ನಿತೀಶೇ ಬಿಹಾರ ಸಿಎಂ: ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಬಿಜೆಪಿ ತೆರೆ!

Published : Nov 12, 2020, 08:08 AM IST
ನಿತೀಶೇ ಬಿಹಾರ ಸಿಎಂ: ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಬಿಜೆಪಿ ತೆರೆ!

ಸಾರಾಂಶ

ನಿತೀಶೇ ಬಿಹಾರ ಸಿಎಂ: ಬಿಜೆಪಿ| ದೀಪಾವಳಿ ನಂತರ ನಿತೀಶ್‌ ಪ್ರಮಾಣ: ಜೆಡಿಯು| ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ತೆರೆ

ಪಟನಾ(ನ.12): ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷ ಜೆಡಿಯುವನ್ನು ತಾನು ಇದೇ ಮೊದಲ ಬಾರಿಗೆ ಹಿಂದಿಕ್ಕಿದ್ದರೂ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಗೊಂದಲವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಚುನಾವಣೆಗೂ ಮೊದಲೇ ಘೋಷಿಸಿದ್ದಂತೆ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಈ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದೆ. ತನ್ಮೂಲಕ, ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.

ಇದೇ ವೇಳೆ, ‘ದೀಪಾವಳಿ ನಂತರ ನಿತೀಶ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ’ ಎಂದು ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಮಾತನಾಡಿ, ‘ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದು ನಮ್ಮ ಬದ್ಧತೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಗಿಂತ ಜೆಡಿಯು ಕಮ್ಮಿ ಸ್ಥಾನ ಗಳಿಸಿರಬಹುದು. ಆದರೆ ನಾವೆಲ್ಲ ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಇದರಲ್ಲಿ ಹೆಚ್ಚು-ಕಮ್ಮಿ ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಸಮಾನರು’ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ರಾಕೇಶ್‌ ಜೈಸ್ವಾಲ್‌ ಪ್ರತಿಕ್ರಿಯಿಸಿ, ‘100ಕ್ಕೆ 100ರಷ್ಟುನಿತೀಶ್‌ ಕುಮಾರ್‌ ಅವರೇ ಮುಂದಿನ ಮುಖ್ಯಮಂತ್ರಿ. ಜೆಡಿಯು-ಬಿಜೆಪಿ ನಡುವಿನ ಸ್ಥಾನಗಳ ಅಂತರ ಇಲ್ಲಿ ನಗಣ್ಯ. ನಾವೆಲ್ಲರೂ ಸಮಾನರು’ ಎಂದು ಹೇಳಿದರು. ಆದರೆ ‘ಎನ್‌ಡಿಎ ಜಯಕ್ಕೆ ಮೋದಿ ಕಾರಣ’ ಎಂಬ ಹೇಳಿಕೆಯನ್ನೂ ಜೈಸ್ವಾಲ್‌ ನೀಡಿದರು.

ಹಮ್‌ ನೇತಾರ ಜೀತನ್‌ರಾಮ್‌ ಮಾಂಝಿ ಕೂಡ ‘ನಿತೀಶ್‌ ನಾಯಕತ್ವದಲ್ಲಿ ನಾವು ಗೆದ್ದಿದ್ದೇವೆ. ಅವರ ನಾಯಕತ್ವಕ್ಕೆ ಬಿಜೆಪಿ ಕೂಡ ಒಪ್ಪಿದೆ’ ಎಂದರು.

ಇದೇ ವೇಳೆ, ‘ನಿತೀಶ್‌ ಅವರು ಬಿಹಾರ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರಬೇಕು. ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಪ್ರತಿಕ್ರಿಯಿಸಿ, ‘ದಿಗ್ವಿಜಯ ಅವರು ಮೊದಲು ಮಧ್ಯಪ್ರದೇಶದತ್ತ ಗಮನಹರಿಸಲಿ’ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿಯೇ ಹೆಚ್ಚು ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ನಿತೀಶ್‌ರನ್ನು ಬದಿಗೆ ಸರಿಸಿ ಬಿಜೆಪಿಯವರು ಮುಖ್ಯಮಂತ್ರಿ ಆಗಬಹುದು ಎಂಬ ಊಹಾಪೋಹಗಳು ಹರಡಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ