ನವದೆಹಲಿ(ಅ.24): ಅಮೆರಿಕ, ಇಸ್ರೇಲ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅಭಿಯಾನ ಆರಂಭವಾಗಿರುವ ಬೆನ್ನಲ್ಲೇ, ಮುಂದಿನ ವರ್ಷದಲ್ಲಿ ಭಾರತದಲ್ಲೂ ಬೂಸ್ಟರ್ ಡೋಸ್ ಅಗತ್ಯ ಕಾಣಿಸಿಕೊಳ್ಳಬಹುದು ಎಂದು ದಿಲ್ಲಿಯ ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ಅಲ್ಲದೆ ಅಮೆರಿಕದಂತೆ ಭಾರತದಲ್ಲೂ ಶೀಘ್ರವೇ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭವಾಗಲಿದೆ ಎಂಬ ಭರವಸೆ ನೀಡಿದರು.
ಈ ಬಗ್ಗೆ ಶನಿವಾರ ಮಾತನಾಡಿದ ಅವರು, ಮೊದಲೆರಡು ಡೋಸ್‌ಗಳು ಕೋವಿಡ್ ವಿರುದ್ಧ ಎಷ್ಟುದೀರ್ಘವಾಗಿ ರಕ್ಷಣೆ ನೀಡಲಿದೆ ಎಂಬ ವಿಚಾರದ ಮೇಲೆ ಬೂಸ್ಟರ್ ಡೋಸ್ ಅಗತ್ಯತೆ ನಿರ್ಧಾರವಾಗಲಿದೆ. ಬೂಸ್ಟರ್ ಡೋಸ್ ಕುರಿತಾಗಿ ನಾವು ಇನ್ನೂ ಹೆಚ್ಚಿನ ಅಂಕಿಅಂಶಗಳನ್ನು ಅಧ್ಯಯನ ಮಾಡಬೇಕಿದೆ. ಲಸಿಕೆ ಆರಂಭವಾಗಿ ಒಂದು ವರ್ಷ ಆಗಿರುವ ಬ್ರಿಟನ್‌ನಲ್ಲಿ ಕೋವಿಡ್ ಕೇಸ್‌ಗಳು ಹೆಚ್ಚಾಗುತ್ತಿವೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ನಿಯಂತ್ರಣದಲ್ಲೇ ಇದೆ. ಅದೇ ರೀತಿ ಭಾರತದಲ್ಲಿ ಲಸಿಕೆ ಅಭಿಯಾನ ಇದೇ ವರ್ಷದ ಜನವರಿಯಲ್ಲಿ ಆರಂಭವಾಗಿತ್ತು. ಹೀಗಾಗಿ ಭಾರತ ಇನ್ನೂ ಸುರಕ್ಷಿತ ವಲಯದಲ್ಲೇ ಇದೆ. ಆದರೆ ಒಂದು ವೇಳೆ ಕೋವಿಡ್‌ನ ಹೊಸ ತಳಿಗಳು ಹುಟ್ಟಿಕೊಂಡರೆ ಆಗ ಬೂಸ್ಟರ್ ಡೋಸ್ ಅಗತ್ಯ ಎದುರಾಗಲಿದೆ ಎಂದರು.
ಕರ್ನಾಟಕದಲ್ಲಿ ಈವರೆಗೆ 5 ಕೋಟಿ Covid Test..!
ಅತಿಹೆಚ್ಚು ಸೋಂಕಿಗೆ ತುತ್ತಾಗುವ ಸಾಧ್ಯತೆಯಿರುವ ಹಿರಿಯ ನಾಗರಿಕರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆದ್ಯತೆ ಮೇರೆಗೆ ಮುಂದಿನ ವರ್ಷದಿಂದ ಬೂಸ್ಟರ್ ಡೋಸ್ ನೀಡಿಕೆ ಆರಂಭವಾಗಬಹುದು ಎಂದು ಹೇಳಿದರು.
ಮಕ್ಕಳಿಗೂ ಶೀಘ್ರ ಲಸಿಕೆ:
ಝೈಡಸ್ ಕ್ಯಾಡಿಲಾದ ಝೈಕೋವ್-ಡಿ ಲಸಿಕೆಗೆ ಈಗಾಗಲೇ ಔಷಧ ನಿಯಂತ್ರಕ ಅನುಮೋದನೆ ನೀಡಿದೆ. ಆದರೆ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿದ ಮಕ್ಕಳ ಕೋವ್ಯಾಕ್ಸಿನ್ ಲಸಿಕೆಯು ತಜ್ಞರ ಸಮಿತಿಯಲ್ಲಿ ಪಾಸ್ ಆಗಿದ್ದು, ಇದಕ್ಕೆ ಡಿಸಿಜಿಐ ಅನುಮೋದನೆ ಸಿಕ್ಕಿಲ್ಲ. ಆದರೆ ಶೀಘ್ರವೇ ಈ ಲಸಿಕೆಗೆ ಡಿಸಿಜಿಐ ಅನುಮೋದನೆ ಸಿಗುವ ನಿರೀಕ್ಷೆಯಿದ್ದು, ಆದಷ್ಟುಬೇಗ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲಾಗುತ್ತದೆ. ಕಾಯಿಲೆಪೀಡಿತ ಮಕ್ಕಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ ಎಂದು ಡಾ. ರಣದೀಪ್ ಗುಲೇರಿಯಾ ತಿಳಿಸಿದರು. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗಷ್ಟೇ ಲಸಿಕೆಗಳ ಲಭ್ಯತೆ ಆಧಾರದ ಮೇರೆಗೆ ಶೀಘ್ರವೇ ಮಕ್ಕಳಿಗೂ ಲಸಿಕೆ ನೀಡಿಕೆ ಆರಂಭಿಸಲಾಗುತ್ತದೆ ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ವಿ.ಕೆ ಪೌಲ್ ತಿಳಿಸಿದ್ದಾರೆ.