ಮುಂಬೈ(ಫೆ.15): ಬೈಕ್ ಸವಾರನೋರ್ವ ಸಾವಿನ ದವಡೆಯಿಂದ ಕ್ಷಣದಲ್ಲಿ ಪಾರಾಗಿದ್ದಾನೆ. ಮುಂಬೈನ ರೈಲ್ವೆ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ವೈರಲ್ ಆಗಿದೆ. ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾನೆ.
ಜನರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ರೈಲ್ವೆ ಹಳಿಗಳ ಬಳಿ ಅಪಘಾತಗಳು ಭಾರತದಲ್ಲಿ ಸಾಮಾನ್ಯ ಘಟನೆಯಾಗಿದೆ. ಅಂತಹದೇ ಘಟನೆ ಇದಾಗಿದ್ದು, ಬೈಕರ್‌ನ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. ರೈಲ್ವೆ ಗೇಟ್‌ಗಳಿಲ್ಲದ ರೈಲ್ವೆ ಕ್ರಾಸಿಂಗ್ ಇದಾಗಿದ್ದು, ಮುನ್ನೆಚರಿಕೆ ಇದ್ದರೂ ಈತ ರೈಲ್ವೆ ಛೇದಕವನ್ನು ದಾಟಲು ಪ್ರಯತ್ನಿಸಿ ಸಾವಿಗೆ ಆಹ್ವಾನ ನೀಡಿದ್ದ. ಆದರೆ ಈತನ ಅದೃಷ್ಟ ಚೆನ್ನಾಗಿತ್ತೇನೋ ಬದುಕುಳಿದಿದ್ದಾನೆ.
ವೀಡಿಯೊದಲ್ಲಿ, ಸವಾರನು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಅವಸರ ಅವಸರವಾಗಿ ರೈಲ್ವೆ ಹಳಿ ದಾಟುತ್ತಿರುವುದನ್ನು ಕಾಣಬಹುದು. ಆದರೆ, ಬೈಕ್‌ನ ಟೈರ್ ಟ್ರ್ಯಾಕ್‌ನಲ್ಲಿ ಸಿಲುಕಿಕೊಂಡಿದೆ. ಕೂಡಲೇ ಈತ ಬೈಕ್ ಬಿಟ್ಟು ಹಿಂದೆ ಸರಿದಿದ್ದು, ಇದೇ ಕ್ಷಣಕ್ಕೆ ವೇಗವಾದ ರೈಲೊಂದು ಆ ಟ್ರ್ಯಾಕ್‌ನಲ್ಲಿ ಪಾಸಾಗಿದೆ. ಪರಿಣಾಮ ರೈಲು ನಾಲ್ಕು ಭಾಗಗಳಾಗಿ ದೂರ ಹೋಗಿ ಬಿದ್ದಿದೆ. ಜೊತೆಗೆ ಈತನ ಜೀವವೂ ಉಳಿದಿದೆ. ಈ ವಿಡಿಯೋದಲ್ಲಿರುವ ಸಮಯದ ಪ್ರಕಾರ ಇದು ಫೆಬ್ರವರಿ 12 ರಂದು ಸಂಜೆ 6:18 ರ ಸುಮಾರಿಗೆ ನಡೆದಿದೆ. ರಾಜಧಾನಿ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಈ ಭಯಾನಕ ಘಟನೆ ಮುಂಬೈನಲ್ಲಿ ನಡೆದಿದೆ. ಈ ವಿಡಿಯೋವನ್ನು 73 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಕೆಲದಿನಗಳ ಹಿಂದೆ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಪ್ರಯಾಣಿಕನೋರ್ವ ಕೆಳಗೆ ಬಿದ್ದು ಸ್ವಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಯುವಕನನ್ನು ದೊಡ್ಡ ದುರಂತದಿಂದ ರಕ್ಷಿಸಿತ್ತು. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ನಂತರ ವ್ಯಕ್ತಿ ಬಿದ್ದಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಆರ್‌ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದರು.
ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರೈಲು ನಿಧಾನವಾಗಿ ಚಲಿಸುವಾಗ ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಒಬ್ಬ ಪ್ರಯಾಣಿಕನು ಹಠಾತ್ತನೆ ಇಳಿಯಲು ಹೋಗಿ ಜಾರಿ ಬೀಳುತ್ತಾನೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಸುರಕ್ಷಿತವಾಗಿ ಮೇಲೆಳೆದುಕೊಳ್ಳುತ್ತಾರೆ. ಫೆಬ್ರವರಿ 8 ರಂದು ಸಂಜೆ 6:15 ರ ವೇಳೆ ಈ ಘಟನೆ ನಡೆದಿದೆ.
ಫೆಬ್ರವರಿ 9 ರಂದು ಭಾರತೀಯ ರೈಲ್ವೆ ಇಲಾಖೆ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 32 ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ರೈಲ್ವೆ ಇಲಾಖೆ ಸೇವೆ ಮತ್ತು ಕಾಳಜಿಗೆ ಬದ್ಧವಾಗಿದೆ ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತ ಆರ್‌ಪಿಎಫ್ ಸಿಬ್ಬಂದಿ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಎಂದಿಗೂ ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೇ ಎಲ್ಲಾ ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ