ಅಭಿನಂದನ್‌ಗೆ ಚಿತ್ರಹಿಂಸೆ: ಜಿನೆವಾ ಒಪ್ಪಂದ ಉಲ್ಲಂಘಿಸಿದ ಪಾಕ್

By Web DeskFirst Published Feb 28, 2019, 9:00 AM IST
Highlights

ಹೇಡಿ ಪಾಕ್ ನಿಂದ ಅಭಿನಂದನ್ ಗೆ ಹಿಂಸೆ| ಅಪಘಾತಗೊಂಡ ವಿಮಾನದಿಂದ ಬಿದ್ದ ಪೈಲಟ್ ನನ್ನು ಹಿಂಸಿಸಿ, ಬಂಧಿಸಿ ಜಿನೆವಾ ಒಪ್ಪಂದ ಉಲ್ಲಂಘಿಸಿದ ಪಾಕ್

ನವದೆಹಲಿ[ಫೆ.28]: ಶತ್ರು ಪಡೆಯನ್ನು ಹಿಮ್ಮೆಟ್ಟಿಸುವ ವೇಳೆ ಮಿಗ್‌- 21 ವಿಮಾನ ಪತನವಾದ ಬಳಿಕ ಪಾಕಿಸ್ತಾನದ ಪ್ರದೇಶದಲ್ಲಿ ಇಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಅರಣ್ಯವೊಂದರಲ್ಲಿ ಬಿದ್ದ ಅಭಿನಂದನ್‌ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ಅವರನ್ನು ಸೇನಾ ಯೋಧರು ಪ್ರಾಣಿಗಳಂತೆ ಕಲ್ಲುಬಂಡೆಗಳ ಮೇಲೇ ಎಳೆದುಕೊಂಡು ಬಂದಿದ್ದಾರೆ. ಈ ವೇಳೆ ಅವರ ಮುಖವೆಲ್ಲಾ ರಕ್ತಸಿಕ್ತವಾಗಿದ್ದು, ಅವರ ಕಣ್ಣಿನ ಸ್ಥಳ ಊದಿಕೊಂಡಿದ್ದು ಕಂಡುಬಂದಿದೆ.

ಬಳಿಕ ಪಾಕ್‌ ಯೋಧರು ಅಭಿನಂದನ್‌ ಅವರ ಕಣ್ಣಿಗೆ ಬಟ್ಟೆಕಟ್ಟಿ, ಕೈಗಳನ್ನು ಹಿಂದಕ್ಕೆ ಕಟ್ಟಿವಾಹನದಲ್ಲಿ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರ ಬಳಿ ಇದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ತಾನು ಭಾರತದ ಪೈಲಟ್‌ ಅನ್ನು ಸರೆ ಹಿಡಿದಿರುವುದಾಗಿ ತೋರಿಸಲು ಪಾಕಿಸ್ತಾನ ಈ ಬಿಡುಗಡೆ ಮಾಡಿತ್ತು. ವಿಡಿಯೋಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಡಿಯೋವನ್ನು ಡಿಲೀಟ್‌ ಮಾಡಲಾಗಿದೆ. ಭಾರತೀಯ ಸೈನಿಕನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜಿನೆವಾ ಒಪ್ಪಂದ ಏನು ಹೇಳುತ್ತದೆ?

ಯುದ್ಧ ಕೈದಿಗಳನ್ನು ಹಿಂಸಿಸಬಾರದು, ಅವರ ಮೇಲೆ ಹಲ್ಲೆ ನಡೆಸಬಾರದು, ಗಾಯಗೊಂಡಿದ್ದರೆ ಉತ್ತಮ ಚಿಕಿತ್ಸೆ ಕೊಡಿಸಬೇಕು, ಸೌಮ್ಯವಾಗಿ ವಿಚಾರಣೆಗೆ ಒಳಪಡಿಸಬೇಕು, ಕೈದಿಯ ದೇಶಕ್ಕೆ ಆತನ ಬಂಧನದ ಬಗ್ಗೆ ಮಾಹಿತಿ ನೀಡಬೇಕು, ಆತನ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು, ಆತನ ಸೇನಾ ರಾರ‍ಯಂಕಿಂಗ್‌ಗೆ ತಕ್ಕಂತೆ ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ವಿಚಾರಣೆಯ ನಂತರ ಆತನನ್ನು ಮಾತೃದೇಶಕ್ಕೆ ವಾಪಸ್‌ ನೀಡಬೇಕು ಎಂದು ಜಿನೆವಾ ಒಪ್ಪಂದದಲ್ಲಿ ಹೇಳಲಾಗಿದೆ.

ಯುದ್ಧ ಅಥವಾ ಸಶಸ್ತ್ರ ಸಂಘರ್ಷದ ವೇಳೆ ದೇಶಗಳು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ನಿಯಮಗಳನ್ನು ವಿಧಿಸುವ ಈ ಒಪ್ಪಂದ 1864ರಲ್ಲಿ ಸ್ವಿಜರ್‌ಲೆಂಡ್‌ನ ಜಿನೆವಾದಲ್ಲಿ ಏರ್ಪಟ್ಟಿದ್ದು, ನಂತರ ಕಾಲಕಾಲಕ್ಕೆ ಪರಿಷ್ಕೃತಗೊಂಡಿದೆ. 1949ರಲ್ಲಿ ಇದಕ್ಕೆ ಪ್ರಮುಖ ಸುಧಾರಣೆಗಳನ್ನು ಮಾಡಲಾಗಿದೆ. ಈ ಒಪ್ಪಂದಕ್ಕೆ ಇಲ್ಲಿಯವರೆಗೆ ಭಾರತ ಹಾಗೂ ಪಾಕಿಸ್ತಾನವೂ ಸೇರಿದಂತೆ 196 ದೇಶಗಳು ಸಹಿ ಹಾಕಿವೆ. ದೇಶಗಳ ನಡುವೆ ಯುದ್ಧ ನಡೆಯುವ ಸಮಯದಲ್ಲಿ ಮಾತ್ರವಲ್ಲದೆ ಸಶಸ್ತ್ರ ಸಂಘರ್ಷ ನಡೆಯುವ ಎಲ್ಲಾ ಸಮಯದಲ್ಲೂ ಈ ಒಪ್ಪಂದ ಅನ್ವಯವಾಗುತ್ತದೆ.

click me!