
ಹರ್ಯಾಣ(ಆ.05) ಭಜರಂಗದಳದ ಶೋಭಯಾತ್ರೆ ಮೇಲೆ ನಡೆದ ಕಲ್ಲುತೂರಾಟದಿಂದ ಆರಂಭಗೊಂಡ ಕೋಮು ಸಂಘರ್ಷ ಹರ್ಯಾಣದ ನುಹ್ ಜಿಲ್ಲೆಯನ್ನೇ ಹೊತ್ತಿ ಉರಿಸಿತ್ತು. ಅಮಾಯಕರ ಸಾವು, ಪೊಲೀಸರಿಗೆ ಗಾಯ, ಮನೆ, ವಾಹನಕ್ಕೆ ಬೆಂಕಿ ಸೇರಿದಂತೆ ಹಲವು ಅನಾಹುತಗಳೇ ನಡೆದು ಹೋಗಿದೆ. ಇದೀಗ ಈ ಕೋಮುಗಲಭೆ ತನಿಖೆ ನಡೆಯುತ್ತಿದೆ. 100ಕ್ಕೂ ಹೆಚ್ಚು ಆರೋಪಿಗಳವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಕೋಮುಸಂಘರ್ಷ ಸೃಷ್ಟಿಸಿದ ಆರೋಪಿಗಳ 15ಕ್ಕೂ ಹೆಚ್ಚಿನ ಅಕ್ರಮ ಮನೆ ಹಾಗೂ ಅಕ್ರಮ ಕಟ್ಟಡವನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ.
ನಲ್ಹಾರ್ ಮೆಡಿಕಲ್ ಕಾಲೇಜು ಆವರಣ ಸುತ್ತ 2.6 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ತಲೆಎತ್ತಿದ್ದ ಅಕ್ರಮ ಕಟ್ಟಡಗಳನ್ನು ನೆಲೆಸಮಗೊಳಿಸಲಾಗಿದೆ. ಅಕ್ರಮ ಮನೆ ಹಾಗೂ ಅಕ್ರಮ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಕೆಲ ಮಾಲೀಕರು ನುಹ್ ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ನೂಹ್ ಪಟ್ಟಣದಲ್ಲಿ ವಿಎಚ್‌ಪಿಯ ಮೆರವಣಿಗೆಯ ಮೇಲೆ ನಡೆದ ದಾಳಿಯ ಹಿಂದೆ ದೊಡ್ಡ ಪಿತೂರಿ ಕಾಣುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಘಟನೆ ಬಳಿಕ ಹೇಳಿದ್ದರು. ಇದರಂತೆ ಮೊದಲ ಹಂತದ ಕ್ರಮ ಕೈಗೊಳ್ಳಲಾಗಿದೆ.
ಇದೇ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ತೌರು ಪಟ್ಟಣದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ 250 ಗುಡಿಸಲುಗಳನ್ನು ಅಧಿಕಾರಿಗಳು ಬುಲ್ಡೋಜರ್‌ನಿಂದ ನೆಲಸಮಗೊಳಿಸಿದ್ದಾರೆ. ಇವರು ಅಕ್ರಮ ಬಾಂಗ್ಲಾ ವಲಸಿಗರಾಗಿದ್ದು ಮೊದಲು ಅಸ್ಸಾಂನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ ಗಲಭೆಗೂ ಹಾಗೂ ಈ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಾಮಾನ್ಯ ತೆರವು ಕಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೂಹ್‌ನಲ್ಲಿ ವಿಎಚ್‌ಪಿ ಹಮ್ಮಿಕೊಂಡಿದ್ದ ಶೋಭಯಾತ್ರೆಯಲ್ಲಿ ಕ್ರಿಮಿನಲ್ ಹಿನ್ನೆಲೆಯ ಗೋರಕ್ಷಕ ಮೋನು ಮನೇಸಾರ್ ಭಾಗಿಯಾಗುವುದಾಗಿ ಹೇಳಿದ್ದು, ಈ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ. ಈ ಕೋಮುಗಲಭೆ ನುಹ್ ಸಮೀಪದ ಗುರುಗ್ರಾಮಕ್ಕೂ ಹಬ್ಬಿದ್ದು, ತಡರಾತ್ರಿ ಮಸೀದಿಗೆ ನುಗ್ಗಿದ ಉದ್ರಿಕ್ತರು ಬೆಂಕಿ ಹಚ್ಚಿದ್ದರು. ಇಮಾಂ ಮೇಲೆ ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಇಮಾಂ ಮೃತಪಟ್ಟಿದ್ದಾರೆ. ಇದೇ ವೇಳೆ, ಗುರುಗ್ರಾಮದಲ್ಲಿ ಮಂಗಳವಾರ ಸಂಜೆ ವೇಳೆ ಕೆಲವು ರೆಸ್ಟೋರೆಂಟ್ ಹಾಗೂ ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚಲಾಗಿದೆ.
ಕೋಮು ಹಿಂಸಾಚಾರದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಜಡ್ಜ್ ಅಂಜಲಿ, 3 ವರ್ಷದ ಪುತ್ರಿ!
ಕೋಮು ಗಲಭೆಗೆ ಸಂಬಂಧಿಸಿದಂತೆ ಈವರೆಗೂ 176 ಜನರನ್ನು ಬಂಧಿಸಲಾಗಿದ್ದು, 78 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಹಾಗೂ 93 ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ರಾಜ್ಯ ಗೃಹ ಇಲಾಖೆ ಮುಖ್ಯಕಾರ್ಯದರ್ಶಿ ಪ್ರಸಾದ್, ‘ಗಲಭೆಗೆ ಸಂಬಂಧಿಸಿದಂತೆ ನೂಹ್‌ನಲ್ಲಿ 46, ಗುರುಗ್ರಾಮದಲ್ಲಿ 23, ಪಲ್ವಾಲ್‌ನಲ್ಲಿ 18, ಫರೀದಾಬಾದ್ ಹಾಗೂ ರೇವಾರಿಯಲ್ಲಿ ತಲಾ 3 ಎಫ್‌ಐಆರ್ ದಾಖಲಾಗಿದೆ. 176 ಜನರನ್ನು ಬಂಧಿಸಿ, 78 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನೂಹ್‌ನಲ್ಲಿ ಮೀಸಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ