ಮೊದಲ ಎರಡು ಹಂತದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಘೋಷಣೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ ಎಂದು ಈ ಹಿಂದೆ ಆರೋಪಿಸಿದ್ದ ಕಾಂಗ್ರೆಸ್, ಇದೀಗ ಈ ಕುರಿತು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರಿಗೆ ಪತ್ರ ಬರೆದಿದೆ.
ನವದೆಹಲಿ (ಮೇ.08): ಮೊದಲ ಎರಡು ಹಂತದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಘೋಷಣೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ ಎಂದು ಈ ಹಿಂದೆ ಆರೋಪಿಸಿದ್ದ ಕಾಂಗ್ರೆಸ್, ಇದೀಗ ಈ ಕುರಿತು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರಿಗೆ ಪತ್ರ ಬರೆದಿದೆ. ಈ ವ್ಯತ್ಯಾಸದ ಬಗ್ಗೆ ದನಿ ಎತ್ತಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಇತ್ತೀಚೆಗೆ ಚುನಾವಣಾ ಆಯೋಗವು ಮೊದಲ 2 ಹಂತದಲ್ಲಿ ಚಲಾವಣೆಯಾದ ಮತಗಳ ಒಟ್ಟು ಪ್ರಮಾಣವನ್ನು ತುಂಬಾ ವಿಳಂಬವಾಗಿ ಬಿಡುಗಡೆ ಮಾಡಿತ್ತು. ಆದರೆ ಹೀಗೆ ಅದು ಬಿಡುಗಡೆ ಮಾಡಿದ್ದು ಮೊದಲ ಹಂತದ ಚುನಾವಣೆ ನಡೆದು 2 ವಾರಗಳ ಬಳಿಕ ಎಂಬ ವಿಷಯ ವಿಪಕ್ಷಗಳ ಟೀಕೆಗೆ ಕಾರಣವಾಗಿದೆ.
ಈ ಬಗ್ಗೆ ಕಾಂಗ್ರೆಸ್ ಪರವಾಗಿ ಎಲ್ಲಾ ನಾಯಕರಿಗೂ ಪತ್ರ ಬರೆದಿರುವ ಖರ್ಗೆ, ‘ಮೊದಲ 2 ಹಂತದಲ್ಲಿ ಚಲಾವಣೆಯಾದ ಮತಗಳ ಘೋಷಣೆ ವೇಳೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಕೇಂದ್ರ ಚುನಾವಣಾ ಆಯೋಗದ ಸ್ವತಂತ್ರ ಕಾರ್ಯಾಚರಣೆ ಖಚಿತಪಡಿಸುವುದು ನಮ್ಮೆಲ್ಲರ ಒಗ್ಗಟ್ಟಿನ ಪ್ರಯತ್ನವಾಗಿರಬೇಕು. ಇದೀಗ ನಮ್ಮ ಮುಂದಿಡಲಾದ ಮತಗಳ ಪ್ರಮಾಣವು, ಇದು ಅಂತಿಮ ಫಲಿತಾಂಶವನ್ನು ಬದಲಿಸುವ ಪ್ರಯತ್ನವೇ ಎಂಬ ಪ್ರಶ್ನೆಯನ್ನು ನಾವು ಕೇಳುವಂತೆ ಮಾಡಿದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ಗೂ 26/11 ಉಗ್ರರಿಗೂ ನಂಟು ಇದೆಯೇ: ಪ್ರಧಾನಿ ಮೋದಿ
ಸ್ಪಂದನಶೀಲ ಪ್ರಜಾಪ್ರಭುತ್ವದ ಸಂಸ್ಕೃತಿ ಮತ್ತು ಸಂವಿಧಾನ ಕಾಪಾಡುವುದು ನಮ್ಮೆಲ್ಲರ ಹೊಣೆ. ಆದರೆ ಮೊದಲ ಎರಡು ಹಂತದ ಚುನಾವಣೆಯಲ್ಲಿ ಕಂಡುಬಂದ ಮತದಾನದ ರೀತಿ ಮತ್ತು ಅದರಿಂದ ಉಂಟಾಗಬಹುದಾದ ಫಲಿತಾಂಶವು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಹೇಗೆ ಕಂಗೆಡಿಸಿದೆ ಎಂಬುದು ನಮ್ಮ ಮುಂದಿದೆ. ಅಧಿಕಾರದ ಮದದಲ್ಲಿರುವ ಈ ಸರ್ವಾಧಿಕಾರಿ ಪ್ರಭುತ್ವವು ಕುರ್ಚಿಯಲ್ಲಿ ಉಳಿಯಲು ಏನು ಬೇಕಾದರೂ ಮಾಡಲು ಸಿದ್ಧ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಹೀಗಾಗಿ ಮತ ಘೋಷಣೆಯಲ್ಲಿ ಈ ವ್ಯತ್ಯಾಸದ ಕುರಿತು ನಾವೆಲ್ಲಾ ಒಂದಾಗಿ ಧ್ದನಿ ಎತ್ತಬೇಕಿದೆ’ ಎಂದು ಖರ್ಗೆ ಕರೆ ನೀಡಿದ್ದಾರೆ.