ಮುಸ್ಲಿಂ ಮತ ದೀದಿ ಕೈಯಿಂದ ಜಾರುತ್ತಿವೆ; ಮೋದಿ ವ್ಯಂಗ್ಯ!

By Kannadaprabha NewsFirst Published Apr 7, 2021, 9:25 AM IST
Highlights

ಮುಸ್ಲಿಂ ಮತ ದೀದಿ ಕೈಯಿಂದ ಜಾರುತ್ತಿವೆ: ಮೋದಿ| ಅದಕ್ಕೇ ಮತ ಹಾಕಿ ಎಂದು ಮುಸ್ಲಿಮರಿಗೆ ಬೇಡುತ್ತಿದ್ದಾರೆ| ಬಂಗಾಳ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ವ್ಯಂಗ್ಯ

ಕೂಚ್‌ಬೆಹಾರ್(ಏ.07): ‘ಮುಸ್ಲಿಂ ಮತಗಳು ತಮ್ಮ ಕೈಯಿಂದ ಜಾರುತ್ತಿವೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ಗೊತ್ತಾಗಿದೆ. ಅದಕ್ಕೆಂದೇ ತಮಗೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂದು ದೀದಿ ಕೇಳಿಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಿಮಿತ್ತ ಮಂಗಳವಾರ ಇಲ್ಲಿ ನಡೆದ ಬಿಜೆಪಿ ರಾರ‍ಯಲಿಯಲ್ಲಿ ಮಾತನಾಡಿದ ಮೋದಿ, ‘ಈ ರೀತಿ ಜಾತಿ-ಧರ್ಮದ ಹೆಸರು ಹೇಳಿ ಮಮತಾ ಮತಯಾಚಿಸುತ್ತಿದ್ದಾರೆ. ಒಂದು ವೇಳೆ ಬಿಜೆಪಿಯೇನಾದರೂ ಮತ ಹಾಕಿ ಎಂದು ಹಿಂದೂಗಳಿಗೆ ಮನವಿ ಮಾಡಿತ್ತು ಎಂದರೆ ಎಲ್ಲರೂ ನಮ್ಮನ್ನು ಟೀಕಿಸುತ್ತಿದ್ದರು. ಚುಣಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗುತ್ತಿದ್ದೆವು’ ಎಂದು ಚಾಟಿ ಬೀಸಿದರು.

‘ಪ.ಬಂಗಾಳದಾದ್ಯಂತ ಕೇಸರಿ ಅಲೆ ಎದ್ದಿದೆ. ನಮ್ಮದೇ ಪಕ್ಷ ಮುಂದಿನ ಸರ್ಕಾರ ರಚಿಸಲಿದೆ. ಸೋಲನ್ನು ಮನಗಂಡಿರುವ ಮಮತಾ, ಈಗ ಸಿಟ್ಟಾಗುತ್ತಿದ್ದಾರೆ. ತಿಲಕಧಾರಿಗಳನ್ನು ಕಂಡರೆ ಅವರಿಗಾಗಲ್ಲ. ಅದಕ್ಕೆಂದೇ ಹತಾಶರಾಗಿ ಮುಸ್ಲಿಮರು ಸಾಮೂಹಿಕವಾಗಿ ತಮಗೆ ಮತ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ವಿದ್ಯುನ್ಮಾನ ಮತಯಂತ್ರ ಸರಿಯಿಲ್ಲ ಎಂದು ದೂರುತ್ತಿದ್ದಾರೆ’ ಎಂದು ಛೇಡಿಸಿದರು.

‘ಬಿಜೆಪಿಯೇ ಗೆಲ್ಲುತ್ತದೆ ಎನ್ನುವ ಮೋದಿ ಅವರೇನು ದೇವರಾ ಎಂದು ಮಮತಾ ಕೇಳುತ್ತಿದ್ದಾರೆ. ಬಿಜೆಪಿ ಗೆಲುವಿನ ಬಗ್ಗೆ ಹೇಳಲು ದೇವರು ಬೇಕಿಲ್ಲ. ಜನತಾ ಜನಾರ್ದನ ಮತದಾರ ದೇವರೇ ಸಾಕು’ ಎಂದು ಪ್ರಧಾನಿ ಚಾಟಿ ಬೀಸಿದರು.

2024ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಅವರು ವಾರಾಣಸಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಟಿಎಂಸಿ ನಾಯಕರ ಹೇಳಿಕೆ ಪ್ರಸ್ತಾಪಿಸಿದ ಮೋದಿ, ‘ಸೋಲನ್ನು ಸ್ವೀಕರಿಸಿ ಮಮತಾ ಇನ್ನೊಂದು ಸೀಟು ಹುಡುಕುತ್ತಿರುವ ಸಂಕೇತ ಇದು’ ಎಂದು ಕುಹಕವಾಡಿದರು.

click me!