
ನವದೆಹಲಿ(ಜು.05): ಎರಡೂ ಡೋಸ್ ಲಸಿಕೆ ಪಡೆದ ಶೇ.16.1ರಷ್ಟುಜನರಲ್ಲಿ ರೂಪಾಂತರಿ ಕೊರೋನಾ ವೈರಸ್ ಆಗಿರುವ ಡೆಲ್ಟಾವಿರುದ್ಧದ ಪ್ರತಿಕಾಯಗಳೇ ಕಂಡುಬಂದಿಲ್ಲ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಕೇವಲ ಒಂದು ಡೋಸ್ ಲಸಿಕೆ ಪಡೆದ ಬರೋಬ್ಬರಿ ಶೇ.58.1ರಷ್ಟುಜನರಲ್ಲಿ ಪ್ರತಿಕಾಯ ಗೋಚರವಾಗುತ್ತಿಲ್ಲ ಎಂದೂ ವರದಿ ಹೇಳಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ದೇಶದಲ್ಲಿ ಎರಡನೇ ಅಲೆ ಅಬ್ಬರಿಸಲು ಕಾರಣಕರ್ತ ಎನ್ನಲಾಗಿರುವ ಡೆಲ್ಟಾವೈರಸ್ ಅತ್ಯಂತ ವೇಗವಾಗಿ ಹಬ್ಬುವ ಕೊರೋನಾ ಸೋಂಕಾಗಿದೆ. ಈಗಾಗಲೇ ವಿಶ್ವದ 100 ದೇಶಗಳಿಗೆ ಇದು ಹಬ್ಬಿದ್ದು, ಆ ದೇಶಗಳನ್ನು ಭೀತಿಗೆ ದೂಡಿದೆ. ಇಂತಹ ಸಂದರ್ಭದಲ್ಲಿ ಈ ವೈರಸ್ ವಿರುದ್ಧ ಪ್ರತಿಕಾಯವೇ ಕಂಡುಬರುತ್ತಿಲ್ಲದಿರುವುದು ಲಸಿಕೆಯ ಕ್ಷಮತೆಯನ್ನೇ ಪ್ರಶ್ನಿಸುವಂತಿದೆ. ಲಸಿಕೆ ಪಡೆದವರೂ ಜಾಗ್ರತೆಯಿಂದ ಇರಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದ್ದು, ಆ ವರದಿ ಮತ್ತಷ್ಟುನಿಷ್ಕರ್ಷೆಗೆ ಒಳಪಡಬೇಕಿದೆ.
ತಜ್ಞರು ಹೇಳೋದೇನು?:
ಕೊರೋನಾ ಲಸಿಕೆ ಪಡೆದವರಲ್ಲಿ ಡೆಲ್ಟಾವಿರುದ್ಧ ಪ್ರತಿಕಾಯ ಗೋಚರವಾಗಿಲ್ಲ ಎಂದಾಕ್ಷಣ ಅದು ಇಲ್ಲವೇ ಇಲ್ಲ ಎಂದರ್ಥವಲ್ಲ. ಪ್ರತಿಕಾಯಗಳ ಪ್ರಮಾಣ ಕಡಿಮೆ ಇರಬಹುದು. ಅವು ಪತ್ತೆಯಾಗದೇ ಇರಬಹುದು. ಆದರೂ ಅವು ಇರುತ್ತವೆ. ವ್ಯಕ್ತಿಯನ್ನು ಸೋಂಕು ಹಾಗೂ ಸೋಂಕಿನ ಗಂಭೀರತೆಯಿಂದ ರಕ್ಷಿಸುತ್ತವೆ ಎಂದು ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಮೈಕ್ರೋಬಯೋಲಜಿ ವಿಭಾಗದ ಮಾಜಿ ಮುಖ್ಯಸ್ಥ ಡಾ| ಟಿ. ಜಾಕೋಬ್ ಜಾನ್ ಹೇಳಿದ್ದಾರೆ.
ದೇಶದಲ್ಲಿ ಕೆಲವು ವ್ಯಕ್ತಿಗಳಿಗೆ ಹೆಚ್ಚುವರಿಯಾಗಿ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು ಎಂದು ಈ ಅಧ್ಯಯನ ಹೇಳುತ್ತಿದೆ. ಈಗಾಗಲೇ ಕೋವಿಡ್ ಸೋಂಕಿಗೆ ತುತ್ತಾದವರಿಗೆ ಕೇವಲ ಒಂದು ಡೋಸ್ ಲಸಿಕೆ ನೀಡದರೂ ಅವರಲ್ಲಿ ಪ್ರತಿರೋಧ ಶಕ್ತಿ ವೃದ್ಧಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ