
ಪಾಕ್ ಆಕ್ರಮಿತ ಕಾಶ್ಮೀರ (PoK) ಪಾಕಿಸ್ತಾನ ಸರ್ಕಾರದ ವಿರುದ್ಧದ ಪ್ರತಿಭಟನೆಗಳಿಂದ ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೆ ಪಾಕಿಸ್ತಾನ ಸೈನಿಕರು ನಿರ್ದಯವಾಗಿ ಗುಂಡು ಹಾರಿಸಲಾಗುತ್ತಿದೆ. ಪಿಒಕೆ ಜನರು ಪಾಕಿಸ್ತಾನ ವಿರುದ್ಧ ಸಂಘರ್ಷಕ್ಕಿಳಿದು ತೀವ್ರ ಹಿಂಸಾಚಾರ, ಸಾವು ನೋವು ಸಂಭವಿಸಿರುವ ಹೊತ್ತಲ್ಲಿ ಉಗ್ರ ಸಂಘಟನೆಗಳು ತಮ್ಮ ಹಳೆಯ ಚಾಳಿ ಮುಂದುವರಿಸಿವೆ. ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ಹೊಸ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಆತ ಕಾಶ್ಮೀರದ ಬಗ್ಗೆ ವಿಷ ಕಾರಿದ್ದಾನೆ.
ಈ ವಿಡಿಯೋದಲ್ಲಿ ಕಸೂರಿ, ಭಾರತದ ವಿರುದ್ಧ ಅತ್ಯಂತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾನೆ. ಕಾಶ್ಮೀರದಲ್ಲಿ 'ಗೆಲುವು' ಸಾಧಿಸುವುದನ್ನು 'ಗಜ್ವಾ-ಎ-ಹಿಂದ್'ಗೆ ಹೋಲಿಸಿರುವ ಆತ, 'ಕಯಾಮತ್' ಬರುವವರೆಗೂ ಈ ಸಂಘರ್ಷ ಮುಂದುವರಿಯಲಿದೆ ಎಂದು ಹೇಳಿಕೊಂಡಿದ್ದಾನೆ. ಪಿಒಕೆಯಲ್ಲಿ ಜನರು ಬೀದಿಗಿಳಿದು ಹೋರಾಡುತ್ತಿರುವಾಗ, ಉಗ್ರರು ಮಾತ್ರ ಕಾಶ್ಮೀರದ ಬಗ್ಗೆಯೇ ಮಾತನಾಡುತ್ತಿರುವುದು ವಿಪರ್ಯಾಸ.
ಸೈಫುಲ್ಲಾ ಕಸೂರಿ, ಕುಖ್ಯಾತ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಮುಖ ನಾಯಕರಲ್ಲಿ ಒಬ್ಬ. ಈತನನ್ನು ಜಾಗತಿಕ ಉಗ್ರ ಹಫೀಜ್ ಸಯೀದ್‌ನ ಆಪ್ತ ಎಂದೇ ಪರಿಗಣಿಸಲಾಗುತ್ತದೆ. ಭಾರತದ ವಿರುದ್ಧ ನಡೆದ ಅನೇಕ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಈತನ ಹೆಸರು ಈ ಹಿಂದೆಯೂ ಕೇಳಿಬಂದಿತ್ತು.
ಭಾರತೀಯ ಸೇನೆಯು ಈ ಹಿಂದೆ ಪಹಲ್ಗಾಮ್ ಮೇಲಿನ ದಾಳಿಗೆ ಪ್ರತೀಕಾರವಾಗಿ 'ಆಪರೇಷನ್ ಸಿಂದೂರ್' ನಡೆಸಿತ್ತು. ಈ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿದ್ದ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಲಾಗಿತ್ತು. ಇಷ್ಟೆಲ್ಲಾ ಕಠಿಣ ಕ್ರಮಗಳ ಬಳಿಕವೂ, ಕಸೂರಿಯಂತಹ ಉಗ್ರರು ಮತ್ತೆ ತಲೆ ಎತ್ತುತ್ತಿರುವುದು, ಉಗ್ರ ಸಂಘಟನೆಗಳ ಹಳೆಯ ನಿರೂಪಣೆಗೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ