ವಿಷಯ ಕಠಿಣವಾಗಿದ್ದರೆ ಭಯವಾಗುತ್ತದೆ| ವಿದ್ಯಾರ್ಥಿಗಳ ಸಮಸ್ಯೆಗೆ ತಮ್ಮದೇ ಜೀವನದ ಉದಾಹರಣೆ ನೀಡಿ ಸಲಹೆ ಕೊಟ್ಟ ಪ್ರಧಾನಿ ಮೋದಿ| ಶಿಕ್ಷಕರಿಗೂ ಮೋದಿ ಸಲಹೆ
ನವದೆಹಲಿ(ಏ.07): ಇದೇ ಮೊದಲ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವರ್ಚುವಲ್ ಆಗಿ ನಡೆಯುತ್ತಿದೆ. ಹೀಗಿರುವಾಗ ವಿದ್ಯಾರ್ಥಿಗಳೊಂದಿಗೆ ಇಂದು ಪಿಎಂ ಮೋದಿ ಸ್ನೇಹಿತರಾಗಿ ಮಾತುಗಳನ್ನಾರಂಭಿಸಿದ್ದಾರೆ. ಪರೀಕ್ಷೆ ಎದುರಿಸಲು ಬೇಕಾದ ಸಲಹೆ ನೀಡುವುದರೊಂದಿಗೆ, ಧೈರ್ಯವನ್ನೂ ತುಂಬಿದ್ದಾರೆ.
ಕಾರ್ಯಕ್ರಮದ ಮೊದಲ ಪ್ರಶ್ನೆಯನ್ನು ಎಂ ಪಲ್ಲವಿ, 9 ನೇ ತರಗತಿ, ಆಂಧ್ರ ಪ್ರದೇಶ ಹಾಗೂ ಅರ್ಪಣ್ ಪಾಂಡೆ,12ನೇ ತರಗತಿ, ಮಲೇಷ್ಯಾ ವಿದ್ಯಾರ್ಥಿ ಕೇಳಿದ್ದಾರೆ. ಒತ್ತಡ ನಿವಾರಣೆ ಹೇಗೆ ಎಂಬ ಪ್ರಶ್ನೆಗೆ ಮೋದಿ ಸರಳವಾಗೇ ಉತ್ತರಿಸಿದ್ದು, ಹೆತ್ತವರಿಗೂ ಕೆಲ ಸಲಹೆ ನೀಡಿದ್ದಾರೆ.
ಪರೀಕ್ಷೆ ಭಯ ಓಡಿಸಲು ಮೋದಿ ಕೊಟ್ಟ ಐಡಿಯಾ: ಹೆತ್ತವರಿಗೂ ಮಹತ್ವದ ಸಲಹೆ!
ಪ್ರಶ್ನೆ: ನಾವು ಸಾಮಾನ್ಯವಾಗಿ ಇಡೀ ವರ್ಷ ಯಾವುದೇ ಅಡೆ ತಡೆ ಇಲ್ಲದೇ, ಉತ್ತಮವಾಗಿ ತರಗತಿಗಳು ನಡೆಯುತ್ತವೆ, ಚೆನ್ನಾಗಿ ಓದುತ್ತೇವೆ. ಆದರೆ ಪರೀಕ್ಷೆ ಹತ್ತಿರ ರುತ್ತಿದ್ದಂತೆಯೇ ಬಹಳ ಒತ್ತಡ ಪರಿಸ್ಥಿತಿ ನಿರ್ಮಾಣವಾಗಿತ್ತದೆ. ದಯವಿಟ್ಟು ಇದರ ನಿವಾರಣೆಗೆ ಯಾವುದಾದರೂ ಉಪಾಯ ಸೂಚಿಸಿ.
ಮೋದಿ ಕೊಟ್ಟ ಉತ್ತರ: ನೀವು ಈ ಭಯದ ಮಾತುಗಳನ್ನಾಡುವಾಗ ನನಗೂ ಭಯವಾಗುತ್ತದೆ. ಭಯ ಪಡುವ ವಿಚಾರ ಏನಿದೆ? ಮೊದಲ ಬಾರಿ ಪರೀಕ್ಷೆ ಬರೆಯುತ್ತಿದ್ದೀರಾ? ಮೊದಲು ಬರೆದಿಲ್ಲವೇ? ಅಚಾನಕ್ಕಾಗಿ ಬಂದಿಲ್ಲ. ಆಕಾಶ ತಲೆ ಮೇಲೆ ಕಳಚಿ ಬಿದ್ದಿಲ್ಲ. ಅಂದರೆ ನಿಮಗಾಗುವ ಭಯ ಪರೀಕ್ಷೆಯದ್ದಲ್ಲ. ನಿಮಗೆ ಬೇರೆ ವಿಚಾರದ ಬಗ್ಗೆ ಭಯವಾಗುತ್ತದೆಯಷ್ಟೇ. ನಿಮ್ಮ ಆಸುಪಾಸು ಈ ಪರೀಕ್ಷೆಯೇ ಸರ್ವಸ್ವ, ಇದೇ ಜೀವನ ಎಂಬ ವಾತಾವರಣ ನಿರ್ಮಿಸಿದ್ದಾರೆ. ಇದಕ್ಕಾಗಿ ಸಾಮಾಜಿಕ, ಶಾಲಾ ವಾತಾವರಣ, ಕೆಲವೊಮ್ಮೆ ತಂದೆ, ತಾಯಿ, ಕುಟುಂಬಸ್ಥರು ಇಂತಹ ವಾತಾವರಣ ನಿರ್ಮಿಸುತ್ತಾರೆ.
ಹೀಗೆ ಭಯ ಮೂಡಿಸುವವರೆಲ್ಲರಿಗೂ ವಿಶೇಷವಾಗಿ ತಂದೆ, ತಾಯಿ ಹೀಗೆ ಮಾಡುವುದನ್ನು ನಿಲ್ಲಿಸಬೇಕೆಂದು ಹೇಳಲಿಚ್ಛಿಸುತ್ತೇನೆ. ಇದು ನೀವು ಮಾಡುವ ಬಹುದೊಡ್ಡ ತಪ್ಪು. ನಾವು ಅವಶ್ಯಕತೆಗಿಂತ ಹೆಚ್ಚು ಭಯ ಪಡುತ್ತೇವೆ. ಆದರೆ ನೆನಪಿಟ್ಟುಕೊಳ್ಳಿ ಇದು ಜೀವನ ಕೊನೆಯ ಹಂತವಲ್ಲ. ಜೀವನ ಬಹಳ ದೊಡ್ಡದಿದೆ. ಜೀವನದಲ್ಲಿ ಬರುವ ಅನೇಕ ಮೆಟ್ಟಿಲುಗಳಲ್ಲಿ ಇದೂ ಒಂದು. ನಾವು ಒತ್ತಡ ಮೂಡಿಸಬಾರದು. ಹೊರಗಿನಿಂದ ಬರುವ ಒತ್ತಡ ಕಡಿಮೆಯಾದರೆ, ಪರೀಕ್ಷೆಯ ಭಯ ಇರುವುದಿಲ್ಲ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಕ್ಕಳು ಮನೆಯಲ್ಲಿ ಒತ್ತಡ ಮುಕ್ತರಾಗಿ ಬದುಕಬೇಕು. ಪ್ರತಿ ದಿನ ಮನೆಯಲ್ಲಿ ಮಾತನಾಡುವಂತೆ ಪರೀಕ್ಷೆ ವೇಳೆಯೂ ಮಾತನಾಡಬೇಕು. ಹಿಂದೆ ತಂದೆ ತಾಯಿ ಮಕ್ಕಳ ಜೊತೆ ಹೆಚ್ಚು ಬೆರೆಯುತ್ತಿದ್ದರು, ಚೆನ್ನಾಗಿ ಮಾತುಕತೆ ನಡೆಯುತ್ತಿತ್ತು.
ಇಂದು ಹೆತ್ತವರು ಮಕ್ಕಳ ಪರೀಕ್ಷೆ, ವೃತ್ತಿ ಈ ಬಗ್ಗೆಯಷ್ಟೇ ಮಾತನಾಡುತ್ತಾರೆ. ಇದು ಸರಿಯಲ್ಲ. ಇವರಿಗೆ ತಮ್ಮ ಮಕ್ಕಳ ಸಾಮರ್ಥ್ಯ ಏನೆಂದು ತಿಳಿಯುವುದಿಲ್ಲ. ತಂದೆ ತಾಯಿ ಹೆಚ್ಚು ಮಕ್ಕಳೊಂದಿಗೆ ಬೆರೆತರೆ ಮಕ್ಕಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.ಲ ಅವರಲ್ಲಿರುವ ಕೊರತೆ ಅರ್ಥೈಸಿಕೊಂಡು ಅದನ್ನು ಸರಿಪಡಿಸಲು ಯತ್ನಿಸುತ್ತಾರೆ. ಇದರಿಂದ ಮಕ್ಕಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ತಂದೆ, ತಾಯಿಗೂ ಮಕ್ಕಳ ಕೊರತೆ, ಅವರ ಬಲ ತಿಳಿದುಕೊಳ್ಳುತ್ತಾರೆ. ಆದರೆ ಇಂದು ಹೆತ್ತವರು ಅದೆಷ್ಟು ವ್ಯಸ್ತರಾಗಿರುತಯ್ತಾರೆಂದರೆ ಮಕ್ಕಳೊಂದಿಗೆ ಸಮಯ ಕಳೆಯಲು ಸಮಯವಿರುವುದಿಲ್ಲ. ಹೀಗಾಗಿ ಮಕ್ಕಳ ಸಾಮರ್ಥ್ಯ ಅರಿತುಕೊಳ್ಳಲು ಮಕ್ಕಳ ಫಲಿತಾಂಶ ಪಟ್ಟಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಕ್ಕಳ ಕಲಿಕೆಯೂ ಮಕ್ಕಳ ರಿಸಲ್ಟ್‌ಗೇ ಸೀಮಿತವಾಗಿದೆ. ಮಾರ್ಕ್ಸ್ ಹೊರತುಪಡಿಸಿ ಮಕ್ಕಳಲ್ಲಿರುವ ಇತರ ಸಾಮರ್ಥ್ಯವನ್ನು ತಂದೆ ತಾಯಿಗೆ ಅರಿತುಕೊಳ್ಳಲೂ ಸಾಧ್ಯವಾಗುವುದಿಲ್ಲ.
ಪರೀಕ್ಷೆ ಎಂದರೆ ಕೊನೆಯ ಅವಕಾಶವಲ್ಲ. ಪರೀಕ್ಷೆ ಒಂದು ಬಗೆಯಲ್ಲಿ ಒಂದು ದೀರ್ಘ ಜೀವನ ಕಳೆಯಲು ತಮ್ಮನ್ನು ತಾವು ರೂಪಿಸಿಕೊಳ್ಳುವ ಉತ್ತಮ ಅವಕಾಶವಾಗಿದೆ. ನಾವು ಪರೀಕ್ಷೆಯನ್ನೇ ಜೀವನದ ಕನಸಿನ ಕೊನೆ ಎಂದು ಭಾವಿಸುತ್ತೇವೆ. ಆದರೆ ಪರೀಕ್ಷೆ ಎಂದರೆ ಜೀವನ ರೂಪಿಸುವ ಒಂದು ಅವಕಾಶವಾಗಿದೆ. ನಾವು ಇಂತಹ ಅವಕಾಶಗಳನ್ನು ಹುಡುಕುತ್ತಾ ಇರಬೇಕು, ಈ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಣಬಹುದು. ಇಂತಹ ಅವಕಾಶದಿಂದ ನಾವು ಪಲಾಯನ ಮಾಡಬಾರದು.