ಮಹಾರಾಷ್ಟ್ರ ರಾಜಕಾರಣದಲ್ಲಿ ಕಳೆದ ಹತ್ತು ದಿನಗಳಿಂದ ಭುಗಿಲೆದ್ದಿದ್ದ ರಾಜಕೀಯ ಮೇಲಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಶಿವಸೇನೆ vs ಶಿವಸೇನೆ ಯುದ್ಧದಲ್ಲಿ ಏಕನಾಥ ಶಿಂಧೆ ವಿಜಯಶಾಲಿಯಾಗಿದ್ದಾರೆ. ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಬಂಡಾಯವೆದ್ದ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತ ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಕೊನೆಯ ಕ್ಷಣದ ವರೆಗೂ ಬಿಜೆಪಿ ಅಚ್ಚರಿ ಮೇಲೆ ಅಚ್ಚರಿ ನೀಡಿತು. ಇತ್ತ ಉದ್ಧವ್ ಠಾಕ್ರೆ ಹಾಗೂ ಬಣಕ್ಕೆ ತಕ್ಕ ತಿರುಗೇಟು ನೀಡಿದೆ. ಬಿಜೆಪಿ ಹೈಕಮಾಂಡ್ ಉದ್ಧವ್ ಠಾಕ್ರೆ ಬಣಕ್ಕೆ ಬಲವಾದ ಪೆಟ್ಟು ನೀಡುವ ಸಲುವಾಗಿಯೇ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಇದೀಗ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಗಿದೆ., ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯೇ ಸರ್ಕಾರದಿಂದ ಆಚೆ ಉಳಿಯಲಿದ್ದಾರೆ. ಇದು ಮತ್ತೊಂದು ಕಾನೂನು ಸಮರಕ್ಕೆ ದಾರಿ ಮಾಡಿಕೊಡಲಿದೆ. ಶಿವಸೇನೆಯ ಮೂರನೇ ಎರಡು ಭಾಗ ಶಾಸಕರ ಬೆಂಬಲ ಹೊಂದಿರುವ ಶಿಂಧೆ, ತಮ್ಮದೇ ಪಕ್ಷ ಎನ್ನುತ್ತಾರೆ. ಬಾಳಾ ಸಾಹೇಬ ಠಾಕ್ರೆಯವರ ಉತ್ತರಾಧಿಕಾರಿ ನಾನೇ, ಶಿವಸೇನೆಗೆ ನಾನೇ ಅಧಿಪತಿ ಎಂದು ಉದ್ಧವ್ ಠಾಕ್ರೆ ಹೇಳಲಿದ್ದಾರೆ. ಇದನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗವೇ ಬರಬೇಕಿದೆ.

09:00 PM (IST) Jun 30
ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೊದಲ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ
08:18 PM (IST) Jun 30
ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್‌ಗೆ ಅಭಿನಂದನೆ. ಫಡ್ನವಿಸ್ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಅನಭವ ಹಾಗೂ ಪರಿಣಿತಿ ಸರ್ಕಾರಕ್ಕೆ ನೆರವಾಗಲಿದೆ. ಮಹಾರಾಷ್ಟ್ರದ ಅಭಿವೃದ್ಧಿ ಪಥಕ್ಕೆ ಮತ್ತಷ್ಟು ವೇಗ ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
08:14 PM (IST) Jun 30
ನೂತನ ಸಿಎಂ ಏಕನಾಥ್ ಶಿಂಧೆಗೆ ಅಭಿನಂದನೆ, ಅವರು ಶ್ರೀಮಂತ ರಾಜಕೀಯ, ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವ ಹೊಂದಿರು ಶಿಂಧೆ, ಮಹಾರಾಷ್ಟ್ರದ ಮತ್ತಷ್ಟು ಅಭಿವೃದ್ಧಿ, ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಾರೆ ಅನ್ನೋ ವಿಶ್ವಾಸವಿದೆ.
08:01 PM (IST) Jun 30
ಅಧಿಕಾರ, ಹುದ್ದೆ ಪಡೆಯುವುದು ಬಿಜೆಪಿ ಗುರಿಯಲ್ಲ, ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಹಾಗೂ ಮಹಾರಾಷ್ಟ್ರದ ಜನತೆಯ ಸೇವೆ ಮಾಡುವುದೇ ಬಿಜೆಪಿ ಗುರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಟ್ಟಾ ಟ್ವೀಟ್
07:44 PM (IST) Jun 30
ಪ್ರಮಾಣವಚನ ಸ್ವೀಕರಿಸಿದ ನೂತನ ಸಿಎಂ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡ್ನವಿಸ್‌ಗೆ ಬಿಜೆಪಿ ನಾಯಕ ಸಿಟಿ ರವಿ ಹೂಗುಚ್ಚ ನೀಡಿ ಶುಭಕೋರಿದ್ದಾರೆ.
07:42 PM (IST) Jun 30
ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಉಪಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ಸರ್ಕಾರದಲ್ಲಿ ಕೇವಲ ಇಬ್ಬರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದಾರೆ.
07:36 PM (IST) Jun 30
ಮಹಾರಾಷ್ಚ್ರದ 20ನೇ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರತಿಜ್ಞಾವಿಧಿ ಭೋದಿಸಿದರು.
07:33 PM (IST) Jun 30
ಕೆಲವೇ ಕ್ಷಣಗಲ್ಲಿ ನೂತನ ಸಿಎಂ ಆಗಿ ಏಕನಾಥ ಶಿಂದೆ ಪ್ರಮಾಣವಚನ ಸ್ವೀಕಾರ, ರಾಜಭವನಕ್ಕೆ ಆಗಮಿಸಿದ ಏಕನಾಥ್ ಶಿಂದೆ
07:06 PM (IST) Jun 30
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮಾಹಿತಿ ನೀಡಿದ್ದು, ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಕೆಲ ಹೊತ್ತಿನ ಹಿಂದೆ ನಾನು ಸರ್ಕಾರದ ಭಾಗವಾಗಿರುವುದಿಲ್ಲ, ಏಕನಾಥ ಶಿಂಧೆ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ಹೇಳಿದ್ದರು. ಅದೊಂದು ಅಚ್ಚರಿಯ ನಿರ್ಧಾರವಾಗಿತ್ತು. ಇದೀಗ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಅಧಿಕಾರದಲ್ಲಿದ್ದ ಫಡ್ನವೀಸ್ ಹೈಕಮಾಂಡ್ ಒತ್ತಾಯಕ್ಕ ಮಣಿದು, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಿಂದ ಎಲ್ಲ ರೀತಿಯ ಏಳು ಬೀಳುಗಳು, ಅಚ್ಚರಿಗಳಿಗೆ ಮಹಾರಾಷ್ಟ್ರ ರಾಜಕೀಯ ಸಾಕ್ಷಿಯಾಗಿದೆ.
06:43 PM (IST) Jun 30
ಕಡೆಯ ಕ್ಷಣದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿಯ ಮೇಲೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಇದ್ದಕ್ಕಿದ್ದಂತೆ ಏಕನಾಥ ಶಿಂಧೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಫಡ್ನವೀಸ್ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಫಡ್ನವೀಸ್ ಅವರೊಂದಿಗೆ ಮಾತನಾಡಿದ್ದು ಸರ್ಕಾರದಲ್ಲಿ ಇರಲೇಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ಸರ್ಕಾರದ ಆಡಳಿತದ ಭಾಗವಾಗಿ ಎಂದು ಫಡ್ನವೀಸ್‌ಗೆ ನಡ್ಡಾ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಮ್ಮೆ ಮುಖ್ಯಮಂತ್ರಿಯಾದ ಮೇಲೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡು ಫಡ್ನವೀಸ್ ಬರುತ್ತಾರ, ಅಥವಾ ಸಂಪುಟದಿಂದ ಆಚೆಯೇ ಉಳಿಯುತ್ತಾರ ಎಂಬುದನ್ನು ಕಾದು ನೋಡಬೇಕು.
04:57 PM (IST) Jun 30
ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆ, ಏಕನಾಥ ಶಿಂಧೆ ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಲೆಕ್ಕಾಚಾರ ಈಗ ತಲೆಕೆಳಗಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಏಕನಾಥ ಶಿಂಧೆ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. "ಶಿವಸೇನೆ ಬಾಳಾ ಸಾಹೇಬರ ವಿಚಾರಧಾರೆಗಳಿಗೆ ಧಕ್ಕೆ ಮಾಡಿ ಅಪವಿತ್ರ ಮೈತ್ರಿ ಮಾಡಿಕೊಂಡಿತ್ತು. ಇದರಿಂದ ಬೇಸರಗೊಂಡಿದ್ದ ಶಿಂಧೆ ಮತ್ತು ಇತರ ಶಿವಸೇನಾ ಶಾಸಕರು ಬಂಡಾಯವೆದ್ದು, ಅಪವಿತ್ರ ಸರ್ಕಾರದ ವಿರುದ್ಧ ಆಚೆ ಬಂದರು. ಸರ್ಕಾರ ರಚಿಸಲು ನಮ್ಮ ಸಹಾಯ ಕೋರಿದರು. ನಾವು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ನಮಗೆ ಅಧಿಕಾರ ಬೇಕಿಲ್ಲ. ನಾನು ಮಂತ್ರಿ ಮಂಡಲದಲ್ಲಿ ಇರುವುದಿಲ್ಲ. ಸಂಜೆ 7.30ಕ್ಕೆ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ನಂತರ ಶಿವಸೇನೆ ಮತ್ತು ಬಿಜೆಪಿ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಾರೆ," ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
04:48 PM (IST) Jun 30
ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು.
04:43 PM (IST) Jun 30
ಶಾಕಿಂಗ್ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪದವಿಗೆ ರೆಬೆಲ್ ನಾಯಕ ಏಕನಾಥ ಶಿಂಧೆ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಲು ನಿರ್ಧರಿಸಲಾಗಿದೆ. ಇದುವರೆಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುತ್ತಾರೆ, ಶಿಂಧೆ ಉಪ ಮುಖ್ಯಮಂತ್ರಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಕಡೆಯ ಕ್ಷಣದ ಬೆಳವಣಿಗೆಯಲ್ಲಿ ಶಿಂಧೆ ಅವರನ್ನು ಆಯ್ಕೆ ಮಾಡಲಾಗಿದೆ. ಇದು ಇನ್ನೊಂದು ರೀತಿಯಲ್ಲಿ ಶಿವಸೇನೆ ಮತ್ತು ಉದ್ಧವ್ ಠಾಕ್ರೆಗೆ ಗುದ್ದು ಕೊಟ್ಟಂತಾಗಿದೆ.
03:53 PM (IST) Jun 30
ಇಂದು ಸಂಜೆ ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2019ರಲ್ಲಿ ಚುನಾವಣೆ ನಂತರ ನಡೆದ ಬೆಳವಣಿಗೆಯಿಂದ ಫಡ್ನವೀಸ್ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದರೂ, ರಾಜೀನಾಮೆ ನೀಡುವಂತಾಗಿತ್ತು. ಆದರೆ ಮತ್ತೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದು ಅಂದೇ ಹೇಳಿದ್ದರು. ಅದರಂತೆ ಇಂದು ಸಂಜೆ ರಾಜ್ಯಪಾಲರ ಮುಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಬಂಡಾಯ ನಾಯಕ ಏಕನಾಥ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಯಿದೆ. ಗೋವಾದಿಂದ ಈಗಾಗಲೇ ಶಿಂಧೆ ಮುಂಬೈಗೆ ಬಂದಿದ್ದು, ಫಡ್ನವೀಸ್ ನಿವಾಸದಲ್ಲೇ ಇದ್ದಾರೆ.
02:34 PM (IST) Jun 30
ಬಂಡಾಯ ನಾಯಕ ಏಕನಾಥ ಶಿಂಧೆ ಬೆಂಬಲಿಗ ಶಾಸಕರೊಂದಿಗೆ ಮುಂಬೈಗೆ ತಲುಪಿದ್ದು, ಆತಿಥ್ಯಕ್ಕೆ ಹೋಟೆಲ್ ತಾಜ್ ಸಿದ್ಧವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಸರ್ಕಾರ ಪತನವಾಗುವುದು ನಿಶ್ಚಿತವಾಗಿದೆ. ಉದ್ಧವ್ ಠಾಕ್ರೆ ಈಗಾಗಲೇ ರಾಜೀನಾಮೆ ನೀಡಿದ್ದು, ನಾಳೆ ಮುಖ್ಯಮಂತ್ರಿಯಾಗಿ ಫಡ್ನವೀಸ್ ಮತ್ತು ಉಪ ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆ ಅಧಿಕಾರ ಸ್ವೀಕರಿಸಲಿದ್ದಾರೆ. ಜತೆಗೆ 12 ಬಂಡಾಯ ಶಾಸಕರಿಗೂ ಮಂತ್ರಿಸ್ಥಾನ ಸಿಗಲಿದೆ.
01:22 PM (IST) Jun 30
ಇದೀಗ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯ ಕಸರತ್ತು ತೀವ್ರಗೊಂಡಿದೆ. ಭಾರತೀಯ ಜನತಾ ಪಕ್ಷ ಮತ್ತು ಏಕನಾಥ್ ಶಿಂಧೆ ಬಣ ರಾಜ್ಯದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತ. ಏತನ್ಮಧ್ಯೆ, ದೇವೇಂದ್ರ ಫಡ್ನವಿಸ್ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಬಹುದು ಎಂಬ ಸಂಭಾವ್ಯ ಪಟ್ಟಿ ಕೂಡ ಹೊರಬಿದ್ದಿದೆ. ಪಟ್ಟಿಯ ಪ್ರಕಾರ ಏಕನಾಥ್ ಶಿಂಧೆ ಅವರನ್ನು ಉಪ ಮುಖ್ಯಮಂತ್ರಿ ಮಾಡಬಹುದು. ಹೀಗಿರುವಾಗಲೇ ಶಿವಸೇನೆಯ 12 ಬಂಡಾಯ ಶಾಸಕರು ಕೂಡಾ ಸಚಿವ ಸ್ಥಾನವನ್ನು ಪಡೆಯುವ ನಿರೀಕ್ಷೆ ಇದೆ.
ಹೊಸ ಮಹಾ ಸರಕಾರದಲ್ಲಿ ಯಾರಾಗ್ತಾರ ಮಂತ್ರಿ
10:54 AM (IST) Jun 30
ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಶಾಸಕ ಸಿಟಿ ರವಿ ಫಡ್ನವೀಸ್ ಅವರ ಮುಂಬೈ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ರಾಜಕೀಯ ಬೆಳವಣಿಗೆಗಳು ಮತ್ತು ಸದ್ಯ ಮಾಡಬೇಕಾದ ಕೆಲಸಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ನಾಳೆ ಮತ್ತೆ ಮುಖ್ಯಮಂತ್ರಿಯಾಗಿ ಫಡ್ನವೀಸ್ ಅಧಿಕಾರ ಸ್ವೀಕಾರ ಬಹುತೇಕ ಖಚಿತ ಎನ್ನಲಾಗುತ್ತಿದೆ.
10:50 AM (IST) Jun 30
ಶಿವಸೇನೆಯ ಹನ್ನೆರಡು ಬಂಡಾಯ ಶಾಸಕರಿಗೆ ಮಂತ್ರಿ ಸ್ಥಾನ ಕೊಡು ಸಾಧ್ಯತೆಯಿದೆ. ಜತೆಗೆ ದೇವೇಂದ್ರ ಫಡ್ನವೀಸ್ ನಾಳೆ ಮುಖ್ಯಮಂತ್ರಿಯಾಗಿ ಮತ್ತು ಏಕನಾಥ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಜತೆಗೆ ಸಣ್ಣಪುಟ್ಟ ಪಕ್ಷಗಳ ಶಾಸಕರು ಮತ್ತು ಸ್ವತಂತ್ರ ಶಾಸಕರಿಗೂ ಮಂತ್ರಿಮಂಡಲದಲ್ಲಿ ಸ್ಥಾನ ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು ಎಂದು ಫಡ್ನವೀಸ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
10:39 AM (IST) Jun 30
ಮಹಾರಾಷ್ಟ್ರ ಬಿಜೆಪಿ ಮತ್ತು ಬಿಜೆಪಿ ಹೈಕಮಾಂಡ್ ಫಡ್ನವೀಸ್ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. 2019ರಲ್ಲಿ ನಾನು ಮತ್ತೆ ಬರುತ್ತೇನೆ ಎಂಬ ಮಾತನ್ನು ದೇವೇಂದ್ರ ಫಡ್ನವೀಸ್ ಹೇಳಿದ್ದರು. ಅದರಂತೆ ಇದೀಗ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಸಾಧ್ಯತೆಗೂ ಇವೆ. ಏಕನಾಥ ಶಿಂಧೆ ನೇತೃತ್ವದ ಬಂಡಾಯ ಶಾಸಕರ ತಂಡ ಮುಂಬೈ ತಲುಪಲಿದ್ದು, ತಾಜ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದೆ. ಫಡ್ನವೀಸ್ ಮುಖ್ಯಮಂತ್ರಿಯಾದರೆ ಏಕನಾಥ ಶಿಂಧೆ ಉಪಮುಖ್ಯಮಂತ್ರಿಯಾಗುತ್ತಾರೆ ಎನ್ನಲಾಗುತ್ತಿದೆ. ಜತೆಗೆ ಬಂಡಾಯ ಶಾಸಕರಲ್ಲಿ ಹಿರಿಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
10:05 AM (IST) Jun 30
ಬಂಡಾಯ ನಾಯಕ ಏಕನಾಥ ಶಿಂಧೆ ನೇತೃತ್ವದಲ್ಲಿ ಗೋವಾದ ಪಂಜಿಮ್‌ನ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಶಿವಸೇನೆ ಶಾಸಕರು ನಿನ್ನೆ ತಡರಾತ್ರಿ ಸಂಭ್ರಮಾಚರಣೆ ಮಾಡಿದ್ದಾರೆ. ಬಾಳಾ ಸಾಹೇಬರ ಆದರ್ಶ ಕಡೆಗೂ ಗೆದ್ದಿದೆ, ಮಹಾ ವಿಕಾಸ ಅಘಾಢಿ ಸರ್ಕಾರ ಸೋತಿದೆ ಎಂಬ ಕಾರಣಕ್ಕೆ ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಬೆನ್ನಲ್ಲೇ ಏಕನಾಥ ಶಿಂಧೆ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಮಾತನಾಡಿದ್ದಾರೆ. ಮೂಲಗಳ ಪ್ರಕಾರ ಇಂದು ಮಧ್ಯಾಹ್ನ ಬಂಡಾಯ ಶಾಸಕರು ಮುಂಬೈ ತಲುಪಲಿದ್ದಾರೆ.
09:34 AM (IST) Jun 30
ಮಹಾ ಅಘಾಡಿ ಸರ್ಕಾರದ ಪತನಕ್ಕೆ ಮುನ್ನ ಉದ್ಧವ್ ಠಾಕ್ರೆ ಹಿಂದುತ್ವ ಅಸ್ತ್ರ ಪ್ರಯೋಗಿಸಿದ್ದಾರೆ. ಕಡೆಯ ಸಂಪುಟ ಸಭೆ ನಡೆಸಿದ ಅವರು ಔರಂಗಾಬಾದ್ ಹಾಗೂ ಉಸ್ಮಾನಾಬಾದ್ ನಗರಗಳ ಹೆಸರು ಬದಲಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಔರಂಗಾಬಾದ್ ಅನ್ನು ಸಂಭಾಜಿನಗರ ಎಂದೂ, ಉಸ್ಮಾನಾಬಾದ್ ಅನ್ನು ಧಾರಾಶಿವ ಎಂದು ಮರುನಾಮಕರಣ ಮಾಡುವ ತೀರ್ಮಾನ ಮಾಡಿದ್ದಾರೆ.
09:32 AM (IST) Jun 30
ಮಹಾರಾಷ್ಟ್ರದ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಹೊಸ ಸರಕಾರ ರಚನೆಗೆ ಪಕ್ಷಗಳು ಸಕ್ರಿಯವಾಗಿದ್ದು, ಮುಂದಿನ ಸರಕಾರದ ಬಗ್ಗೆ ಮರಾಠಿಗರ ಕುತೂಹಲ ಹೆಚ್ಚಾಗಿದೆ. ಬಿಜೆಪಿಯ ದೇವೇಂದ್ರ ಫಡ್ನಾವೀಸ್ ಸಿಎಂ ಆಗುವುದು ಬಹುತೇಕ ಖಚಿತವಾಗಿದ್ದರೂ, ರಾಜಕೀಯದಾಟಗಳು ಹೇಗೆ ನಡೆಯಬಹುದೆಂಬ ಕುತೂಹಲ ಹೆಚ್ಚಾಗಿದೆ.
09:24 AM (IST) Jun 30
ಅತ್ತ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ಇತ್ತ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿತು. ಸಂಭಾವ್ಯ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ದೇವೇಂದ್ರ ಫಡ್ನವೀಸ್ ಅವರ ಮನೆಯಲ್ಲಿ ಜಮಾಯಿಸಿದ್ದ ಬಿಜೆಪಿ ಮುಖಂಡರು ಫಡ್ನವೀಸ್ ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಇದೇ ವೇಳೆ ಪರಸ್ಪರ ಅಭಿನಂದಿಸಿಕೊಂಡು ಆನಂದಿಸಿದರು. ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಮಾಜಿ ಸಚಿವ ಸುಧೀರ್ ಮುಂಗಂಟಿವಾರ್, ಗಿರೀಶ್ ಮಹಾಜನ್ ಸೇರಿ ಅನೇಕರು ಹಾಜರಿದ್ದರು. ಸ್ಥಳದಲ್ಲಿದ್ದ ಮುಖಂಡ ಚಂದ್ರಕಾಂತ ಬಾವನ್‌ಕುಳೆ ಮಾತನಾಡಿ, ‘ಸತ್ಯ ಕೊನೆಗೂ ಗೆದ್ದಿತು. ಸಮುದ್ರದ ಅಲೆಯಂತೆ ಸದನಕ್ಕೆ ಮರಳುವೆ ಎಂದು ಹಿಂದೆ ಫಡ್ನವೀಸ್ ಹೇಳಿದ್ದರು. ಇನ್ನು ಮುಖ್ಯಮಂತ್ರಿಯಾಗಿ ವಾಪಸಾಗಲಿದ್ದಾರೆ’ ಎಂದರು.
09:23 AM (IST) Jun 30
ಮಹಾರಾಷ್ಟ್ರದ ಮುಂದಿನ ಬೆಳವಣಿಗೆಗಳು, ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿವಸೇನೆ ವಿಪ್ ಸಲ್ಲಿಸಿರುವ ಅರ್ಜಿಯ ತೀರ್ಪಿಗೆ ಒಳಪಟ್ಟಿರಲಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆಯಾದರೂ, ತಕ್ಷಣಕ್ಕೆ ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಗೆ ಯಾವುದೇ ಅಡ್ಡಿ ಇಲ್ಲ. ಹೀಗಾಗಿ ಮುಂದಿನ 50ಕ್ಕೂ ಹೆಚ್ಚು ಶಾಸಕರ ಬೆಂಬಲ ಹೊಂದಿರುವ ಏಕನಾಥ್ ಶಿಂಧೆ ಅವರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಕ್ಷಣಗಣನೆ ಆರಂಭವಾಗಿದೆ.
09:21 AM (IST) Jun 30
ಮಹಾರಾಷ್ಟ್ರದ ಮಹಾ ಅಘಾಡಿ ಸರ್ಕಾರದ ಭಾಗವಾಗಿದ್ದ ಶಿವಸೇನೆಯಲ್ಲಿ 10 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಭಾರೀ ಬಂಡಾಯ, ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಯಶಸ್ವಿಯಾಗಿದೆ. ಸಿಎಂ ಉದ್ಧವ್ ಠಾಕ್ರೆಗೆ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲ ಕೋಶಿಯಾರಿ ಬುಧವಾರ ಬೆಳಗ್ಗೆಯಷ್ಟೇ ನೀಡಿದ್ದ ಆದೇಶಕ್ಕೆ ತಡೆ ನೀಡಲು ಬುಧವಾರ ರಾತ್ರಿ ಸುಪ್ರೀಂಕೋರ್ಚ್ ನಿರಾಕರಿಸಿದ ಬೆನ್ನಲ್ಲೇ, ವಿಶ್ವಾಸಮತ ಕಳೆದುಕೊಂಡಿದ್ದ ಉದ್ಧವ್ ಠಾಕ್ರೆ ಅನ್ಯಮಾರ್ಗವಿಲ್ಲದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಎರಡೂವರೆ ಅಧಿಕಾರ ನಡೆಸಿದ್ದ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡಿದೆ. ಹೀಗಾಗಿ ಎರಡು ವಾರಗಳಿಂದ ಮೂರು ರಾಜ್ಯಗಳಿಗೆ ಹರಡಿಕೊಂಡಿದ್ದ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದೆ.