
ನವದೆಹಲಿ(ಜು.30): ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ಶಂಕುಸ್ಥಾಪನೆ ಕಾರ‍್ಯಕ್ರಮದಲ್ಲಿ ಭಾಗಿಯಾಗಲು ಅಯೋಧ್ಯೆಗೆ ಧಾವಿಸಬೇಡಿ, ಮನೆಯಲ್ಲಿಯೇ ಇದ್ದು ಆ ದಿನ ಸಂಜೆ 5 ಗಂಟೆಗೆ ದೀಪ ಬೆಳಗಿ ಎಂದು ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶದ ಜನರಲ್ಲಿ ಬುಧವಾರ ಮನವಿ ಮಾಡಿದೆ.
ಟ್ರಸ್ಟಿನ ಸಾಮಾನ್ಯ ಕಾರ‍್ಯದರ್ಶಿ ಚಂಪತ್ ರೈ, ‘ಐತಿಹಾಸಿಕ ಕಾರ‍್ಯಕ್ರಮದ ದಿನ ಅಯೋಧ್ಯೆಯಲ್ಲಿ ಇರಬೇಕೆಂಬ ಭಕ್ತರ ಆಸೆ ಸಹಜ. ರಾಮಜನ್ಮಭೂಮಿ ಟ್ರಸ್ಟಿಗೂ ಅದೇ ಬಯಕೆ ಇತ್ತು. ಆದರೆ ಕೊರೋನಾ ಕಾರಣದಿಂದ ಜನರು ಸೇರುವುದನ್ನು ಅನಿವಾರ‍್ಯವಾಗಿ ನಿರ್ಬಂಧಿಸಬೇಕಿದೆ. ಹಾಗಾಗಿ ಭಕ್ತರು ಅಂದು ಸಂಜೆ 5ಗಂಟೆಗೆ ಮನೆಯಲ್ಲೇ ದೀಪ ಬೆಳಗಬೇಕೆಂದು ಕೋರುತ್ತೇನೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸುತ್ತಿರುವ ಭಕ್ತರಿಗೆ ಧನ್ಯವಾದ’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮುಂದಿನ ವಾರ ಆಗಸ್ಟ್ 5 ರಂದು ರಾಮ ಜನ್ಮಭೂಮಿ ಮಂದಿರದ ಭೂಮಿ ಪೂಜೆ ನಡೆಯಲಿದೆ. ಆದರೀಗ ಇದಕ್ಕೂ ಮುನ್ನ ಸಮಸ್ಯೆಯೊಂದು ಎದುರಾಗಿದೆ. ರಾಮ ಜನ್ಮಭೂಮಿ ಮಂದಿರದ ಅರ್ಚಕ ಪ್ರದೀಪ್ ದಾಸ್ ಹಾಗೂ ಮಂದಿರ ಸುರಕ್ಷತೆಗೆ ನಿಯೋಜಿಸಿದ್ದ 16 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಪ್ರದೀಪ್ ದಾಸ್ ರಾಮ ಜನ್ಮಭೂಮಿ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ರವರ ಶಿಷ್ಯರಾಗಿದ್ದು, ರಾಮಲಲ್ಲಾ ಮಂದಿರದ ಭೂಮಿ ಪೂಜೆಯಲ್ಲೂ ಭಾಗಿಯಾಗುವವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ