Padmashrre Mahalinga Naik : ಮಹಾಲಿಂಗ ನಾಯ್ಕರ ಗುಣಗಾನ ಮಾಡಿದ ಪಿಎಂ ಮೋದಿ

By Kannadaprabha News  |  First Published Jan 31, 2022, 3:37 AM IST


* ಅಸಾಮಾನ್ಯ ಕನ್ನಡಿಗ ಮಹಾಲಿಂಗ ನಾಯ್ಕಗೆ ಪಿಎಂ ಮೋದಿ ಮೆಚ್ಚುಗೆ

*  ಇವರ ಸಾಧನೆ ಎಲ್ಲರಿಗೂ ಬೆರಗು, ಮನ್‌ ಕಿ ಬಾತ್‌ನಲ್ಲಿ ಶ್ಲಾಘನೆ

* ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರವಾದ ಭಗೀರಥ
* ಸುರಂಗ ತೋಡಿ ನೀರು ಹರಿಸಿದ್ದ  ಕಾಯಕ ಯೋಗಿ


ನವದೆಹಲಿ(ಜ. 31)  ಬೋಳು ಗುಡ್ಡದಲ್ಲಿ 7 ಸುರಂಗ ತೋಡಿ ನೀರು ತಂದು ಕೃಷಿ ಮಾಡುತ್ತಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಬಂಟ್ವಾಳದ ಅಮೈ ನಿವಾಸಿ ಹಾಗೂ ಕನ್ನಡಪ್ರಭ-ಸುವರ್ಣನ್ಯೂಸ್‌ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ವಿಜೇತ (Amai Mahalinga Naik) ಮಹಾಲಿಂಗ ನಾಯ್ಕ ಅವರ ಸಾಧನೆಗೆ ಪ್ರಧಾನಿ (Narendra Modi) ನರೇಂದ್ರ ಮೋದಿ ಅವರು ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮ ಪುರಸ್ಕಾರ ಲಭಿಸಿದೆ. ಇವರೊಬ್ಬ ರೈತ. ಕರ್ನಾಟಕದವರು. ಹಲವು ಜನರು ಅವರನ್ನು ‘ಸುರಂಗ ಮಾನವ’ ಎಂದೂ ಕರೆಯುತ್ತಾರೆ. ಅವರು ಕೃಷಿಯಲ್ಲಿ ಮಾಡಿರುವ ಸಾಧನೆ ಎಂಥವರನ್ನೂ ಬೆರಗುಗೊಳಿಸುತ್ತದೆ. ಸಣ್ಣ ರೈತರು ನಾಯ್ಕ ಅವರ ಪ್ರಯತ್ನಗಳನ್ನು ನೋಡಿ ಸಾಕಷ್ಟುಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

Tap to resize

Latest Videos

undefined

Padma Awards 2022:  ಪದ್ಮವಿಭೂಷಣ ರಾವತ್‌, ಪದ್ಮಶ್ರೀ ಸಿದ್ದಲಿಂಗಯ್ಯ... ಸಾಧಕರಿಗೆ ಗೌರವ

ನಾಯ್ಕ ಅವರಂತಹ ಎಲೆಮರೆ ಕಾಯಿಯಂತಿರುವ ಹಲವು ಸಾಧಕರನ್ನು ಗುರುತಿಸಿ ಅವರಿಗೆ ಗೌರವ ನೀಡಲಾಗುತ್ತಿದೆ. ಇಂಥವರ ಬಗ್ಗೆ ತಿಳಿದುಕೊಳ್ಳಬೇಕು. ಇದರಿಂದ ಜೀವನದಲ್ಲಿ ಬಹಳಷ್ಟುಕಲಿಯಬಹುದಾಗಿದೆ ಎಂದರು.

ಇದೇ ವೇಳೆ ನದಿ ಉಳಿಸಲು ಹೋರಾಡಿದ ಉತ್ತರಾಖಂಡದ ಬಸಂತಿ ದೇವಿ, ಮಣಿಪುರದ ಲಿಬಾ ಜವಳಿ ಕಲೆಯನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿರುವ 77 ವರ್ಷದ ಮಣಿಪುರದ ಲೊರೆಂಬಾಮ್‌ ಬೀನೋ ದೇವಿ ಅವರಂತಹ ಪದ್ಮಶ್ರೀ ವಿಜೇತರ ಬಗ್ಗೆಯೂ ಮೋದಿ ಮೆಚ್ಚುಗೆ ಸೂಚಿಸಿದರು.

ಬರಡು ಭೂಮಿಯಲ್ಲಿ ಸುರಂಗ ತೋಡಿ ನೀರು ಹರಿಸಿದ ದಕ್ಷಿಣ ಕನ್ನಡದ ಭಗೀರಥ:  ಅಡಕೆ, ತೆಂಗಿನ ಮರ ಏರುವುದರಲ್ಲಿ  ಪರಿಣತರಾಗಿದ್ದ ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ 40 ವರ್ಷಗಳ ಹಿಂದೆ ಸ್ವಂತ ಊರಿನ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡುವ ಕನಸು ಕಂಡಿದ್ದರು. ಆದರೆ ಇದಕ್ಕಾಗಿ ಅವರಲ್ಲಿ ಜಮೀನು ಇರಲಿಲ್ಲ. ಭೂ ಮಾಲಕ ಅಮೈ ಮಹಾಬಲ ಭಟ್ಟರ ತೋಟಕ್ಕೆ ದಿನಾಲು ಕೂಲಿ ಕೆಲಸಕ್ಕೆ ಹೋಗುತ್ತಿಿದ್ದರು. ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕ್ರೆ ಜಮೀನು ನೀಡಲು ಒಪ್ಪಿಕೊಂಡರು. ಎರಡು ಎಕ್ರೆ ಗುಡ್ಡ ದರ್ಖಾಸ್ತು ರೂಪದಲ್ಲಿ ಮಹಾಲಿಂಗ ನಾಯ್ಕ ಪಡೆದರು.

ಇಳಿಜಾರು ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ದೊಡ್ಡ ಸವಾಲಾಯಿತು. ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಆಶ್ರಯಿಸಿದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಬಾವಿ ತೋಡಿದರೆ ನೀರು ದೊರೆಯುವ ಸಾಧ್ಯತೆ ಇರಲಿಲ್ಲ. ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯ ಮಾತು. ಆಗ ಅವರಿಗೆ ಹೊಳೆದದ್ದು ಸುರಂಗ ತಂತ್ರಜ್ಞಾನ. ದಕ್ಷಿಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗಡಿ ಭಾಗದಲ್ಲಿ ನೀರಿಗಾಗಿ ಹಲವರು ಸುರಂಗ ತೋಡುವುದನ್ನು ಕೇಳಿ ತಿಳಿದಿದ್ದರು. ಅರ್ಧ ದಿನ ಕೂಲಿ ಕೆಲಸ , ಉಳಿದರ್ಧ ದಿನ ಮತ್ತು ರಾತ್ರಿಿ ಹೊತ್ತು ತಾನೇ ಸ್ವತಃ ಸುರಂಗ ಕೊರೆಯುವ ಮೂಲಕ ಜೀವಜಲ ಹುಡುಕುವ ಪ್ರಯತ್ನ ನಡೆಸಿದರು.

ಮೊದಲು 30 ಮೀಟರ್ ಉದ್ದದ ಸುರಂಗ ಕೊರೆದರೂ ನೀರು ಸಿಗಲಿಲ್ಲ. ಮತ್ತೆ ಪ್ರಯತ್ನ ಮುಂದುವರಿಸಿದರು. ಸೀಮೆ ಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದರು. ಸುರಂಗ ತೋಡುವ ಅಪಾಯಕಾರಿ ಪ್ರಯತ್ನಕ್ಕೆ  ಫಲ ದೊರೆಯಲಿಲ್ಲ. ಸುರಂಗ ತೋಡುವಾಗ ಮಣ್ಣು ಕುಸಿದರೆ ಜೀವಕ್ಕೇ ಅಪಾಯವೂ ಇತ್ತು. ಅದನ್ನೂ ಲೆಕ್ಕಿಸದೇ ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದೆ ಕಾಯಕ ಮುಂದುವರಿಸಿದ ಮಹಾಲಿಂಗ ನಾಯ್ಕರಿಗೆ ಆರನೇ ಪ್ರಯತ್ನ ಫಲ ನೀಡಿತು.

6ನೇ ಸುರಂಗದ ಪಕ್ಕದಲ್ಲಿ ಇನ್ನೊಂದು ಸುರಂಗ ಕೊರೆದರು. 25 ಮೀಟರ್  ತೋಡಿದಾಗ ಜೀವ ಜನಲ ಕಾಣಿಸಿಕೊಂಡಿತು. ಮತ್ತೆ ಮುಂದುವರಿಸಿ 75 ಮೀಟರ್ ಉದ್ದದ ಸುರಂಗವಾಗುವ ಹೊತ್ತಿಗೆ ಯೆಥೇಚ್ಛ ನೀರು ಸಿಕ್ಕಿತು. ಸುರಂಗದ ನೀರನ್ನು ಸಂಗ್ರಹಿಸಲು ಮಣ್ಣಿನ ಟ್ಯಾಂಕ್ ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತೋಟ ಮಾಡುವ ಕನಸು ನನಸಾಯಿತು. ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಿಕೆ, ತೆಂಗು, ಬಾಳೆ ಕೃಷಿ ಕೈಗೊಂಡರು. ಮಡದಿ ಲಲಿತಾ ಮತ್ತು ಮೂವರು ಮಕ್ಕಳು ಈ ಪ್ರಯತ್ನಕ್ಕೆ ಕೈ ಜೋಡಿಸಿದರು.

ಏಕಾಂಗಿಯಾಗಿ ಅಪೂರ್ವ ಮತ್ತು ಅಪಾಯಕಾರಿಯಾದ ಸುರಂಗ ತೋಡಿ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ನಂದನವನ ಮಾಡಿದರು. ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಒನ್ ಮ್ಯಾನ್ ಆರ್ಮಿ. ಪ್ರಯತ್ನಶೀಲ ಪ್ರಗತಿಪರ ಕೃಷಿಕರು. ಈಗಲೂ ಸ್ಪೂರ್ತಿಯ ಚಿಲುಮೆಯಾಗಿ ತಮ್ಮ ಕ್ಷೇತ್ರದಲ್ಲಿ ದುಡಿಯುತ್ತಾರೆ. ಬಾಳೆ, ತೆಂಗು, ಅಡಕೆ, ಕೊಕ್ಕೋ, ಕಾಳುಮೆಣಸು, ಗೇರು, ಚಿಕ್ಕು, ವಿಧ ವಿಧ ತರಕಾರಿಗಳು ಹೀಗೆ ಏನುಂಟು ಏನಿಲ್ಲವೆಂಬಂತೇ ಸ್ವಾಾವಲಂಬಿ ಜೀವನ ನಡೆಸುತ್ತಿದ್ದಾರೆ 73 ವರ್ಷದ ಮಹಾಲಿಂಗ ನಾಯ್ಕ.



 

click me!