
ಹೈದರಾಬಾದ್(ಸೆ.30): ಪುರುಷರು 60 ಕೇಜಿ ಹಾಗೂ ಸ್ತ್ರೀಯರು 50 ಕೇಜಿ ತೂಕವಿರಬೇಕು ಎಂಬ ಕಾರಣಕ್ಕೆ ನಿಮ್ಮ ತೂಕ ಇಳಿಸಲು ಪ್ರಯತ್ನಿಸುತ್ತಿದ್ದೀರಾ? ಸ್ವಲ್ಪ ನಿಲ್ಲಿ. ಇದೀಗ ಮಾದರಿ ತೂಕ ತಲಾ ಐದೈದು ಕೇಜಿ ಏರಿಕೆಯಾಗಿದೆ. ಅಂದರೆ, ಭಾರತೀಯ ಪುರುಷರ ಮಾದರಿ ತೂಕ 65 ಕೇಜಿ ಹಾಗೂ ಸ್ತ್ರೀಯರ ಮಾದರಿ ತೂಕ 55 ಕೇಜಿಗೆ ನಿಗದಿಪಡಿಸಿ ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್‌ಐಎನ್) ತನ್ನ ಮಾನದಂಡಗಳನ್ನು ಪರಿಷ್ಕರಿಸಿದೆ.
ಇದೇ ವೇಳೆ, ಈ ಹಿಂದೆ ಭಾರತೀಯ ಪುರುಷರಿಗೆ ಮಾದರಿ ಎಂದು ನಿಗದಿಪಡಿಸಿದ್ದ 5 ಅಡಿ 6 ಇಂಚು ಎತ್ತರವನ್ನು 5 ಅಡಿ 8 ಇಂಚಿಗೂ ಹಾಗೂ ಮಹಿಳೆಯರಿಗೆ ನಿಗದಿಪಡಿಸಿದ್ದ 5 ಅಡಿ ಎತ್ತರವನ್ನು 5 ಅಡಿ 3 ಇಂಚಿಗೂ ಏರಿಕೆ ಮಾಡಿದೆ. ಇನ್ನುಮುಂದೆ ಭಾರತೀಯರ ಬಾಡಿ ಮಾಸ್ ಇಂಡೆಕ್ಸ್ ಅಳೆಯುವಾಗ ಇದೇ ಮಾನದಂಡವನ್ನು ಪರಿಗಣಿಸಲಾಗುತ್ತದೆ.
ಎತ್ತರ, ತೂಕ ಏಕೆ ಬದಲಾವಣೆ:
10 ವರ್ಷಗಳ ಹಿಂದೆ ಭಾರತೀಯರಿಗೆ ಮಾದರಿ ತೂಕ ಮತ್ತು ಎತ್ತರ ನಿಗದಿಪಡಿಸುವಾಗ ಕೇವಲ ನಗರ ಪ್ರದೇಶಗಳ ಜನರು ಸೇವಿಸುವ ಪೌಷ್ಟಿಕಾಂಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಆಗ ದೇಶದಲ್ಲಿ ಸರಾಸರಿ ಪೌಷ್ಟಿಕ ಆಹಾರ ಸೇವನೆ ಪ್ರಮಾಣ ಕಡಿಮೆಯಿತ್ತು. ಈಗ ಅದು ಹೆಚ್ಚಾಗಿದೆ. ಮತ್ತು ಹೆಚ್ಚು ನಿಖರವಾಗಿ ಆರೋಗ್ಯದ ಮಾನದಂಡಗಳನ್ನು ನಿಗದಿಪಡಿಸಲು ಈಗ ಹಳ್ಳಿ ಮತ್ತು ನಗರ ಪ್ರದೇಶಗಳೆರಡರ ಪೌಷ್ಟಿಕಾಂಶ ಸೇವನೆ ಪ್ರಮಾಣ ಮತ್ತು ಜನರ ಎತ್ತರ ಹಾಗೂ ತೂಕವನ್ನು ಪರಿಗಣಿಸಲಾಗಿದೆ ಎಂದು ಎನ್‌ಐಎನ್ ವಿಜ್ಞಾನಿಗಳು ಹೇಳಿದ್ದಾರೆ.
ಅಲ್ಲದೆ, 10 ವರ್ಷಗಳ ಹಿಂದೆ ಕೇವಲ ತಜ್ಞರ ಸಮಿತಿಯ ವರದಿ ಆಧರಿಸಿ ಮತ್ತು 10 ರಾಜ್ಯಗಳ ಜನರ ಎತ್ತರ ಮತ್ತು ತೂಕವನ್ನಷ್ಟೇ ಆಧರಿಸಿ ಮಾದರಿ ತೂಕ ಮತ್ತು ಎತ್ತರ ನಿಗದಿಪಡಿಸಲಾಗಿತ್ತು. ಆದರೆ, ಈ ಬಾರಿ ಇಡೀ ದೇಶದ ದತ್ತಾಂಶಗಳನ್ನು ಬಳಸಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ರಾಷ್ಟ್ರೀಯ ಪೌಷ್ಟಿಕಾಂಶ ಮೇಲ್ವಿಚಾರಣೆ ಬ್ಯೂರೋ, ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹಾಗೂ ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ ವರದಿಗಳನ್ನು ಕ್ರೋಢೀಕರಿಸಿ ಮಾದರಿ ತೂಕ ಹಾಗೂ ಎತ್ತರವನ್ನು ಪರಿಷ್ಕರಿಸಲಾಗಿದೆ.
ಸಂಬಂಧ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಎಂಸಿಆರ್) ಹಾಗೂ ಎನ್‌ಐಎಂ ಜಂಟಿಯಾಗಿ ಸೋಮವಾರ ವರದಿ ಬಿಡುಗಡೆ ಮಾಡಿವೆ.
ಮಾದರಿ ತೂಕ
ಮುಂಚೆ ಎಷ್ಟಿತ್ತು? ಈಗ ಎಷ್ಟು?
ಪುರುಷರಿಗೆ 60 ಕೇಜಿ 65 ಕೇಜಿ
ಸ್ತ್ರೀಯರಿಗೆ 50 ಕೇಜಿ 55 ಕೇಜಿ
ಮಾದರಿ ಎತ್ತರ
ಮುಂಚೆ ಎಷ್ಟಿತ್ತು? ಈಗ ಎಷ್ಟು?
ಪುರುಷರಿಗೆ 5 ಅಡಿ 6 ಇಂಚು 5 ಅಡಿ 8 ಇಂಚು
ಸ್ತ್ರೀಯರಿಗೆ 5 ಅಡಿ 5 ಅಡಿ 3 ಇಂಚು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ