
ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅಸ್ತು ಎಂದ ಲೋಕಪಾಲಕ್ಕೆ ಸುಪ್ರೀಂ ಚಾಟಿ
ನವದೆಹಲಿ: ಹೈಕೋರ್ಟ್ ಹಾಲಿ ನ್ಯಾಯಾಧೀಶರ ವಿರುದ್ಧದ ದೂರುಗಳ ವಿಚಾರಣೆಗೆ ಅನುಮತಿ ನೀಡಿದ ಲೋಕಪಾಲರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದು ಅಕ್ರಮವಾಗಿದ್ದು, ಇಂಥ ಪ್ರವೃತ್ತಿಯು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿದೆ.2013ರ ಲೋಕಾಯುಕ್ತ ಹಾಗೂ ಲೋಕಪಾಲ ಕಾಯ್ದೆಯಲ್ಲಿ ಹೈಕೋರ್ಟ್ ಹಾಲಿ ಜಡ್ಜ್‌ಗಳು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿದೆ. ಆದರೂ ಲೋಕಪಾಲರು ಹೈಕೋರ್ಟ್ ಜಡ್ಜ್‌ಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿತು. ಬಳಿಕ ಕೇಂದ್ರ ಸರ್ಕಾರ ಹಾಗೂ ಲೋಕಪಾಲ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿತು.
ಔಷಧಗಳ ಮೇಲೆ ಟ್ರಂಪ್ ಶೇ.25 ತೆರಿಗೆ: ಭಾರತಕ್ಕೆ ಹೊಡೆತ ಬೀಳುವ ಸಂಭವ
ನವದೆಹಲಿ: ಅಧಿಕಾರ ವಹಿಸಿಕೊಂಡ ಬಳಿಕ ವಿದೇಶಿ ವಸ್ತುಗಳ ಮೇಲೆ ಒಂದರ ಮೇಲೊಂದು ತೆರಿಗೆ ಹೇರುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಔಷಧಿಗಳ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಹಾಕಲು ಮುಂದಾಗಿದ್ದಾರೆ. ಹೀಗಾದಲ್ಲಿ ಭಾರತೀಯ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗಿದೆ.ಭಾರತದಿಂದ ರಫ್ತಾಗುವ ಔಷಧಗಳ ಪ್ರಮಾಣದಲ್ಲಿ ಅಮೆರಿಕದ ಪಾಲು ಶೇ.31ರಷ್ಟಿದೆ. ಇದರ ಮೌಲ್ಯವು 2.73 ಬಿಲಿಯನ್ ಡಾಲರ್ (23478 ಕೋಟಿ ರು.) ನಷ್ಟಿದೆ.
ಅಲ್ಲದೇ ಭಾರತದ ಅಗ್ರ ಔಷಧ ತಯಾರಕ ಸನ್‌ಫಾರ್ಮಾದ ಒಟ್ಟು ಆದಾಯದಲ್ಲಿ ಅಮೆರಿಕದ ಪಾಲು ಶೇ.32ರಷ್ಟಿದ್ದರೆ, ಸಿಪ್ಲಾ ಪಾಲು ಶೇ.30ರಷ್ಟಿದೆ. ಇನ್ನು ಡಾ। ರೆಡ್ಡೀಸ್ ಆದಾಯದಲ್ಲಿ ಉತ್ತರ ಅಮೆರಿಕದ ಪಾಲು ಶೇ.47ರಷ್ಟಿದೆ. ಒಂದು ವೇಳೆ ಔಷಧ ಆಮದಿನ ಮೇಲೆ ಶೇ.25ರಷ್ಟು ತೆರಿಗೆ ಬಿದ್ದರೆ, ಭಾರತೀಯ ಕಂಪನಿಗಳಿಗೆ ಹೊಡೆತ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಪನಾಮಾದಲ್ಲಿರುವ ಭಾರತೀಯ ವಲಸಿಗರು ಸುರಕ್ಷಿತ: ಭಾರತ
ನವದೆಹಲಿ: ಅಮೆರಿಕದಿಂದ ಗಡೀಪಾರಾಗಿರುವ ಕೆಲ ಭಾರತೀಯ ಅಕ್ರಮ ವಲಸಿಗರನ್ನು ಪನಾಮಾದ ಹೋಟೆಲ್ ಒಂದರಲ್ಲಿ ಇರಿಸಲಾಗಿದ್ದು, ಅವರೆಲ್ಲಾ ಸುರಕ್ಷಿತರಾಗಿದ್ದಾರೆ ಎಂದು ಪನಾಮಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.ಕೆಲ ವಲಸಿಗರು ಹೋಟೆಲ್‌ನ ಕಿಟಕಿ ಬಳಿ ನಿಂತು ‘ಕಾಪಾಡಿ’ ಎಂದು ಕೋರಿಕೊಂಡ ಬೆನ್ನಲ್ಲೇ, ರಾಯಭಾರ ಕಚೇರಿ ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ, ‘ಅಮೆರಿಕದಿಂದ ಪನಾಮಾಕ್ಕೆ ತಲುಪಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಅಲ್ಲಿನ ಹೊಟೆಲ್‌ನಲ್ಲಿ ಎಲ್ಲಾ ಸೌಕರ್ಯಗಳೂ ಲಭ್ಯವಿದೆ. ಅವರ ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ತಿಳಿಸಲಾಗಿದೆ.
ವಲಸಿಗರನ್ನು ಸೇನಾ ವಿಮಾನಗಳಲ್ಲಿ ನೇರವಾಗಿ ಭಾರತಕ್ಕೆ ಕಳಿಸುವುದು ಸುದೀರ್ಘ ಹಾಗೂ ಅಧಿಕ ಖರ್ಚಿನ ಪ್ರಕ್ರಿಯೆಯಾಗಿರುವುದರಿಂದ ಅಮೆರಿಕ ಅವರನ್ನೆಲ್ಲಾ ಮೊದಲು ಪನಾಮಾ, ಕೋಸ್ಟರಿಕಾಗಳಲ್ಲಿ ಇಳಿಸಿ, ಬಳಿಕ ವಾಣಿಜ್ಯ ವಿಮಾನಗಳಲ್ಲಿ ಅವರವರ ದೇಶಗಳಿಗೆ ಕಳಿಸಿಕೊಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ