ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಅಕ್ರಮ ಸಂತಾನ ಎಂದು ಹೀಯಾಳಿಸಿದ್ದ ಡಿಎಂಕೆ ನಾಯಕ ಎ. ರಾಜಾ| ಎ. ರಾಜಾ ಹಳೆಯ 2ಜಿ ಕ್ಷಿಪಣಿ: ಮೋದಿ ಕಿಡಿ
ಧಾರಾಪುರಂ(ಮಾ.31): ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಅಕ್ರಮ ಸಂತಾನ ಎಂದು ಹೀಯಾಳಿಸಿದ್ದ ಡಿಎಂಕೆ ನಾಯಕ ಎ. ರಾಜಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹರಿಹಾಯ್ದಿದ್ದಾರೆ.
ರಾಜಾ ಅವರನ್ನು ಹಳೆಯ 2ಜಿ ಕ್ಷಿಪಣಿ ಎಂದು ಮೂದಲಿಸಿರುವ ಅವರು, ಪಳನಿಸ್ವಾಮಿ ಅವರ ತಾಯಿಯನ್ನು ರಾಜಾ ನಿಂದಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ ರಾಜಾ ಹೆಸರು ಪ್ರಸ್ತಾಪಿಸದೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳು ತಮ್ಮ ಹಳೆಯ 2ಜಿ ಕ್ಷಿಪಣಿಯನ್ನು ಉಡಾವಣೆ ಮಾಡಿವೆ.
ಆ ಕ್ಷಿಪಣಿಯ ಏಕೈಕ ಉದ್ದೇಶ ತಮಿಳುನಾಡಿನ ನಾರಿಶಕ್ತಿಯ ಮೇಲೆ ದಾಳಿ ಮಾಡುವುದಾಗಿದೆ. ಒಂದು ವೇಳೆ, ಯುಪಿಎ ಅಧಿಕಾರಕ್ಕೆ ಬಂದರೆ ತಮಿಳುನಾಡಿನ ಹಲವು ಮಹಿಳೆಯರಿಗೆ ಅಪಮಾನ ಮಾಡಲಿದೆ ಎಂದು ಹೇಳಿದರು. ರಾಜಾ ಅವರು 2ಜಿ ಹಗರಣ ಸಂಬಂಧ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ಇದನ್ನು ಮೋದಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.