ನಾನು ಹಿಂದುತ್ವ ಬಿಟ್ಟಿಲ್ಲ, ಬಿಡೋದೂ ಇಲ್ಲ: ಠಾಕ್ರೆ

By Web Desk  |  First Published Dec 2, 2019, 10:06 AM IST

ನಾನು ಹಿಂದುತ್ವ ಬಿಟ್ಟಿಲ್ಲ, ಬಿಡೋದೂ ಇಲ್ಲ: ಠಾಕ್ರೆ| ಫಡ್ನವೀಸ್‌ರನ್ನು ಪ್ರತಿಪಕ್ಷ ನಾಯಕ ಎನ್ನಲ್ಲ: ಸಿಎಂ| ಸಮುದ್ರದ ಅಲೆ ರೀತಿ ವಾಪಸ್‌ ಬರ್ತೀನಿ: ಫಡ್ನವೀಸ್‌


ಮುಂಬೈ[ಡಿ.02]: ಕಾಂಗ್ರೆಸ್‌- ಎನ್‌ಸಿಪಿ ಜತೆ ಸೇರಿ ಸರ್ಕಾರ ರಚಿಸಿದ್ದರೂ ಹಿಂದುತ್ವ ಬಿಟ್ಟಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ನಾನು ಹಿಂದುತ್ವ ಬಿಟ್ಟಿಲ್ಲ. ಈಗಲೂ ಆ ತತ್ವ ಅನುಸರಿಸುತ್ತಿದ್ದು, ಯಾವತ್ತೂ ಬಿಡಲ್ಲ. ಕಳೆದ 5 ವರ್ಷದಲ್ಲಿ ನಾನು ಬಿಜೆಪಿ ಸರ್ಕಾರಕ್ಕೆ ದ್ರೋಹ ಎಸಗಿಲ್ಲ’ ಎಂದರು.

Tap to resize

Latest Videos

‘ನಾನು ಫಡ್ನವೀಸ್‌ ಅವರಿಂದ ಸಾಕಷ್ಟುಕಲಿತಿದ್ದೇನೆ. ಅವರನ್ನು ನಾನು ವಿಪಕ್ಷ ನಾಯಕ ಎನ್ನಲ್ಲ. ಜವಾಬ್ದಾರಿಯುತ ನಾಯಕ ಎನ್ನುವೆ’ ಎಂದು ಹೇಳಿದರು.

ಇದೇ ವೇಳೆ, ವಿಪಕ್ಷ ನಾಯಕರಾಗಿ ಆಯ್ಕೆಯಾದ ಫಡ್ನವೀಸ್‌ ಅವರಿಗೆ ಟಾಂಗ್‌ ನೀಡಿದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ‘ಕೆಲವರು ನಾನು ವಾಪಸು ಬರುವೆ (ಸಿಎಂ ಆಗಿ) ಎಂದು ಹೇಳಿದ್ದರು. ಆದರೆ ನಾನು ಸಿಎಂ ಹುದ್ದೆ ಬಯಸಿರಲೇ ಇಲ್ಲ. ಅದಾಗೇ ಒಲಿದುಬಂತು’ ಎಂದರು. ಚುನಾವಣೆಗೂ ಮುನ್ನ ಫಡ್ನವೀಸ್‌ ಅವರು ‘ಸಿಎಂ ಆಗಿ ವಾಪಸು ಬರುವೆ’ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿದ ಫಡ್ನವೀಸ್‌, ‘ನಾನು ಸಮುದ್ರದ ಅಲೆ ಇದ್ದಂತೆ. ಅಲೆ ಇಳಿದಿದೆ ಎಂದು ಭಾವಿಸಿ ನನ್ನ ದಡದಲ್ಲಿ ಮನೆ ನಿರ್ಮಿಸದಿರಿ. ನಾನು ವಾಪಸು ಬಂದು ಅಪ್ಪಳಿಸುವೆ’ ಎಂದು ಹೇಳಿದರು. ಈ ಮೂಲಕ ಪುನಃ ಸಿಎಂ ಸ್ಥಾನಕ್ಕೇರುವ ಇರಾದೆ ವ್ಯಕ್ತಪಡಿಸಿದರು.

ಸ್ಪೀಕರ್‌ ಅವಿರೋಧ ಆಯ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ನಾನಾ ಪಟೋಲೆ ಭಾನುವಾರ ಅವಿರೋಧ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್‌ ಅವರು ಪ್ರತಿಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಬಿಜೆಪಿ ಸಂಸದರಾಗಿದ್ದ ಪಟೋಲೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಂಡೆದ್ದು ಕಾಂಗ್ರೆಸ್‌ ಸೇರಿದ್ದರು. ಪಟೋಲೆ ವಿರುದ್ಧ ಬಿಜೆಪಿ ಕಿಶನ್‌ ಕಥೋರೆ ಅವರನ್ನು ಸ್ಪೀಕರ್‌ ಸ್ಥಾನದ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಲು ಯತ್ನಿಸಿತ್ತು. ಆದರೆ ಕಿಶನ್‌ ಅವರು ತಮ್ಮ ಉಮೇದುವಾರಿಕೆ ಹಿಂಪಡೆದರು. ಅಲ್ಲಿಗೆ ಪಟೋಲೆ ಅವಿರೋಧ ಆಯ್ಕೆಯಾದರು.

click me!