Padyatra for Cauvery Water: ಲಾಕ್‌ಡೌನ್‌ ಜಾರಿಯಾದರೂ ಪಾದಯಾತ್ರೆ ನಿಲ್ಸಲ್ಲ: ಡಿಕೆಶಿ

By Kannadaprabha News  |  First Published Jan 4, 2022, 6:00 AM IST

* ಲಾಕ್‌ಡೌನ್‌ ಜಾರಿಯಾದರೂ ಪಾದಯಾತ್ರೆ ನಿಲ್ಸಲ್ಲ: ಡಿಕೆಶಿ

* ಕೊರೋನಾ ಕೇಸ್‌ ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿ ಯತ್ನ-ಆರೋಪ


ಮೈಸೂರು(ಜ.04): ಕೊರೋನಾ ಪ್ರಕರಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಮೇಕೆದಾಟು ಪಾದಯಾತ್ರೆ ತಡೆಯಲು ರಾಜ್ಯ ಬಿಜೆಪಿ ಸರ್ಕಾರದವರು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ. ಲಾಕ್‌ಡೌನ್‌ ಜಾರಿಯಾದರೂ ನಾವು ಪಾದಯಾತ್ರೆ ನಡೆಸುತ್ತೇವೆ. ಲಾಕ್‌ಡೌನ್‌ ಜಾರಿಗೂ ನಾವು ಹೆದರುವುದಿಲ್ಲ. ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಡಿಕೆಶಿ, ರಾಜ್ಯದ ಹಿತಕ್ಕಾಗಿ, ಜನರ ಕುಡಿಯುವ ನೀರಿಗಾಗಿ ಹೋರಾಡಲು ಶಕ್ತಿ ಕೊಡುವಂತೆ ಕೋರಿದ್ದೇನೆ. ಪಾದಯಾತ್ರೆ ಕುರಿತು ಸಚಿವರು ಏನೇನೋ ಮಾತನಾಡುತ್ತಿದ್ದಾರೆ. ವಾಜಪೇಯಿ ಕಾಲದಲ್ಲಿ ಎಲ….ಕೆ. ಅಡ್ವಾಣಿ ರಥಯಾತ್ರೆ ಮಾಡಿದ್ದರು. ಎಚ್‌.ಡಿ. ದೇವೇಗೌಡರು ಈ ಹಿಂದೆ ಬೇಕಾದಷ್ಟುಯಾತ್ರೆಗಳನ್ನು ಮಾಡಿದರು. ಅದಕ್ಕೆ ಏನಂತ ಹೇಳಬೇಕು? ಕುಮಾರಸ್ವಾಮಿ ಅವರು ಯಾತ್ರೆ ಮಾಡ್ತೀನಿ ಅಂತಾ ಇದ್ದಾರೆ. ಯಡಿಯೂರಪ್ಪನವರು ಐದು ತಂಡ ಮಾಡಿಕೊಂಡು ಯಾತ್ರೆ ಮಾಡುವುದಾಗಿ ಹೇಳಿದರು. ಇದಕ್ಕೆಲ್ಲ ಏನು ಅಂತ ಹೇಳಬೇಕು. ಎಲೆಕ್ಷನ್‌ ವೇಳೆ ಕೊರೋನಾ ಇರಲಿಲ್ವಾ ಎಂದು ಪ್ರಶ್ನಿಸಿದರು.

ನಮ್ಮ ಪಾದಯಾತ್ರೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಆದರೆ, ನಾವು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಹೋರಾಟದಲ್ಲಿ ಭಾಗಿಯಾಗುವಂತೆ ಎಲ್ಲಾ ಪಕ್ಷದ ಮುಖಂಡರು, ನಾಯಕರು, ಮಠಾಧಿಪತಿಗಳು, ಹಾಲಿ, ಮಾಜಿ ಶಾಸಕರಿಗೆ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು.

Tap to resize

Latest Videos

ಪಾದಯಾತ್ರೆಯಿಂದ ಕೊರೋನಾ ಹೆಚ್ಚಾದರೆ ಕಾಂಗ್ರೆಸ್ಸೇ ಹೊಣೆ: ಕಟೀಲ್‌

ರಾಜ್ಯದಲ್ಲೀಗ ಕೋವಿಡ್‌ ಹೆಚ್ಚಳ ಆಗುತ್ತಿರುವ ಹೊತ್ತಲ್ಲಿ ಕಾಂಗ್ರೆಸ್‌ ಪಾದಯಾತ್ರೆ ಮಾಡುತ್ತಿರುವುದು ಜನರನ್ನು ದಾರಿ ತಪ್ಪಿಸಿ ಕೊಲ್ಲುವ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದ್ದಾರೆ. ಕೋವಿಡ್‌ ಮೊದಲ ಅಲೆ, ಎರಡನೇ ಅಲೆ ಬಂದಾಗಲೂ ಕಾಂಗ್ರೆಸ್‌ನವರು ಏನನ್ನೂ ಮಾಡಿಲ್ಲ, ಟೀಕೆಯಷ್ಟೇ ಮಾಡಿದ್ದು. ಈಗ ಪಾದಯಾತ್ರೆ ಮಾಡಿ ಕೊರೋನಾವನ್ನು ವಿಸ್ತಾರ ಮಾಡಲು ನೋಡ್ತಿದಾರೆ. ಕಾಂಗ್ರೆಸ್‌ನವರ ಮೆರವಣಿಗೆಯಿಂದ ಖಂಡಿತಾ ಕೊರೋನಾ ಹೆಚ್ಚಳವಾಗುತ್ತೆ, ಇದಕ್ಕೆ ಕಾಂಗ್ರೆಸ್‌ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಮೇಕೆದಾಟು ಯೋಜನೆ ಕುರಿತು ಪಾದಯಾತ್ರೆ ನಡೆಸುವುದು ಕಾಂಗ್ರೆಸ್‌ನ ಅತ್ಯಂತ ಹೀನ ರಾಜಕಾರಣ, ಕಾಂಗ್ರೆಸ್‌ನವರು ಮೇಕೆದಾಟು ರಾಜಕಾರಣ ಮಾಡ್ತಿದಾರೆ. ಹಿಂದೆ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಮತ್ತು ಮುಖ್ಯಮಂತ್ರಿ ಇದ್ದಾಗ ಮೇಕೆದಾಟು ಬಗ್ಗೆ ಚರ್ಚೆ ಮಾಡಲಿಲ್ಲ, ತಯಾರಿ ಮಾಡಲಿಲ್ಲ ಎಂದರು.

ಕೋವಿಡ್‌ ನೆಪ ಹೇಳಿ ಏನೂಬೇಕಾದರೂ ಮಾಡಿಕೊಳ್ಳಲಿ

ಮೇಕೆದಾಟು ಯೋಜನೆಯು ನೀರಾವರಿ ಯೋಜನೆಯಲ್ಲ. ಕುಡಿಯುವ ನೀರಿನ ಯೋಜನೆ. ಈ ಯೋಜನೆಗೆ ಹಸಿರು ನ್ಯಾಯಾಧೀಕರಣ, ಸುಪ್ರೀಂಕೋರ್ಟ್‌ನಿಂದ ಯಾವುದೇ ತಡೆಯಾಜ್ಞೆ ಇಲ್ಲ. ಕೇಂದ್ರ ಪರಿಸರ ಇಲಾಖೆಯು ಎನ್‌ಒಸಿ ನೀಡಬೇಕಿದೆ. ಆದರೆ, ಡಬಲ್‌ ಎಂಜಿನ್‌ ಸರ್ಕಾರವು ಎನ್‌ಒಸಿ ನೀಡಿಲ್ಲ. ಮೇಕೆದಾಟು ಯೋಜನೆಯು ಬಿಜೆಪಿಯಿಂದಲೇ ವಿಳಂಬವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಹೊಸದಲ್ಲ. ಅದು ಬಹಳ ಹಳೆಯದಾದ ಯೋಜನೆಯಾಗಿದೆ. 1968ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಾಂಗ್ರೆಸ್‌ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ, ಹಲವಾರು ಕಾರಣಗಳಿಂದ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ ಎಂದರು.

ಅಂತಿಮವಾಗಿ ಕಾವೇರಿ ಜಲವಿವಾದವು 2018ರಲ್ಲಿ ಇತ್ಯರ್ಥವಾಯಿತು. ಈಗಾಗಲೇ ಸಾಕಷ್ಟುವಿಳಂಬವಾಗಿದೆ, ಇನ್ನಾದರೂ ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಕಾಂಗ್ರೆಸ್‌ ಪಕ್ಷ ಜ.9 ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಆದರೆ, ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್‌ ಪಾದಯಾತ್ರೆ ಮಾಡ್ತಿದೆ, ಅವರ ಅಧಿಕಾರಾವಧಿಯಲ್ಲಿ ಯೋಜನೆ ಮಾಡಿಲ್ಲ, ಇದು ಗಿಮಿಕ್‌ ಎನ್ನುತ್ತಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಬಹಳ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಕೋವಿಡ್‌ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಗಟ್ಟಲು ಸರ್ಕಾರ ಪ್ರಯತ್ನಿಸುವ ಸಾಧ್ಯತೆ ಇದೆ. ಆದರೆ, ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ. ಅವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ, ನಾವಂತೂ ಪಾದಯಾತ್ರೆ ಮಾಡುತ್ತೇವೆ ಎಂದರು.

ಮೇಕೆದಾಟು ಯೋಜನೆ ಸಂಬಂಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್‌ ಪಕ್ಷ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ಈ ವಿಚಾರದಲ್ಲಿ ಜೆಡಿಎಸ್‌ನವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಪಕ್ಷದ ಸರ್ಕಾರದ ಅಧಿಕಾರಾವಧಿಯಲ್ಲಿ ಅನಗತ್ಯವಾಗಿ ಕಾಲಹರಣ ಮಾಡಿದ್ದೇವೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ತಮಿಳುನಾಡಿನವರು ರಾಜಕೀಯ ಕಾರಣಕ್ಕಾಗಿ ಖ್ಯಾತೆ ತೆಗೆಯುತ್ತಿದ್ದಾರೆ. ಈಗಿನ ಪರಿಸ್ಥಿಯಲ್ಲಿ ಮೇಕೆದಾಟು ಯೋಜನೆಯನ್ನು ತಡೆಯಲು ತಮಿಳುನಾಡಿನವರಿಗೆ ಸಾಧ್ಯವೇ ಇಲ್ಲ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದರೆ ರಾಜ್ಯದ 2.5 ಕೋಟಿ ಜನರಿಗೆ ಅನುಕೂಲವಾಗಲಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ಬರದಂತೆ ತಡೆಯಲು ತಮಿಳುನಾಡಿನವರಿಗೆ ಬಿಜೆಪಿಯವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜಕೀಯ ಚಿತಾವಣೆಯಿಂದ ಮೇಕೆದಾಟು ಯೋಜನೆ ವಿರೋಧಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿನವರನ್ನು, ಅಣ್ಣಾಮಲೈಯನ್ನು ಎತ್ತಿಕಟ್ಟುತ್ತಿರುವವರೇ ಬಿಜೆಪಿಯವರು. ತಮಿಳುನಾಡಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ವಿಳಂಬವಾಗಲು ಬಿಜೆಪಿಯವರೇ ಕಾರಣ ಎಂದು ಅವರು ಆರೋಪಿಸಿದರು.

ರಾಜಕೀಯ ಕಾರಣಕ್ಕಾಗಿ ತಮಿಳುನಾಡು ವಿರೋಧ

ಮೇಕೆದಾಟು ಜಾರಿ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರೂ, ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿ ಯಾವುದೇ ರೀತಿಯ ತಡೆಯಾಜ್ಞೆ ನೀಡಿಲ್ಲ. ತಮಿಳುನಾಡಿನ ತಮ್ಮ ಪಾಲಿನ ನೀರನ್ನು ಪಡೆಯುವ ಹಕ್ಕು ಬಿಟ್ಟರೆ ಕಾವೇರಿ ವಿಚಾರದಲ್ಲಿ ತಕರಾರು ಎತ್ತುವ ಇನ್ಯಾವುದೇ ರೀತಿಯ ಕಾನೂನು ಹಕ್ಕುಗಳು ಇಲ್ಲ. ತಮಿಳುನಾಡಿನ ಪಾಲಿನ 177.25 ಟಿ.ಎಂ.ಸಿ ನೀರಿನ ಜೊತೆಗೆ ಈ ವರ್ಷ ಸುಮಾರು 200 ಟಿಎಂಸಿ ಕಾವೇರಿ ನೀರು ವ್ಯರ್ಥವಾಗಿ ಸಮುದ್ರ ಪಾಲಾಗಿದೆ ಎಂಬ ಮಾಹಿತಿ ಇದೆ. ಈ ವ್ಯರ್ಥವಾಗುವ ನೀರನ್ನು ಸದ್ಬಳಕೆ ಮಾಡಲು ರೂಪಿಸಿರುವ ಯೋಜನೆಯೇ ಮೇಕೆದಾಟು ಅಣೆಕಟ್ಟು. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ಈ ಯೋಜನೆಗೆ ವಿರೋಧ ಮಾಡುತ್ತಿದೆ ಅಷ್ಟೆಎಂದರು.

ಕೆಲವು ದಿನಗಳ ಹಿಂದೆ ಸಚಿವ ಗೋವಿಂದ ಕಾರಜೊಳ ಅವರು ಮೇಕೆದಾಟು ಅನುಷ್ಠಾನದಲ್ಲಿ ಕಾಂಗ್ರೆಸ್‌ ಸರ್ಕಾರ ವಿಳಂಬ ನೀತಿ ಅನುಸರಿಸಿತ್ತು. ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ, ಮುಂದೆ ಬಿಡುಗಡೆ ಮಾಡುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಅವತ್ತೇ ತಮ್ಮ ಬಳಿಯಿರುವ ಸಾಕ್ಷಿ, ದಾಖಲೆಗಳನ್ನು ಬಿಡುಗಡೆ ಮಾಡಬೇಕಿತ್ತು ಎಂದು ಅವರು ಸವಾಲು ಹಾಕಿದರು.

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಜಾರಿ ವಿರೋಧಿಸಿ ಧರಣಿ ನಡೆಸುತ್ತಿರುವುದು ಸಿ.ಟಿ. ರವಿಗೆ ಗೊತ್ತಿಲ್ಲವೇ? ಕಾವೇರಿ ನೀರನ್ನು ಹಂಚಿಕೊಂಡು ಬಾಳಬೇಕು ಎಂದು ಹಾರಿಕೆ ಉತ್ತರ ನೀಡುವ ಸಿ.ಟಿ. ರವಿ ಅವರಿಗೆ ನ್ಯಾಯಾಲಯದ ಆದೇಶದಲ್ಲಿ ತಮಿಳುನಾಡಿಗೆ ನೀರಿನ ಹಂಚಿಕೆ ಮಾಡಿರುವುದು ಗೊತ್ತಿಲ್ಲವ? ರಾಜಕೀಯ ಲಾಭಕ್ಕಾಗಿ ಮೇಕೆದಾಟು ವಿರುದ್ಧ ತಮಿಳುನಾಡಿನವರನ್ನು ಎತ್ತಿಕಟ್ಟಿರುವುದೇ ಬಿಜೆಪಿಯವರು ಎಂದು ಅವರು ದೂರಿದರು.

ತಮಿಳುನಾಡಿಗೆ ಅನುಕೂಲ:

ಮೇಕೆದಾಟು ಯೋಜನೆಯು ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ 66 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟು, ಬೇಸಿಗೆಯಲ್ಲಿ ನೀರಿನ ಕೊರತೆಯಾದಾಗ ತಮಿಳುನಾಡಿಗೂ ಬಿಡಲು ಅನುಕೂಲವಾಗುತ್ತೆ. ಈ ಯೋಜನೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ನಮ್ಮಲ್ಲಿ ಅಗತ್ಯ ಇರುವ ಕಡೆಗೆ ಕುಡಿಯುವ ನೀರನ್ನು ಒದಗಿಸಲು ಬಳಕೆ ಮಾಡಿಕೊಳ್ಳಲೂಬಹುದು. ವಿದ್ಯುತ್‌ ಉತ್ಪಾದನೆಗೆ ಬಳಕೆಯಾಗುವ ನೀರು ಕೂಡ ತಮಿಳುನಾಡಿಗೆ ಹರಿದು ಹೋಗುತ್ತೆ. ಇದರಿಂದಾಗಿ ನಮ್ಮ ಬೇರೆ ಬೇರೆ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರನ್ನು ವಿವಿಧ ಜಿಲ್ಲೆಗಳ ಜನರ ಉಪಯೋಗಕ್ಕೆ ಕೊಡಲು ಸಾಧ್ಯವಾಗುತ್ತೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ ಇದ್ದರು.

click me!