ಪಶ್ಚಿಮ ಬಂಗಾಳ ಚುನಾವಣೆ ವೇಳೆ ನಡೆದ ಹಿಂಸಾಚಾರ ಹಾಗೂ ಪ್ರಾಥಮಿಕ ತನಿಖಾ ವರದಿ ಆಧರಿಸಿ ಚುನಾವಣಾ ಆಯೋಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಆದರೆ ಆಪ್ತರನ್ನು ಮಮತಾ ಬ್ಯಾನರ್ಜಿ 3ನೇ ಬಾರಿಗೆ ಅಧಿಕಾರಕ್ಕೇರಿದ ಬೆನ್ನಲ್ಲೇ ವಾಪಸ್ ಕರೆಯಿಸಿಕೊಂಡಿದ್ದಾರೆ.
ಕೋಲ್ಕತಾ(ಮೇ.06); ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕೂಚ್ ಬೆಹಾರ್ ಘಟನೆ ಯಾರು ಮರೆತಿಲ್ಲ. ಮತದಾನದ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದರು. ಘಟನೆ ಬೆನ್ನಲ್ಲೇ ಚುನಾವಣಾ ಆಯೋಗ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಆದರೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಅಮಾನತುಗೊಂಡಿರುವ ಅಧಿಕಾರಿಗಳನ್ನು ವಾಪಸ್ ಕರೆಯಿಸಿದ್ದಾರೆ.
3ನೇ ಬಾರಿ ಪಶ್ಚಿಮ ಬಂಗಾಳ ಸಿಎಂ ಆಗಿ ಮಮತಾ ಬ್ಯಾನರ್ಜಿ ಪ್ರಮಾಣ ವಚನ ಸ್ವೀಕಾರ!
ಸತತ 3ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಮಮತಾ ಬ್ಯಾನರ್ಜಿ 29 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ವರ್ಗಾವಣೆ ಹಾಗೂ ಬದಲಾವಣೆ ಆದೇಶದಲ್ಲಿ ಕೂಚ್ ಬೆಹಾರ್ ಹಿಂಸಾಚರದಿಂದ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೆ ವಾಪಸ್ ಸೇವೆಗೆ ಕರೆಯಿಸಿಕೊಂಡಿದ್ದಾರೆ.
ಕೂಚ್ ಬೆಹಾರ್ ಘಟನೆ ಬಳಿಕ ಚುನಾವಣಾ ಆಯೋಗ ಅಮಾನತು ಮಾಡಿದ್ದ ಡಿಜಿ ವೀರೇಂದ್ರ, ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಜಾವೇದ್ ಶಮೀಮ್ ಮತ್ತು ಡಿಜಿ ಸೆಕ್ಯುರಿಟಿ ವಿವೇಕ್ ಸಹಯ್ ಅವರನ್ನು ಹಿಂದಿನ ಸ್ಥಾನಗಳಿಗೆ ನೇಮಕ ಮಾಡಿ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ.
14 ಬಿಜೆಪಿ ಕಾರ‍್ಯಕರ್ತರ ಹತ್ಯೆ, ಲಕ್ಷ ಮಂದಿ ಗುಳೆ!
ಏಪ್ರಿಲ್ 10 ರಂದು ನಡೆದ ಮತದಾನದ ವೇಳೆ ಕೂಚ್ ಬೆಹಾರ್‌ನ ಸಿತಾಲ್‌ಕುಚಿ ಕ್ಷೇತ್ರದಲ್ಲಿ ಹಿಂಸಾಚರ ನಡೆದಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಸಿಐಎಸ್ಎಫ್ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆ ಹೊಣೆಯಾಗಿಸಿ ಕೂಚ್ ಬೆಹಾರ್ ಜಿಲ್ಲೆಯ ಎಸ್‌ಪಿ ದೇಬಾಶಿಸ್ ಧಾರ್ ಅವರನ್ನು ಮಮತಾ ಬ್ಯಾನರ್ಜಿ ಸರ್ಕಾರ ಅಮಾನತುಗೊಳಿಸಿದೆ.