ರಾಹುಲ್ ಗಾಂಧಿಗೆ ‘ಫಿಂಗರ್ 4 ಅಜ್ಞಾನ’| ಚೀನಾ ವಿಷಯದಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ನಾಯಕ| ಲಡಾಖ್‌ನಲ್ಲಿನ ಭಾರತದ ಭೂಭಾಗದ ಬಗ್ಗೆ ಅರಿವಿನ ಕೊರತೆ ಸಾಬೀತು: ಬಿಜೆಪಿ ತಿರುಗೇಟು
ನವದೆಹಲಿ(ಫೆ.13): ಪೂರ್ವ ಲಡಾಖ್ ಗಡಿಯಲ್ಲಿ ಕಳೆದ 9 ತಿಂಗಳಿಂದ ಉದ್ಭವಿಸಿದ್ದ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತ ಹಾಗೂ ಚೀನಾ ತಮ್ಮ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಆರೋಪವೊಂದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಹುಲ್ ಆರೋಪದ ವಿರುದ್ಧ ರಕ್ಷಣಾ ಸಚಿವಾಲಯ ಹಾಗೂ ಬಿಜೆಪಿ ಕಿಡಿಕಾರಿದ್ದು, ತಪ್ಪು ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.
‘ನರೇಂದ್ರ ಮೋದಿ ಅವರು ಚೀನಾಕ್ಕೆ ಭಾರತದ ಭೂಭಾಗವನ್ನು ಬಿಟ್ಟುಕೊಟ್ಟಿದ್ದಾರೆ. ಪ್ಯಾಂಗಾಂಗ್ ಸರೋವರದ ಫಿಂಗರ್ 4ರವರೆಗೂ ಭಾರತದ ಭೂಭಾಗವಿದೆ. ಆದರೆ ಈಗ ಫಿಂಗರ್ 4ನಿಂದ ಯೋಧರನ್ನು ಫಿಂಗರ್ 3ಗೆ ವಾಪಸ್ ಕರೆಸಿಕೊಳ್ಳಲಾಗಿದೆ. ಈ ಜಾಗ ಬಿಟ್ಟುಕೊಟ್ಟಿದ್ದೇಕೆ?’ ಎಂದು ರಾಹುಲ್ ಶುಕ್ರವಾರ ಪ್ರಶ್ನೆ ಮಾಡಿದ್ದಾರೆ.
ಆದರೆ ರಾಹುಲ್ ಆರೋಪವನ್ನು ರಕ್ಷಣಾ ಸಚಿವಾಲಯ ಸ್ಪಷ್ಟವಾಗಿ ಅಲ್ಲಗಳೆದಿದ್ದು, ‘ಭಾರತದ ಭೂಭಾಗ ಪ್ಯಾಂಗಾಂಗ್ ಸರೋವರದ ಫಿಂಗರ್ 4ವರೆಗೆ ಮಾತ್ರ ಇದೆ ಎಂಬುದೇ ತಪ್ಪು. ಭಾರತದ ಪರಿಕಲ್ಪನೆಯಲ್ಲಿ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಇರುವುದು ಫಿಂಗರ್ 8ರಿಂದಲೇ ಹೊರತು ಫಿಂಗರ್ 4ರಿಂದಲ್ಲ. ಹೀಗಾಗಿಯೇ ಫಿಂಗರ್ 8ರವರೆಗೂ ನಾವು ಗಸ್ತು ತಿರುಗುವ ಹಕ್ಕನ್ನು ಪ್ರತಿಪಾದಿಸಿಕೊಂಡು ಬಂದಿದ್ದೇವೆ. ನಾವು ಚೀನಾಗೆ ಯಾವುದೇ ಭಾಗ ಬಿಟ್ಟುಕೊಟ್ಟಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
ರಾಹುಲ್ ವಿರುದ್ಧ ಬಿಜೆಪಿ ಕೂಡ ಹರಿಹಾಯ್ದಿದ್ದು, ‘ತಾವು ಪ್ರಧಾನಿಯಾಗಲಿಲ್ಲ ಎಂಬ ಕಾರಣಕ್ಕೆ ರಾಹುಲ್ ಹತಾಶರಾಗಿದ್ದಾರೆ. ಅವರ ನೆರಳು ಕೂಡ ಅವರನ್ನು ಬೆಂಬಲಿಸುವುದಿಲ್ಲ. ನರೇಂದ್ರ ಮೋದಿ ಅವರಿಗೆ ದೊರೆತಿರುವ ಅಪಾರ ಜನಬೆಂಬಲವನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಗಾಂಧಿ ಕುಟುಂಬ 43 ಸಾವಿರ ಚದರ ಕಿ.ಮೀ. ಜಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಕಾರಣಕ್ಕೆ ದೇಶ ಅವರನ್ನೆಂದೂ ಕ್ಷಮಿಸುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಪ್ಯಾಂಗಾಂಗ್ ಸರೋವರದ ಪಕ್ಕದಲ್ಲಿರುವ ಗುಡ್ಡದಲ್ಲಿ 8 ಕಡಿದಾದ ಪ್ರದೇಶಗಳಿದ್ದು, ಅವನ್ನು ಫಿಂಗರ್ ಎಂದು ಕರೆಯಲಾಗುತ್ತದೆ.
ರಾಹುಲ್ ಹೇಳಿದ್ದೇನು?:
‘ಚೀನಾ ಬಿಕ್ಕಟ್ಟಿನ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಹೇಡಿ ರೀತಿ ಹೇಳಿಕೆ ನೀಡಿದ್ದಾರೆ. ನರೇಂದ್ರ ಮೋದಿ ಅವರೇಕೆ ಸಂಸತ್ತಿನಲ್ಲಿ ಹೇಳಿಕೆ ನೀಡಲಿಲ್ಲ? ನಾನು ಚೀನಾಕ್ಕೆ ಭಾರತದ ಜಾಗ ಬಿಟ್ಟುಕೊಟ್ಟಿದ್ದೇನೆ ಎಂದು ಮೋದಿ ಅವರು ಸತ್ಯ ಹೇಳಬೇಕಿತ್ತು. ಪ್ಯಾಂಗಾಂಗ್ ಸರೋವರದ ಫಿಂಗರ್ 4ವರೆಗೂ ನಮ್ಮದೇ ಜಾಗ. ಅಲ್ಲಿ ನಮ್ಮ ಪಡೆಗಳು ಇರುತ್ತಿದ್ದವು. ಈಗ ಫಿಂಗರ್ 4ನಿಂದ ಫಿಂಗರ್ 3ಕ್ಕೆ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಜಾಗವನ್ನು ಮೋದಿ ಅವರು ಚೀನಾಕ್ಕೆ ಬಿಟ್ಟುಕೊಟ್ಟಿದ್ದೇಕೆ? ಇದಕ್ಕೆ ಅವರು ಉತ್ತರ ನೀಡಬೇಕು. ಭಾರತೀಯ ಸೇನಾ ಪಡೆಗಳು ಕಷ್ಟಪಟ್ಟು ಕೈಲಾಶ್ ಪರ್ವತಶ್ರೇಣಿಯನ್ನು ವಶಪಡಿಸಿಕೊಂಡಿದ್ದವು. ಆ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಏಕೆ? ದೆಪ್ಸಾಂಗ್‌ನಂತಹ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಪ್ರದೇಶದಿಂದ ಚೀನಿಯರೇಕೆ ಹಿಂದೆ ಸರಿದಿಲ್ಲ? ಗೋಗ್ರಾ- ಹಾಟ್ ಸ್ಟ್ರಿಂಗ್‌ನಿಂದಲೂ ಅವರು ಯಾಕೆ ವಾಪಸ್ ಹೋಗಿಲ್ಲ?’ ಎಂದು ರಾಹುಲ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಇದು 100ಕ್ಕೆ ನೂರರಷ್ಟುಶುದ್ಧ ಹೇಡಿತನ. ಚೀನಾದ ಎದುರು ನಿಲ್ಲದ ಪ್ರಧಾನಿ ಅವರೊಬ್ಬ ಹೇಡಿ. ನಮ್ಮ ಸೇನೆಯ ಬಲಿದಾನಕ್ಕೆ ಅವರು ವಂಚನೆ ಎಸಗಿದ್ದಾರೆ’ ಎಂದು ಕಿಡಿಕಾರಿದರು.
ಸರ್ಕಾರ ಹೇಳೋದೇನು?:
‘ಸೇನಾ ಸಿಬ್ಬಂದಿಯ ತ್ಯಾಗದಿಂದ ಮಾಡಿದ ಸಾಧನೆಯ ಮೇಲೆ ಶಂಕೆ ಪಡುವುದು ನಿಜಕ್ಕೂ ಯೋಧರಿಗೆ ತೋರುವ ಅಗೌರವ. ಭಾರತದ ಭೂಪಟದಲ್ಲಿರುವ ಭೂಭಾಗದ ಪೈಕಿ 43 ಸಾವಿರ ಚದರ ಕಿ.ಮೀ. 1962ರಿಂದ ಚೀನಾದ ಅತಿಕ್ರಮಣದಲ್ಲಿದೆ. ಭಾರತದ ಪರಿಕಲ್ಪನೆಯ ಪ್ರಕಾರ ಎಲ್‌ಎಸಿ ಇರುವುದು ಫಿಂಗರ್ 8ರಿಂದಲೇ ಹೊರತು ಫಿಂಗರ್ 4ರಿಂದಲ್ಲ. ಹಾಗಾಗಿಯೇ ಫಿಂಗರ್ 8ರವರೆಗೂ ನಾವು ಗಸ್ತು ತಿರುಗುವ ಹಕ್ಕನ್ನು ಉಳಿಸಿಕೊಂಡಿದ್ದೇವೆ. ಪ್ಯಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳು ಶಾಶ್ವತ ನೆಲೆ ಹೊಂದಿವೆ. ಭಾರತವು ಫಿಂಗರ್ 3ರ ಬಳಿ ಇರುವ ಧಾನ್ ಸಿಂಗ್ ಥಾಪಾ ಬಳಿ ನೆಲೆ ಹೊಂದಿದ್ದರೆ, ಚೀನಾದ ನೆಲೆ ಫಿಂಗರ್ 8ರ ಪೂರ್ವಕ್ಕಿದೆ. ಭಾರತದ ಭೂಭಾಗ ಫಿಂಗರ್ 4ರವರೆಗೆ ಮಾತ್ರ ಇದೆ ಎಂಬುದೇ ತಪ್ಪು’ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ರಾಹುಲ್ ಅವರೇ ಹೇಡಿ
ನೆಹರು ಅವರು ಚೀನಾಗೆ 38 ಸಾವಿರ ಚದರ ಕಿ.ಮೀ. ಬಿಟ್ಟುಕೊಟ್ಟಿದ್ದನ್ನು ಕಾಂಗ್ರೆಸ್ ಕೊನೆಗೂ ಒಪ್ಪಿಕೊಂಡಿದೆ. ಇದು ಸಂತಸದ ವಿಷಯ. ಇದರಲ್ಲಿ ಪಾಲುದಾರನಾದ ಹೇಡಿ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ನಿರಾಧಾರ ಆರೋಪ ಮಾಡುತ್ತಿದ್ದಾರೆ.
- ಸಿ.ಟಿ. ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ
ರಾಹುಲ್ ಹೇಳಿದ್ದೇನು?
ಲಡಾಖ್‌ನಲ್ಲಿ ಫಿಂಗರ್ 4ವರೆಗಿನ ಜಾಗವೂ ನಮ್ಮದೇ. ಆದರೆ, ಪ್ರಧಾನಿ ಮೋದಿ ಸೈನ್ಯವನ್ನು ಫಿಂಗರ್ 3ಗೆ ವಾಪಸ್ ಕರೆಸಿದ್ದೇಕೆ? ಚೀನಾಕ್ಕೆ ಇವರೇ ಭೂಮಿ ಬಿಟ್ಟುಕೊಟ್ಟಿದ್ದಾರೆ.
ವಾಸ್ತವ ಸಂಗತಿ ಏನು?
ಫಿಂಗರ್ 4 ಅಲ್ಲ, ಫಿಂಗರ್ 8ರವರೆಗೂ ನಮ್ಮದೇ ಜಾಗವಿದೆ. ಅಲ್ಲಿಯವರೆಗೂ ನಾವು ಗಸ್ತು ತಿರುಗುವ ಹಕ್ಕು ಪ್ರತಿಪಾದಿಸುತ್ತಿದ್ದೇವೆ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.