ನೆಹರೂ ಮ್ಯೂಸಿಯಂ ಹೆಸರು ಬದಲು, ಎಲ್ಲ ಮಾಜಿ ಪ್ರಧಾನಿಗಳ ಗೌರವಿಸಲು ಈ ನಿರ್ಧಾರ!

By Suvarna NewsFirst Published Mar 30, 2022, 10:02 AM IST
Highlights

* ನೆಹರು ಮ್ಯೂಸಿಯಂನಲ್ಲಿ ಸ್ಥಾಪನೆ, ಏ.14ಕ್ಕೆ ಉದ್ಘಾಟನೆ

* ಎಲ್ಲ 14 ಮಾಜಿ ಪಿಎಂಗಳಿಗೂ ಮನ್ನಣೆ: ಪ್ರಧಾನಿ ಮೋದಿ

* ಏ.6ರಿಂದ ಸಾಮಾಜಿಕ ನ್ಯಾಯ ಸಪ್ತಾಹಕ್ಕೆ ಸಂಸದರಿಗೆ ಕರೆ

* ಏ.14ಕ್ಕೆ ದಿಲ್ಲಿಯ ಅಂಬೇಡ್ಕರ್‌ ಮ್ಯೂಸಿಯಂ ಉದ್ಘಾಟನೆ

ನವದೆಹಲಿ(ಮಾ.30): ದೇಶದ 14 ಮಾಜಿ ಪ್ರಧಾನಿಗಳು ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಗೌರವಿಸಲು ದೆಹಲಿಯ ನೆಹರು ಮ್ಯೂಸಿಯಂನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಸ್ಥಾಪನೆ ಮಾಡಿದೆ. ಇದನ್ನು ಏ.14ರಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಮೋದಿ ಅವರು, ಯಾವ ಪಕ್ಷದವರು ಎಂದು ಲೆಕ್ಕಿಸದೆ ಮಾಜಿ ಪ್ರಧಾನಿಗಳ ಕೊಡುಗೆಯನ್ನು ಗುರುತಿಸುತ್ತಿರುವ ಏಕೈಕ ಸರ್ಕಾರ ಎನ್‌ಡಿಎ ಸರ್ಕಾರವಾಗಿದೆ. ಎಲ್ಲ ಮಾಜಿ ಪ್ರಧಾನಿಗಳ ಸಾಧನೆಗೂ ಮನ್ನಣೆ ನೀಡಲಾಗಿದೆ ಎಂದು ಹೇಳಿದರು.

Latest Videos

ಸ್ವಾತಂತ್ರ್ಯಾನಂತರ 14 ಮಾಜಿ ಪ್ರಧಾನಿಗಳು ದೇಶವನ್ನು ಆಳಿದ್ದರೂ, ನೆಹರು- ಗಾಂಧಿ ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ಕಾಂಗ್ರೆಸ್‌ ನಿರ್ಲಕ್ಷಿಸಿದೆ ಎಂದು ಬಿಜೆಪಿ ಮೊದಲಿನಿಂದಲೂ ಆರೋಪ ಮಾಡಿಕೊಂಡು ಬಂದಿದೆ. ಆದರೆ ಈಗ ಮಾಜಿ ಪ್ರಧಾನಿಗಳ ಮ್ಯೂಸಿಯಂ ಸ್ಥಾಪಿಸುವ ಮೂಲಕ ಆ ಪಕ್ಷಕ್ಕೆ ಹೊಸ ಠಕ್ಕರ್‌ ನೀಡಲು ಯತ್ನಿಸಿದೆ.

ಸಾಮಾಜಿಕ ನ್ಯಾಯ ಸಪ್ತಾಹ:

ಬಿಜೆಪಿ ಸಂಸ್ಥಾಪನಾ ದಿನ ಏ.6ರಂದು ಇದ್ದು, ಅಂದಿನಿಂದ 15 ದಿನಗಳ ಕಾಲ ಸಾಮಾಜಿಕ ನ್ಯಾಯ ಸಪ್ತಾಹವನ್ನು ಬಿಜೆಪಿ ಸಂಸದರು ನಡೆಸಬೇಕು. ಜನರು ಅದರಲ್ಲೂ ವಿಶೇಷವಾಗಿ ಪರಿಶಿಷ್ಟಜಾತಿಯಂತಹ ಸಮಾಜದ ದುರ್ಬಲ ವರ್ಗದವರನ್ನು ಭೇಟಿ ಮಾಡಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ವಸತಿ, ಪೌಷ್ಟಿಕಾಂಶ, ಉಚಿತ ಆಹಾರ ಧಾನ್ಯ ಯೋಜನೆಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು ಎಂದು ಸಭೆಯ ನಂತರ ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಜನ್ಮದಿನವಾದ ಏ.14ರಂದು ದೆಹಲಿಯಲ್ಲಿ ಅಂದು ಅಂಬೇಡ್ಕರ್‌ ಮ್ಯೂಸಿಯಂ ಉದ್ಘಾಟನೆಯಾಗಲಿದೆ. ಅಲ್ಲಿಗೆ ಹೋಗಿ ಬನ್ನಿ ಎಂದು ಸಂಸದರಿಗೆ ಮೋದಿ ಸಲಹೆ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಹಾಗೂ ಪಕ್ಷದ ಹಲವು ಉನ್ನತ ನಾಯಕರು ಸಂಸದೀಯ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು. ಪ್ರತಿ ಫಲಾನುಭವಿ ಕುಟುಂಬಕ್ಕೆ 5 ಕೆ.ಜಿ. ಆಹಾರ ಧಾನ್ಯವನ್ನು ಹೆಚ್ಚುವರಿಯಾಗಿ ನೀಡುವ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯನ್ನು ಇನ್ನೂ 6 ತಿಂಗಳು ವಿಸ್ತರಿಸಿದ ಮೋದಿ ಅವರಿಗೆ ಅಭಿನಂದಿಸಿ ಹಾಗೂ ಧನ್ಯವಾದ ಹೇಳಿ ಸಂಸದೀಯ ಪಕ್ಷದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

click me!