
ನವದೆಹಲಿ (ಏ.23): ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಚರ್ಚಿಸಿ ಸ್ಪಷ್ಟೀಕರಣ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಯಾವಕಾಶ ನೀಡಬೇಕೆಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಪ್ರಧಾನಿ ಮೋದಿ ಮುಸ್ಲಿಮರ ಕುರಿತಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಕ್ಷೇಪಾರ್ಹ ಅಂಶವಿದೆ ಎಂದು ದ್ವೇಷ ಭಾಷಣ ಮಾಡಿದ್ದಾರೆ. ಆದರೆ ನಮ್ಮ ಪ್ರಣಾಳಿಕೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎಂಬ ಪದಗಳೇ ಇಲ್ಲ. ಈ ಕುರಿತು ಪ್ರಧಾನಿಗೆ ಅರಿಕೆ ಮಾಡಿಕೊಡಲು ಅವರು ನಮಗೆ ಅಪಾಯಿಂಟ್‌ಮೆಂಟ್ ನೀಡಬೇಕು’ ಎಂದು ತಿಳಿಸಿದರು.
ಮೋದಿ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್ ದೂರು: ರಾಜಸ್ಥಾನದ ರ್‍ಯಾಲಿ ವೇಳೆ ನೀಡಿದ ಹೇಳಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಬನ್ಸ್‌ವಾರಾ ರ್‍ಯಾಲಿ ವೇಳೆ ಮೋದಿ ಅವರು ಒಂದು ನಿರ್ದಿಷ್ಟ ಸಮುದಾಯ ಗುರಿಯಾಗಿಸಿಕೊಂಡು, ದ್ವೇಷಭರಿತ ಮತ್ತು ಪ್ರಚೋದನಕಾರಿ ಮಾತು ಆಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕರ ನಿಯೋಗ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಪ್ರಧಾನಿ ಚುನಾವಣಾ ಆಯೋಗಕ್ಕೆ ಜವಾಬ್ದಾರರಾಗಿರುತ್ತಾರೆ. ಅವರ ಪಕ್ಷ ಮತ್ತು ಅವರಿಂದ ಈ ರೀತಿಯ ಲಜ್ಜೆಗೆಟ್ಟ ಹೇಳಿಕೆ ಬಂದಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಉತ್ತರ ನೀಡಲಿ’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ಗೆದ್ದರೆ ನಿಮ್ಮ ಆಸ್ತಿ ಜಪ್ತಿ ಮಾಡಿ ಎಲ್ಲರಿಗೂ ಹಂಚುತ್ತೆ: ಪ್ರಧಾನಿ ಮೋದಿ
ಮೋದಿ ಹೇಳಿಕೆ ವಿರುದ್ಧ ಹೋರಾಟ: ಕಾಂಗ್ರೆಸ್ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆ ವಿರುದ್ಧ ಕಾಂಗ್ರೆಸ್ ಬೃಹತ್ ಹೋರಾಟ ರೂಪಿಸಿದೆ. ಪ್ರಧಾನಿ ಮೋದಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರದ ವಿಚಾರಗಳ ಬಗ್ಗೆ ಮಾತನಾಡಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ಎಂದು ಕಿಡಿಕಾರಿರುವ ಕಾಂಗ್ರೆಸ್ ಹೋರಾಟದ ಹಾದಿ ಹಿಡಿದಿದೆ. ಇದರ ಭಾಗವಾಗಿ, ರಾಜಸ್ಥಾನದಲ್ಲಿ ನೀಡಿದ ಹೇಳಿಕೆ ಆಧರಿಸಿ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅದು ಕೇಂದ್ರ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ. ಮತ್ತೊಂದೆಡೆ ಪ್ರಣಾಳಿಕೆಯಲ್ಲಿ ಇರುವ ವಾಸ್ತವ ಅಂಶಗಳ ಕುರಿತು ಮನವರಿಕೆ ಮಾಡಿಕೊಡುವ ಸಲುವಾಗಿ ಭೇಟಿಗೆ ಅವಕಾಶ ಕೊಡಿ ಎಂದು ಮೋದಿ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಯ ಕೋರಿದ್ದಾರೆ. ಇನ್ನೊಂದೆಡೆ ಪಕ್ಷದ ನಾಯಕರು ಮತ್ತು ಪಕ್ಷದ ಅಭ್ಯರ್ಥಿಗಳು ಮೋದಿಗೆ ಪಕ್ಷದ ಚುನಾವಣಾ ಪ್ರಣಾಳಿಕೆ ಪ್ರತಿ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ