪುರ್ ಶರ್ಮ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಿ ಕ್ರಮ ಕೈಗೊಂಡಿದ್ದ ನಡುವೆಯೂ ಮುಸ್ಲೀಮರು ಆಕೆಯ ಬಂಧನಕ್ಕೆ ಒತ್ತಾಯಿಸಿದ್ದಾರರೆ. ನೂಪುರ್ ಶರ್ಮಾ ಅವರೊಂದಿಗೆ ನವೀನ್ ಜಿಂದಾಲ್ ವಿರುದ್ಧವೂ ಪ್ರತಿಭಟನೆ ನಡೆದಿದೆ. ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ದೆಹಲಿಯ ಮಸೀದಿಯ ಎದುರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಪ್ರವಾದಿಯ ಅವಹೇಳನ ಮಾಡಿದವರ ತಲೆ ಕಡಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯ ಶಹಾಪುರದಲ್ಲಿ ಪ್ರತಿಭಟನೆ: ಯಾದಗಿರಿ ಜಿಲ್ಲೆಯ ಶಹಾಪುರದ ತಹಸೀಲ್ಡಾರ್ ಕಚೇರಿ ಮುಂದೆ ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿದೆ. ನೂರಾರು ಮುಸ್ಲಿಂ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ನೂಪುರ್ ಶರ್ಮ ಹಾಗೂ ನವೀನ್ ಜಿಂದಾಲ್ ಇಬ್ಬರನ್ನೂ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ತಹಸೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಪ್ರತಿಭಟನಾಕರರು ಮನವಿ ಸಲ್ಲಿಸಿದ್ದಾರೆ.
ದೇಶದ ಅತೀದೊಡ್ಡ ಮಸೀದಿಗಳಲ್ಲಿ ಒಂದಾಗಿರುವ ಜಾಮಾ ಮಸೀದಿಯ ಹೊರಗಡೆ ಶುಕ್ರವಾರದ ಪ್ರಾರ್ಥನೆಯ ಬಳಿಕ ದೊಡ್ಡ ಪ್ರತಿಭಟನೆಯಲ್ಲಿ ನಡೆಸಲಾಯಿತು. ನೂಪುರ್ ಶರ್ಮ ಅವರನ್ನು ಬಂಧಿಸುವಂತೆ ಆಗ್ರಹಿಸಿದ ಸಾವಿರಾರು ಪ್ರತಿಭಟನಾನಿರತರನ್ನು ಪೊಲೀಸರು ಅಂದಾಜು 1 ಗಂಟೆಗಳ ಬಳಿಕ ಚದುರಿಸಿದ್ದಾರೆ.
ಜಾಮಾ ಮಸೀದಿಯ ಶಾಹಿ ಇಮಾಮ್ ತಾವು ಈ ಪ್ರತಿಭಟನೆಗೆ ಕರೆಕೊಟ್ಟಿರಲಿಲ್ಲ ಎಂದಿದ್ದಾರೆ. "ಪ್ರತಿಭಟನೆಯನ್ನು ಯಾರು ಆರಂಭಿಸಿದರು ಎನ್ನುವುದು ನಮಗೆ ತಿಳಿದಿಲ್ಲ. ಶುಕ್ರವಾರದ ಪ್ರಾರ್ಥನೆಯ ಬಳಿಕ, ಜನಸಮೂಹದಲ್ಲಿದ್ದ ಕೆಲ ವ್ಯಕ್ತಿಗಳು ನೂಪುರ್ ಶರ್ಮ ವಿರುದ್ಧ ಸ್ಲೋಗನ್ ಕೂಗಿದ್ದಾರೆ. ಬಳಿಕ ಅವರನ್ನು ಚದುರಿಸಲಾಗಿತ್ತು. ಪ್ರಸ್ತುತ ಈ ಪ್ರದೇಶದಲ್ಲಿ ಪರಿಸ್ಥಿತಿ ತಿಳಿಸಿಯಾಗಿದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಪ್ರತಿಕೃತಿ ನಡುರಸ್ತೆಯಲ್ಲೇ ನೇತು ಹಾಕಿದ ಕಿಡಿಗೇಡಿಗಳು: ಹಿಂದೂಪರ ಸಂಘಟನೆಗಳ ಆಕ್ರೋಶ
ಉತ್ತರ ಪ್ರದೇಶದ ಶಹರಣಪುರ, ಮೊರಾದಾಬಾದ್ ಮತ್ತು ಪ್ರಯಾಗ್ ರಾಜ್ ಸೇರಿದಂತೆ ಹಲವೆಡೆ ಪ್ರತಿಭಟನಾಕಾರರು ರಸ್ತೆಗೆ ಇಳಿದಿದ್ದು, ಕೆಲವೆಡೆ ಪೊಲೀಸರ ಮೇಲೂ ಹಲ್ಲೆ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಉತ್ತರ ಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿರುವ ಪ್ರಯಾಗ್ ರಾಜ್ ನಲ್ಲಿ ಕಲ್ಲು ತೂರಾಟ ನಡೆದಿದ್ದು, ಪ್ರತಿಭಟನಾನಿರತರನ್ನು ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್ ಕೂಡ ಮಾಡಿದ್ದಾರೆ. ಲಖನೌ, ಕಾನ್ಪುರ, ಫಿರೋಜಾಬಾದ್ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆ ನೀಡಿದ್ದು, ಬಂದೋಬಸ್ತ್ ಗಾಗಿ ಪರೇಡ್ ಅನ್ನೂ ನಡೆಸಿದ್ದಾರೆ. ಕಾನ್ಪುರದಲ್ಲಿ ಕಳೆದ ವಾರ ಇದೇ ವಿಚಾರಕ್ಕೆ ನಡೆದ ಗಲಭೆಯಲ್ಲಿ 40 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ
ಉಳಿದಂತೆ ಕೋಲ್ಕತದ ಪಾರ್ಕ್ ಸರ್ಕಸ್ ಪ್ರದೇಶ, ಹೈದರಾಬಾದ್ ನ ಚಾರ್ ಮಿನಾರ್, ಲೂಧಿಯಾನಾ, ಅಹಮದಾಬಾದ್, ನವೀ ಮುಂಬೈ, ಶ್ರೀಗರದ ಕೆಲವು ಪ್ರದೇಶಗಳಲ್ಲೂ ಪ್ರತಿಭಟನೆ ನಡೆಸಲಾಗಿದ್ದು, ನೂಪುರ್ ಶರ್ಮ ವಿರುದ್ಧ ಘೋಷಣೆ ಕೂಗಲಾಗಿದೆ. ಇನ್ನು ಜಾರ್ಖಂಡ್ ನಲ್ಲಿ ದೇವಸ್ಥಾನಕ್ಕೆ ನುಗ್ಗಲು ಮುಸ್ಲಿಮರು ಪ್ರಯತ್ನಿಸಿದ್ದಾರೆ. ಈ ವೇಳೆ ಅವರನ್ನು ತಡೆದ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಇದರ ಬೆನ್ನಲ್ಲಿ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ನಡೆದಿದೆ.
ನೂಪುರ್ ಶರ್ಮ ಹಾಗೂ ನವೀನ್ ಜಿಂದಾಲ್ ಅವರ ಕಾಮೆಂಟ್ ಗಳ ಕುರಿತಾಗಿ ದೆಹಲಿ ಪೊಲೀಸ್ ಎರಡು ವಾರಗಳ ಬಳಿಕ ದೂರು ದಾಖಲಿಸಿದ್ದರು. ಅದರೊಂದಿಗೆ ಹೈದರಾಬಾದ್ ಮೂಲದ ರಾಜಕಾರಣಿ ಅಸಾದುದ್ದೀನ್ ಓವೈಸಿ ಪತ್ರಕರ್ತೆ ಸಾಬಾ ನಖ್ವಿ ಕೂಡ ಜನರನ್ನು ವಿಭಜಿಸುವಂತ ಕಾಮೆಂಟ್ ಗಳ ಮೂಲಕ ಗಲಭೆಯನ್ನು ಪ್ರಚೋದಿಸಿದ್ದಾರೆ ಎಂದು ದೂರು ದಾಖಲು ಮಾಡಿದ್ದಾರೆ.