ಉದ್ಧವ್‌ಗೆ ಇಂದು ಮೊದಲ ಅಗ್ನಿಪರೀಕ್ಷೆ| ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಮುಹೂರ್ತ| ಮಹಾ ಮುಖ್ಯಮಂತ್ರಿಯಾಗಿ ಉದ್ಧವ್ ಪದಗ್ರಹಣ
ಮುಂಬೈ[ನ.30]: ಮಹಾರಾಷ್ಟ್ರದ 18ನೇ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಉದ್ಧವ್ ಠಾಕ್ರೆ ನೇತೃತ್ವದ ‘ಮಹಾ ವಿಕಾಸ್ ಅಘಾಡಿ’ ಸರ್ಕಾರಕ್ಕೆ ಮೊದಲ ಅಗ್ನಿ ಪರೀಕ್ಷೆ ಎದುರಾಗಲಿದೆ. ವಿಧಾನಸಭೆಯಲ್ಲಿ ಶನಿವಾರ ತಮ್ಮ ಸರ್ಕಾರದ ಬಹುಮತ ಸಾಬೀತುಪಡಿಸಲು ಉದ್ಧವ್ ನಿರ್ಧರಿಸಿದ್ದು, ಸೈದ್ಧಾಂತಿಕ ವಿರೋಧಿ ಪಕ್ಷಗಳ ಸರ್ಕಾರ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.
ಉದ್ಧವ್ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಿದ್ದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ವಿಶ್ವಾಸಮತ ಸಾಬೀತುಪಡಿಸಲು ಡಿ.3ರವರೆಗೂ ಕಾಲಾವಕಾಶ ನೀಡಿದ್ದರು. ಆದರೆ ಶನಿವಾರವೇ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಉದ್ಧವ್ ನಿರ್ಧರಿಸಿದ್ದಾರೆ. ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ ತನಗೆ 162 ಶಾಸಕರ ಬೆಂಬಲವಿದೆ ಎಂದು ಈ ಹಿಂದೆ ಹೇಳಿಕೊಂಡಿತ್ತು. ಅಷ್ಟೂಶಾಸಕರು ಸರ್ಕಾರದ ಪರ ನಿಂತರೆ ಅಗ್ನಿಪರೀಕ್ಷೆಯಲ್ಲಿ ಉದ್ಧವ್ ಸುಲಭವಾಗಿ ಪಾಸಾಗಲಿದ್ದಾರೆ.
undefined
ಅಧಿಕಾರ ಸ್ವೀಕಾರ:
ಈ ನಡುವೆ, ಮಹಾರಾಷ್ಟ್ರ ವಿಧಾನಸೌಧ ‘ಮಂತ್ರಾಲಯ’ದ 6ನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ 2ರ ಸುಮಾರಿಗೆ ಉದ್ಧವ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಬಾಂದ್ರಾದಲ್ಲಿರುವ ತಮ್ಮ ಮಾತೋಶ್ರೀ ನಿವಾಸದಿಂದ ಹೊರಟ ಉದ್ಧವ್, ಮಾರ್ಗಮಧ್ಯೆ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಬಳಿಕ ಮಂತ್ರಾಲಯದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಧವ್ ಠಾಕ್ರೆ ಸೋದರ ಸಂಬಂಧ ಹೊಂದಿದ್ದಾರೆ. ಹೀಗಾಗಿ ಕಿರಿಯ ಸೋದರನಿಗೆ ಸಹಕಾರ ನೀಡುವುದು ಮೋದಿ ಅವರ ಜವಾಬ್ದಾರಿ ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿ ಬರೆಯಲಾಗಿದೆ.