ಶೇ.56 ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಅಸಾಧ್ಯ| ಅರ್ಧಕ್ಕರ್ಧ ಮಕ್ಕಳ ಬಳಿ ಇಲ್ಲ ಸ್ಮಾರ್ಟ್‌ಫೋನ್| ಕರ್ನಾಟಕ ಸೇರಿ ವಿವಿಧೆಡೆ ಸ್ಮೈಲ್ ಸಂಸ್ಥೆ ಸಮೀಕ್ಷೆ
ನವದೆಹಲಿ(ಜೂ.15): ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್‌ಲೈನ್ ಪಾಠದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ದೇಶದ ಶೇ.56ರಷ್ಟುವಿದ್ಯಾರ್ಥಿಗಳ ಬಳಿ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಿರುವ ಸ್ಮಾರ್ಟ್‌ಫೋನ್ ಇಲ್ಲ ಎಂಬ ವಿಷಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಮಕ್ಕಳ ಹಕ್ಕುಗಳ ಕುರಿತಾದ ‘ಸ್ಮೈಲ್ ಫೌಂಡೇಶನ್’ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಲಭ್ಯತೆ ವಿಶ್ಲೇಷಿಸುವ ಉದ್ದೇಶದೊಂದಿಗೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ದೆಹಲಿ ಸೇರಿದಂತೆ 23 ರಾಜ್ಯಗಳ ವಿವಿಧ ತರಗತಿಗಳ 42,831 ವಿದ್ಯಾರ್ಥಿಗಳನ್ನು ಸಂದರ್ಶಿಸಿ ವರದಿಯೊಂದನ್ನು ಸಿದ್ಧಪಡಿಸಿದೆ.
undefined
ಈ ವರದಿಯ ಅನ್ವಯ, ಶೇ.43.99ರಷ್ಟುವಿದ್ಯಾರ್ಥಿಗಳು ಮಾತ್ರ ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಶೇ.43.99ರಷ್ಟುವಿದ್ಯಾರ್ಥಿಗಳು ಕೀಪ್ಯಾಡ್ ಮೊಬೈಲ್ ಹೊಂದಿದ್ದಾರೆ. ಶೇ.12.02ರಷ್ಟುವಿದ್ಯಾರ್ಥಿಗಳ ಬಳಿ ಯಾವುದೇ ಮೊಬೈಲ್ ಇಲ್ಲ. ಹೀಗೆ ಆನ್‌ಲೈನ್ ಪಾಠಕ್ಕೆ ನೆರವಾಗದ ಕೀಪ್ಯಾಡ್ ಮೊಬೈಲ್ ಮತ್ತು ಮೊಬೈಲ್ ಇಲ್ಲದೇ ಇರುವವರ ಒಟ್ಟು ಪ್ರಮಾಣ ಶೇ.56.01ರಷ್ಟು. ಇಷ್ಟುವಿದ್ಯಾರ್ಥಿಗಳು, ಒಂದು ವೇಳೆ ಆನ್‌ಲೈನ್ ಪಾಠ ಆರಂಭವಾದರೆ, ಅಂಥ ಪಾಠದಿಂದ ವಂಚಿತರಾಗುತ್ತಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು ಟೀವಿಯಲ್ಲಿ ಪಾಠ ವೀಕ್ಷಣೆ ಸಂಬಂಧಿಸಿದಂತೆ ಶೇ.68.99ರಷ್ಟುವಿದ್ಯಾರ್ಥಿಗಳು ಮನೆಯಲ್ಲಿ ಟೀವಿಯ ಸೌಲಭ್ಯವನ್ನು ಹೊಂದಿದ್ದಾರೆ. ಶೇ.31.01ರಷ್ಟುವಿದ್ಯಾರ್ಥಿಗಳು ಮನೆಯಲ್ಲಿ ಟೀವಿಯನ್ನೂ ಹೊಂದಿಲ್ಲ.
ಹೀಗಾಗಿ ಲಾಕ್‌ಡೌನ್ ವೇಳೆ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಶಿಕ್ಷಣ ನೀಡುವುದು ಸೂಕ್ತ ಪರಿಹಾರ ಅಲ್ಲ. ಇದರಿಂದ ಅರ್ಧದಷ್ಟುವಿದ್ಯಾರ್ಥಿಗಳು ಪಾಠಗಳನ್ನು ಆಲಿಸುವುದರಿಂದ ವಂಚಿತರಾಗುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಾಥಮಿಕ ಶಾಲೆಯ (1ರಿಂದ 5ನೇ ತರಗತಿ) 19,576 ವಿದ್ಯಾರ್ಥಿಗಳು, ಪ್ರೌಢಶಾಲೆಯ (6ರಿಂದ 8ನೇ ತರಗತಿ) 12,277 ವಿದ್ಯಾರ್ಥಿಗಳು ಹಾಗೂ ಪಿಯುಸಿಯ (11 ಮತ್ತು 12ನೇ ತರಗತಿ) 3,216 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಸಮುದಾಯ ಕಾರ್ಯಕರ್ತರು ಹಾಗೂ ದೂರವಾಣಿಯ ಮೂಲಕ ಏ.16ರಿಂದ ಏ.28ರ ಅವಧಿಯಲ್ಲಿ ಈ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ದೇಶದಲ್ಲಿ 35 ಕೋಟಿಗೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ, ಅವರ ಪೈಕಿ ಎಷ್ಟುಮಂದಿ ಡಿಜಿಟಲ್ ಸಾಧನಗಳು ಮತ್ತು ಇಂಟರ್‌ನೆಟ್ ಸೌಲಭ್ಯಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿಲ್ಲ.
#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್