ಆಂಧ್ರದಲ್ಲಿ ಭೀಕರ ಬಸ್ ಅಪಘಾತ, ನಿದ್ದೆಯ ಮಂಪರಿನಲ್ಲಿ 13 ಪ್ರಯಾಣಿಕರು ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

Published : Mar 26, 2026, 09:23 AM IST
Andhra Bus Fire

ಸಾರಾಂಶ

ಆಂಧ್ರ ಪ್ರದೇಶದ ಮಾರ್ಕಪುರಂ ಬಳಿ ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 13 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ನಿದ್ದೆಯಲ್ಲಿದ್ದಾಗ ಸಂಭವಿಸಿದ ಈ ದುರಂತದಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಆಂಧ್ರ ಪ್ರದೇಶದಲ್ಲಿ ಬಸ್ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರ ಬದುಕನ್ನು ಕ್ಷಣಾರ್ಧದಲ್ಲಿ ಯಮರಾಜ ಕಸಿದುಕೊಂಡ ದುರ್ಘಟನೆ ಮನ ಕಲುಕುವಂತಿದೆ. ರಾಯಲಸೀಮೆ ಪ್ರದೇಶದ ಮಾರ್ಕಪುರಂ ಜಿಲ್ಲೆಯ ರಾಯವರಂ ಸಮೀಪದ ಹಲಗೆ ಕ್ವಾರಿಯ ಬಳಿ ಈ ದುರ್ಘಟನೆ ನಡೆದಿದ್ದು, ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡು 13 ಮಂದಿ ಸಜೀವ ದಹನವಾಗಿದ್ದಾರೆ

ಅಪಘಾತದ ವಿವರ

ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರಿನತ್ತ ಪ್ರಯಾಣಿಸುತ್ತಿತ್ತು. ಬೆಳಿಗ್ಗೆ ಸುಮಾರು 5ರಿಂದ 6 ಗಂಟೆಯ ನಡುವೆ, ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಜಲ್ಲಿ ಲೋಡ್ ಆಗಿದ್ದ ಟಿಪ್ಪರ್‌ಗೆ ಬಸ್‌ ಡಿಕ್ಕಿ ಹೊಡೆದಿದೆ. ಪರಿಣಾಮ ತಕ್ಷಣವೇ ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ವಾಹನವನ್ನು ಆವರಿಸಿತು.

ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರು ಇದ್ದರೆಂದು ಮಾಹಿತಿ ಇದೆ. ಅಪಘಾತ ಸಂಭವಿಸಿದ ವೇಳೆ ಬಹುತೇಕರು ನಿದ್ರೆಯಲ್ಲಿದ್ದರಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಬೆಂಕಿ ವ್ಯಾಪಕವಾಗಿ ಹರಡಿತ್ತು. ಇದರಿಂದ ಅನೇಕರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಜೀವ ದಹನವಾಗಿದ್ದಾರೆ

ಈ ಭೀಕರ ಅಪಘಾತದಲ್ಲಿ ಇದುವರೆಗೆ 13 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಸುಮಾರು 18 ರಿಂದ 20 ಮಂದಿ ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕೆಲ ಪ್ರಯಾಣಿಕರನ್ನು ಬಸ್ ಕಿಟಕಿ ಒಡೆದು ಅದರ ಮೂಲಕ ಹೊರತೆಗೆದು ಜೀವ ಉಳಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವುದರಿಂದ ಇನ್ನೂ ಕೆಲ ಶವಗಳು ಒಳಗೇ ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಮಾರ್ಕಪುರಂ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನಾಗರಾಜು ಅವರು ಮಾಹಿತಿ ನೀಡಿದ್ದು, “ಇಲ್ಲಿಯವರೆಗೆ ಗಾಯಗೊಂಡ ಸುಮಾರು 18 ಮಂದಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಸರ್ಕಾರದ ಪ್ರತಿಕ್ರಿಯೆ

ಈ ದುರ್ಘಟನೆಯ ಕುರಿತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಡಿಕ್ಕಿಯಿಂದ ಹಲವಾರು ಪ್ರಯಾಣಿಕರು ಸಜೀವ ದಹನವಾಗಿರುವ ಸುದ್ದಿ ಅವರಿಗೆ ದುಃಖ ತಂದಿದೆ ಎಂದು ತಿಳಿಸಿದ್ದಾರೆ. ಅವರು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದಾರೆ. ಇದಲ್ಲದೆ, ಅಪಘಾತದ ನಿಖರ ಕಾರಣಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಸ್ತುತ ಪೊಲೀಸರು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದು, ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿದ್ದಾರೆ. ಈ ದುರಂತ ಮತ್ತೊಮ್ಮೆ ರಸ್ತೆ ಸುರಕ್ಷತೆ ಮತ್ತು ರಾತ್ರಿ ಪ್ರಯಾಣದ ಅಪಾಯಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರರ ನಂಟು: ಆಂಧ್ರದಲ್ಲಿ ಭೀಕರ ಬಸ್ ಅಪಘಾತ, ನಿದ್ದೆಯ ಮಂಪರಿನಲ್ಲಿ 13 ಪ್ರಯಾಣಿಕರು ಸಜೀವ ದಹನ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!
Lt Gen BK Bopanna interview: ಇರಾನ್ ಹಗುರವಾಗಿ ಪರಿಗಣಿಸಿದ ಯುಎಸ್‌ಗೆ ಶಾಕ್, ಭವಿಷ್ಯದ ಯುದ್ಧ ಹೇಗಿರಲಿದೆ?