
- ಟಿಜೆಎಸ್ ಜಾರ್ಜ್
ಕಾಲು ಶತಮಾನದ ನಂತರ ಈಗೊಂದು ವಿರಾಮದ ಸಮಯ ಬಂದಿದೆ. ಗೋಡೆಗೊರಗಿ ಕುಳಿತು ಬೇರೆಯವರಿಗೆ ಅವಕಾಶ ಮಾಡಿಕೊಡಲು ಇದು ಸಕಾಲ. ಅಫ್‌ಕೋರ್ಸ್, ನಾನು ಮುಂದೆಯೂ ಬರೆಯುತ್ತಿರಬೇಕು. ಆದರೆ ಪ್ರತಿ ವಾರ ಅಥವಾ ಯಾವುದೋ ನಿರ್ದಿಷ್ಟ ದಿನಾಂಕ ಅಥವಾ ಯಾವುದೋ ನಿರ್ದಿಷ್ಟಜಾಗಕ್ಕೆ ಅಲ್ಲ. ಹೋರಾಟ ಮುಂದುವರೆಯಬೇಕು.
ಎಲ್ಲಾ ಒಳ್ಳೆಯ ಸಂಗತಿಗಳೂ ಕೊನೆಯಾಗಬೇಕು. ಈ ಅಂಕಣ ಎಕ್ಸ್‌ಪ್ರೆಸ್ ಫೀಚರ್ ರೂಪದಲ್ಲಿ 1997ರಲ್ಲಿ ಆರಂಭವಾಯಿತು. ಅಂದಿನಿಂದ ಯಾವುದೇ ಬ್ರೇಕ್ ಇಲ್ಲದೆ ಕಾಲು ಶತಮಾನದ ಕಾಲ ನಡೆದುಬಂದಿದೆ. ನಿಜವಾಗಿಯೂ ಅದು ಬಹಳ ಸುದೀರ್ಘವಾದ ಓಟ. ವರ್ಷಕ್ಕೆ 52 ವಾರದಂತೆ 25 ವರ್ಷಗಳ ಕಾಲ ಬರೆದ ಅಂಕಣಗಳ ಸಂಖ್ಯೆ ಅಬ್ಬಬ್ಬಾ ಅನ್ನುವಂತೆ ಕನಿಷ್ಠ 1300 ಆದರೂ ಆಗಿರಬೇಕು. ‘ನೇರ ಮಾತು’ ಹೆಸರಿನಲ್ಲಿ ನೀವದನ್ನು ಓದಿರುತ್ತೀರಿ.
ಈ ದಾರಿಯಲ್ಲಿ ತೊಡಕುಗಳೂ, ಸಮಸ್ಯೆಗಳೂ ಇದ್ದವು. ಆದರೆ ಅವು ನನ್ನ ಬರವಣಿಗೆಯ ಹರಿವಿಗೆ ಅಡ್ಡಿ ಮಾಡಲಿಲ್ಲ. ಕರ್ತವ್ಯದ ಕರೆ ಯಾವಾಗಲೂ ಗೆದ್ದಿತು. ಬರವಣಿಗೆಯೇ ವೃತ್ತಿಯಾದವನಿಗೆ ಡೆಡ್‌ಲೈನ್ ಅಂದರೆ ಡೆಡ್‌ಲೈನೇ. ಅದನ್ನು ಕಡೆಗಣಿಸುವುದು ತಪ್ಪಾಗುತ್ತದೆ. ಪತ್ರಿಕೋದ್ಯಮದಲ್ಲಿ ತಪ್ಪು ಮಾಡುವ ಆಯ್ಕೆ ಯಾರಿಗೂ ಇರುವುದಿಲ್ಲ. ಏಕೆಂದರೆ ಬರಹಗಾರ ಓದುಗರ ಗುಡ್‌ವಿಲ್‌ನಲ್ಲಿ ಬದುಕುತ್ತಾನೆ.
ಕೆಲ ಸಮಯ ನಾನು ಹಾಂಗ್‌ಕಾಂಗ್‌ನಲ್ಲಿದ್ದೆ. ಅಲ್ಲೊಂದು ಚೈನೀಸ್ ಭಾಷೆಯ ಪೇಪರ್ ಓದುತ್ತಿದ್ದೆ. ಅದರ ಹೆಸರು ದಿ ಹಾಂಗ್‌ಕಾಂಗ್ ಎಕನಾಮಿಕ್ ಜರ್ನಲ್. ಅದರಲ್ಲಿ ಲಮ್ ಶನ್ ಮುಕ್ ಹೆಚ್ಚುಕಮ್ಮಿ 50 ವರ್ಷಗಳ ಕಾಲ ಯಾವುದೇ ವಿರಾಮವಿಲ್ಲದೆ ಕಾಲಂ ಬರೆಯುತ್ತಿದ್ದರು. ಐವತ್ತು ವರ್ಷ ಅಂದರೆ ಹುಡುಗಾಟವಲ್ಲ! ಆದರೆ ಆ ಪತ್ರಿಕೆಯ ಸಂಸ್ಥಾಪಕನೇ ಲಮ್ ಆಗಿದ್ದರು. ಅದು ಅವರ ಬದುಕಾಗಿತ್ತು. ಹೀಗಾಗಿ ಪ್ರತಿ ಸಂಚಿಕೆಯಲ್ಲೂ ಬರೆದರು. ಲಮ್ ಇಲ್ಲದೆ ಎಚ್‌ಕೆಇ ಪತ್ರಿಕೆ ಇರಲಿಲ್ಲ, ಎಚ್‌ಕೆಇ ಇಲ್ಲದೆ ಲಮ್ ಇರಲಿಲ್ಲ.
ಹಾಗಂತ ತಮ್ಮ ಪತ್ರಿಕೆಯ ವಿಷಯದಲ್ಲಿ ಎಲ್ಲ ಅಂಕಣಕಾರರೂ ಲಮ್ ಆಗಿರುವುದಿಲ್ಲ. ಅಥವಾ ಎಲ್ಲಾ ಪತ್ರಿಕೆಗಳ ಅಂಕಣಕಾರರೂ ವರವರ ರಾವ್ ಎದುರಿಸಿದಂತಹ ನಿರ್ಬಂಧಗಳನ್ನು ಎದುರಿಸಬೇಕಾಗಿ ಬರುವುದಿಲ್ಲ. ಅವರ ಅಂಕಣಗಳ ಸಂಗ್ರಹವನ್ನು ‘ವರವರ ರಾವ್: ಎ ರೆವಲ್ಯೂಷನರಿ ಪೋಯಟ್’ ಹೆಸರಿನಲ್ಲಿ ಪುಸ್ತಕವಾಗಿ ಪ್ರಕಟಿಸಿದವರು ಹಿಂದುತ್ವ, ಸಂಘ ಪರಿವಾರ ಮತ್ತು ಕೇಸರೀಕರಣದಂತಹ ಪದಗಳನ್ನು ಅನಾಮತ್ತಾಗಿ ತೆಗೆದೇಬಿಟ್ಟಿದ್ದರು. (ಸುದೀರ್ಘ ಕಾಲ ಜೈಲಿನಲ್ಲಿದ್ದ ವರವರ ರಾವ್ ಈಗ ವೈದ್ಯಕೀಯ ಕಾರಣಕ್ಕೆ ಜಾಮೀನು ಪಡೆದು ಹೊರಗಿದ್ದಾರೆ.)
ಅಂಕಣಕಾರನಾಗಿ ನನಗೆ ಸಿಗಬೇಕಾದ್ದೆಲ್ಲವೂ ಸಿಕ್ಕಿದೆ. ಅದಕ್ಕೆ ಮುಖ್ಯ ಕಾರಣ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಓದುಗರ ವಿಸ್ತಾರವಾದ ಆಸಕ್ತಿಗಳು. ಅದೇ ರೀತಿ, ಓದುಗರ ನಿರೀಕ್ಷೆಗೆ ತಕ್ಕಂತೆ ತನ್ನನ್ನು ರೂಪಿಸಿಕೊಳ್ಳುವ ಎಕ್ಸ್‌ಪ್ರೆಸ್‌ನ ಗುಣ ಕೂಡ ನನಗೆ ಪೂರಕವಾಗಿ ಒದಗಿಬಂತು. ಈ ಅಂಕಣಗಳ ಆಯ್ದ ಬರಹಗಳು 2003ರಲ್ಲಿ ‘ದಿ ಫಸ್ಟ್ ರೆಫä್ಯಜ್ ಆಫ್ ಸ್ಕೌಂಡ್ರಲ್ಸ್’ ಎಂಬ ಪುಸ್ತಕವಾಗಿ ಪ್ರಕಟವಾದವು. ಅದರ ಹಿಂಬದಿಯ ಪುಟದಲ್ಲಿದ್ದ ಬ್ಲರ್ಬ್‌ನಲ್ಲಿ ‘ಏಕೆ ಭ್ರಷ್ಟಾಚಾರ ಬಹಳ ಸುಂದರ, ಏಕೆ ಚುನಾವಣೆಗಳು ಇರುವುದೇ ಫಿಕ್ಸಿಂಗ್ ಮಾಡುವುದಕ್ಕೆ ಹಾಗೂ ಏಕೆ ಧರ್ಮಗಳಿರುವುದು ಶೋಷಿಸುವುದಕ್ಕೆ’ ಎಂಬುದು ಈ ಪುಸ್ತಕದಲ್ಲಿ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಲಾಗಿತ್ತು.
ಕೆಲವರಿಗೆ ನಾವು ನಮ್ಮದೇ ದೇಶವನ್ನು ಟೀಕಿಸುವುದು ಸರಿಯಲ್ಲ ಅನ್ನಿಸುತ್ತದೆ. ಇನ್ನು ಕೆಲವರು ಇದಕ್ಕೆ ತದ್ವಿರುದ್ಧ ನಿಲುವು ಹೊಂದಿರುತ್ತಾರೆ. ಈ ಎರಡನೆಯವರ ಪ್ರಕಾರ ಭಾರತದಂತಹ ದೊಡ್ಡ ದೇಶದಲ್ಲಿ ನಾವು ವ್ಯವಸ್ಥೆಯನ್ನು ಟೀಕಿಸುತ್ತಾ ತಪ್ಪುಗಳಾಗುವುದನ್ನು ತಡೆಯಬೇಕು. ಇಂತಹ ಎಲ್ಲ ವಾದಕ್ಕೂ ಅದರದೇ ಆದ ಬೆಂಬಲಿಗರೂ ಟೀಕಾಕಾರರೂ ಇರುತ್ತಾರೆ ಬಿಡಿ. ಆದರೆ, ಯಾವುದೇ ದೇಶದ ನಾಯಕರು ತಮ್ಮನ್ನು ಯಾರೂ ಟೀಕಿಸಲೇಬಾರದು, ಅದರಲ್ಲೂ ಪತ್ರಿಕೆಯವರು ಟೀಕಿಸಬಾರದು, ಎಂದು ಯೋಚಿಸುವ ಹಂತಕ್ಕೆ ತಲುಪಿದರೆ ಆಗ ಆ ದೇಶದಲ್ಲಿ ಏನೋ ಸರಿಯಿಲ್ಲ ಎಂದರ್ಥ.
ಅದೃಷ್ಟವಶಾತ್ ಟೀಕೆ ಮಾಡುವುದೇ ದೇಶದ್ರೋಹ ಎಂಬಂತಹ ಹಂತವನ್ನು ನಮ್ಮ ದೇಶ ತಲುಪಿಲ್ಲ. ಆದರೂ ಕೆಲವೊಮ್ಮೆ ಅದರ ಸಮೀಪಕ್ಕೆ ಹೋಗಿದ್ದಿದೆ. 2014ರ ನಂತರ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಮೇಲೆ ಭಾರತದಲ್ಲಿ ಸಾಂಸ್ಕೃತಿಕ ಪುನರುತ್ಥಾನವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದೊಂದು ಥಿಯರಿ ಇದೆ. ‘ಸಂಸ್ಕೃತಿ’ ಎಂಬುದು ಎಂತಹ ವಿಶಿಷ್ಟಪದವೆಂದರೆ ಅದನ್ನು ವ್ಯಾಖ್ಯಾನಿಸುವವರ ಸಂಸ್ಕೃತಿಗೆ ತಕ್ಕಂತೆ ನೀವು ಎಷ್ಟುರೀತಿಯಲ್ಲಿ ಬೇಕಾದರೂ ವ್ಯಾಖ್ಯಾನಿಸಬಹುದು. ಹಾಗಾಗಿ ಅಮಿತ್ ಶಾ ಹೇಳುವ ಸಾಂಸ್ಕೃತಿಕ ಪುನರುತ್ಥಾನವು ಅಮಿತ್ ಶಾ ಯಾವುದನ್ನು ಸಂಸ್ಕೃತಿ ಎಂದು ಭಾವಿಸುತ್ತಾರೋ ಅದಕ್ಕೆ ಅನುಗುಣವಾಗಿರುತ್ತದೆ. ಹಾಗಂತ ಅದು ರಾಹುಲ್ ಗಾಂಧಿ ಅಥವಾ ಮಮತಾ ಬ್ಯಾನರ್ಜಿ ಅಥವಾ ಎಂ.ಕೆ.ಸ್ಟಾಲಿನ್ ಅಥವಾ ಜನಸಾಮಾನ್ಯರು ಯಾವುದನ್ನು ಸಂಸ್ಕೃತಿ ಎಂದು ಗುರುತಿಸುತ್ತಾರೋ ಆ ಸಂಸ್ಕೃತಿಯಾಗಿರಲು ಸಾಧ್ಯವೇ?
ಭಾರತ ಬಹಳ ದೊಡ್ಡ ದೇಶ. ಇಲ್ಲಿ ಏಕಮುಖ ಸಂಸ್ಕೃತಿ ಎಂಬುದು ಇಲ್ಲ. ಎಂತಹ ಪ್ರಭಾವಿ ವ್ಯಕ್ತಿ ಕೂಡ ಇಲ್ಲಿ ಉತ್ತರ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾರತದ ಮೇಲೆ ಒಂದೇ ಸಂಸ್ಕೃತಿಯನ್ನು ಹೇರಲು ಸಾಧ್ಯವಿಲ್ಲ. ಭಾರತದ ಕುರಿತ ಈ ಸತ್ಯವನ್ನು ಅರ್ಥಮಾಡಿಕೊಳ್ಳಲು - ಅಂದರೆ ಸಾಂಸ್ಕೃತಿಕ ವೈವಿಧ್ಯವೇ ಭಾರತದ ಶಕ್ತಿ ಎಂಬುದನ್ನು ಅರಿಯಲು - ವಿಫಲರಾಗುವುದೇ ಕೆಲ ನಾಯಕರಿಗೆ ಇಡೀ ದೇಶದಲ್ಲಿ ಸ್ವೀಕಾರಾರ್ಹತೆ ಸಿಗದಂತೆ ಮಾಡುತ್ತದೆ. ಅವರು ಜನರನ್ನು ಬೇಕಾದರೆ ಹೆದರಿಸಬಹುದು. ಆದರೆ ಈ ದೇಶಕ್ಕೆ ತಮ್ಮಿಂದಲೇ ಒಳ್ಳೆಯದಾಗುತ್ತದೆ, ತಾವೇ ಈ ದೇಶದ ನಾಯಕರು ಎಂಬುದನ್ನು ಜನರು ನಂಬುವಂತೆ ಮಾಡಲು ಅವರಿಂದ ಸಾಧ್ಯವಿಲ್ಲ.
ಒಂದಂತೂ ಸತ್ಯ, ಭಾರತ ತನ್ನ ವಿವಿಧತೆಯ ಶ್ರೀಮಂತಿಕೆಯೊಂದಿಗೆ ಭಾರತವಾಗಿಯೇ ಮುನ್ನಡೆಯುತ್ತದೆ. ನಾಯಕರು ಬರುತ್ತಾರೆ, ಹೋಗುತ್ತಾರೆ. ಆಳುವವರು ಏನೋ ಒಂದು ಹೇಳುತ್ತಾರೆ. ಆದರೆ ಭಾರತದ ತಿರುಳು, ಈ ದೇಶದ ಸೊಗಡು ಹಾಗೇ ಉಳಿಯುತ್ತದೆ. ಅಧಿಕಾರದಾಹಿಗಳ ತಂತ್ರಕ್ಕೆ ಈ ದೇಶ ಯಾವತ್ತೂ ತಲೆಬಾಗುವುದಿಲ್ಲ. ನಮ್ಮದು ನಿಜವಾಗಿಯೂ ಅದ್ಭುತ ದೇಶ. ನಮ್ಮದು ನಿಜವಾಗಿಯೂ ಅದ್ಭುತ ಸಂಸ್ಕೃತಿ. ತಮ್ಮ ಶಕ್ತಿಯೇ ತಮ್ಮ ಸಣ್ಣತನವನ್ನು ಮುಚ್ಚಿಡುತ್ತದೆ ಎಂದು ನಂಬುವ ಸಣ್ಣ ವ್ಯಕ್ತಿಗಳ ಅಟಾಟೋಪದಲ್ಲೂ ನಾವು ಅದ್ಭುತವಾಗಿಯೇ ಉಳಿಯುತ್ತೇವೆ.
ಒಬ್ಬ ಪತ್ರಕರ್ತನಾಗಿ ನನಗೆ ಈ ಅದ್ಭುತ ದೇಶದ ಜನರನ್ನು ಅವರು ಹೇಗಿದ್ದಾರೋ ಹಾಗೆ ಗೌರವಿಸುತ್ತಲೇ ಮುಂದೆ ಹೆಜ್ಜೆಯಿಡುತ್ತಾ ಬಂದಿರುವುದು ಹೆಮ್ಮೆಯ ಸಾಧನೆ ಅನ್ನಿಸುತ್ತದೆ. ಕಾಲು ಶತಮಾನದ ನಂತರ ಈಗೊಂದು ವಿರಾಮದ ಸಮಯ ಬಂದಿದೆ. ಗೋಡೆಗೊರಗಿ ಕುಳಿತು ಬೇರೆಯವರಿಗೆ ಅವಕಾಶ ಮಾಡಿಕೊಡಲು ಇದು ಸಕಾಲ. ಅಫ್‌ಕೋರ್ಸ್, ನಾನು ಇನ್ನುಮುಂದೆಯೂ ಬರೆಯುತ್ತಿರಬೇಕು. ಆದರೆ ಪ್ರತಿ ವಾರ ಅಥವಾ ಯಾವುದೋ ನಿರ್ದಿಷ್ಟದಿನಾಂಕ ಅಥವಾ ಯಾವುದೋ ನಿರ್ದಿಷ್ಟಜಾಗಕ್ಕೆ ಅಲ್ಲ. ಹೋರಾಟ ಮುಂದುವರೆಯಬೇಕು.
ಶುಭಂ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ