‘ಒಂದು ದೇಶ, ಒಂದು ಚುನಾವಣೆ’ 2034ರಲ್ಲಿ ಜಾರಿ ಆಗುವ ಸಾಧ್ಯತೆ

Published : Jun 11, 2025, 05:20 AM IST
Election Commission

ಸಾರಾಂಶ

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಒಮ್ಮೆಗೆ ಚುನಾವಣೆ ನಡೆಸುವ ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 2034ರಲ್ಲಿ ಮೊದಲ ಸಲ ಜಾರಿಗೆ ಬರುವ ಸಾಧ್ಯತೆ

 ನವದೆಹಲಿ: ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಒಮ್ಮೆಗೆ ಚುನಾವಣೆ ನಡೆಸುವ ಕೇಂದ್ರದ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 2034ರಲ್ಲಿ ಮೊದಲ ಸಲ ಜಾರಿಗೆ ಬರುವ ಸಾಧ್ಯತೆ ಇದೆ. ಹೀಗಾಗಿ 2029ರ ಬಳಿಕ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರುವ ರಾಜ್ಯ ಸರ್ಕಾರಗಳು ಪೂರ್ಣಾವಧಿ ಹೊಂದಿರುವುದಿಲ್ಲ ಎಂದು ಹೇಳಲಾಗಿದೆ.

ಒಂದು ದೇಶ ಒಂದು ಚುನಾವಣೆಯ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಮುಖ್ಯಸ್ಥರಾದ ಪಿ.ಪಿ.ಚೌಧರಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 2027ರಲ್ಲಿ ವಿಧಾನಸಭೆ ಚುನಾವಣೆ ನಡೆದರೆ 2032ರಲ್ಲಿ ಅದರ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಆಗ ಮತ್ತೆ ಆಯ್ಕೆಯಾಗುವ ಸರ್ಕಾರದ ಅವಧಿ ಕೇವಲ 2 ವರ್ಷವಷ್ಟೇ ಆಗಿರಲಿದೆ. 2034ರ ಮಹಾ ಚುನಾವಣೆಗೆ ಹೊಂದಾಣಿಕೆಯಾಗುವಂತೆ ಈ ಬದಲಾವಣೆ ಮಾಡಲಾಗುತ್ತದೆ.

ಈ ತಿದ್ದುಪಡಿ ವಿಧೇಯಕದ ಪ್ರಕಾರ, 2029ರಲ್ಲಿ ಆಯ್ಕೆಯಾಗುವ ಹೊಸ ಲೋಕಸಭೆಯ ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಏಕಕಾಲದಲ್ಲಿ ಚುನಾವಣೆ ಸಂಬಂಧ ನೋಟಿಫಿಕೇಷನ್‌ ಹೊರಡಿಸುವ ಸಾಧ್ಯತೆ ಇದೆ. ಆ ದಿನಾಂಕದ ಬಳಿಕ ಎಲ್ಲ ವಿಧಾನಸಭೆಗಳ ಅಧಿಕಾರಾವಧಿ ಕೊನೆಗೊಳ್ಳುತ್ತದೆ. ಒಂದು ವೇಳೆ ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗಳು ಐದು ವರ್ಷ ಅಧಿಕಾರಾವಧಿ ಪೂರ್ಣಗೊಳಿಸದಿದ್ದರೆ 2034ಕ್ಕೆ ಅಧಿಕಾರಾವಧಿ ಕೊನೆಗೊಳ್ಳುವಂತೆ ಮತ್ತೆ ಚುನಾವಣೆ ನಡೆಯಲಿದೆ.

ಒಂದು ವೇಳೆ ಚುನಾವಣಾ ಆಯೋಗವು ನಿರ್ದಿಷ್ಟ ರಾಜ್ಯವೊಂದರ ಚುನಾವಣೆಯು ದೇಶದ ಇತರೆ ರಾಜ್ಯಗಳ ಚುನಾವಣೆ ಜತೆಗೆ ನಡೆಯಲು ಅಸಾಧ್ಯ ಎಂಬ ತೀರ್ಮಾನಕ್ಕೆ ಬಂದರೆ, ಈ ಸಂಬಂಧ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ. ಆಗ ರಾಷ್ಟ್ರಪತಿಗಳು ಆ ರಾಜ್ಯಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಸಲು ಆದೇಶ ಹೊರಡಿಸಲು ವಿಧೇಯಕವು ಅವಕಾಶ ಮಾಡಿಕೊಟ್ಟಿದೆ.

ಚುನಾವಣಾ ವೆಚ್ಚ ಕಡಿತ, ಪದೇ ಪದೇ ಚುನಾವಣೆ ಘೋಷಣೆಯಿಂದಾಗಿ ಜಾರಿಯಾಗುವ ನೀತಿ ಸಂಹಿತೆಗಳ ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ತಡೆ ಬೀಳುತ್ತದೆ. ತಡೆಯಲು ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಏಕ ಚುನಾವಣೆ ಜಾರಿ ಹೇಗೆ?

- 2029ರಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಆ ಸರ್ಕಾರಗಳಿಗೆ ಮಾತ್ರ 5 ವರ್ಷ ಅಧಿಕಾರ

- 2029ರ ಬಳಿಕ ಗೆದ್ದ ರಾಜ್ಯ ಸರ್ಕಾರಗಳಿವೆ ಪೂರ್ಣಾಧಿಕಾರ ಇಲ್ಲ, 2034ಕ್ಕೇ ಮೊಟಕು

- 2034ಕ್ಕೆ ಹೊಂದಾಣಿಕೆ ಆಗುವಂತೆ ಆಯಾ ವಿಧಾನಸಭೆಗಳ ಅಧಿಕಾರದ ಅವಧಿ ಕಡಿತ

- ಅಂದಿನಿಂದ ಲೋಕಸಭೆ ಹಾಗೂ ದೇಶದ ಎಲ್ಲ ವಿಧಾನಸಭೆಗಳಿಗೆ ಒಟ್ಟಿಗೇ ಚುನಾವಣೆ

- ನಿರಂತರ ಚುನಾವಣಾ ಸಂಹಿತೆಯಿಂದ ಅಭಿವೃದ್ಧಿಗೆ ಹೊಡೆತ । ಇದರ ತಡೆಗೆ ಏಕ ಚುನಾವಣೆ

- ಚುನಾವಣಾ ವೆಚ್ಚ ತಗ್ಗಿಸಲು ಕೂಡ ಏಕ ಹಂತದ ಚುನಾವಣೆ । ಸರ್ಕಾರದ ಮಹತ್ವದ ನಡೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ