ಮುಂಬೈನಲ್ಲಿ ಭಾರೀ ಮಳೆ: 30 ಜನರ ಸಾವು, ಜನಜೀವನ ಅಸ್ತವ್ಯಸ್ತ!

By Kannadaprabha News  |  First Published Jul 19, 2021, 9:03 AM IST

* ಒಂದೇ ರಾತ್ರಿ 23 ಸೆಂ.ಮೀ. ವರ್ಷಧಾರೆ

* ಜನ ನಿದ್ರೆಯಲ್ಲಿದ್ದಾಗ ಭೂಕುಸಿತ, ಮನೆ ನಾಶ

* ರೈಲು, ರಸ್ತೆ ಸಂಚಾರ, ಜನಜೀವನ ಅಸ್ತವ್ಯಸ್ತ

* ಜುಲೈ ತಿಂಗಳಿನ 7 ವರ್ಷದ ಅತ್ಯಧಿಕ ಮಳೆ ಇದು


ಮುಂಬೈ(ಜು.19): ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೆ ಭಾರೀ ವರ್ಷಧಾರೆ ಆಗಿದ್ದು, ಇಡೀ ರಾತ್ರಿ ಸುರಿದ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿ ಒಟ್ಟು 30 ಜನರು ಸಾವನ್ನಪ್ಪಿದ್ದಾರೆ. ಭೂಕುಸಿತವು ಹಲವು ಮನೆಗಳನ್ನು ಆಪೋಶನ ತೆಗೆದುಕೊಂಡಿದ್ದು, ಇದರಿಂದಾಗಿ ಸಾವು-ನೋವು ಉಂಟಾಗಿವೆ. ದಿಢೀರ್‌ ಪ್ರವಾಹದ ಸ್ಥಿತಿ ಸೃಷ್ಟಿಆದ ಕಾರಣ ಮುಂಬೈನಲ್ಲಿನ ಉಪನಗರ ರೈಲು ಸಂಚಾರ ನಿಲ್ಲಿಸಲಾಗಿದೆ ಹಾಗೂ ದೂರದ ಊರಿನ ರೈಲುಗಳ ಸಂಚಾರ ಕಡಿತಗೊಳಿಸಲಾಗಿದೆ. ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿದೆ.

2005ರಲ್ಲಿ ಮುಂಬೈನಲ್ಲಿ ಒಂದೇ ದಿನ 96 ಸೆಂ.ಮೀ. ಮಳೆ ಸುರಿದು ದಾಖಲೆ ನಿರ್ಮಿಸಿತ್ತು. ಈ ಮಳೆ ಕೂಡ ಅದನ್ನೇ ನೆನಪಿಸಿದೆ. ರಾತ್ರಿ ಮುಂಬೈನಲ್ಲಿ ಸರಾಸರಿ ಸುಮಾರು 12 ಸೆಂ.ಮೀ. ಮಳೆ ಸುರಿದಿದೆ. ಸಾಂತಾಕ್ರೂಜ್‌ ಒಂದರಲ್ಲೇ ಅತ್ಯಧಿಕ 23 ಸೆಂ.ಮೀ. ಮಳೆ ಆಗಿದೆ. ಇದು ಕಳೆದ 7 ವರ್ಷದಲ್ಲಿ ಜುಲೈನಲ್ಲಿ ಬಿದ್ದ ಏಕದಿನದ ಅತ್ಯಧಿಕ ಮಳೆ.

Tap to resize

Latest Videos

30 ಜನರ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರು. ಪರಿಹಾರ ಪ್ರಕಟಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಕೂಡಾ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.

ಕಾಂಪೌಂಡ್‌ ಗೋಡೆ ಬಿದ್ದು 17 ಸಾವು:

ಮುಂಬೈನ ಮಾಹುಲ್‌ನಲ್ಲಿನ ಬೆಟ್ಟದ ಮೇಲಿರುವ ಮನೆಗಳ ಮೇಲೆ ಕಾಂಪೌಂಡ್‌ ಗೋಡೆ ತಡರಾತ್ರಿ 1 ಗಂಟೆಗೆ ಕುಸಿದಿದೆ. ಈ ವೇಳೆ ನಿದ್ರೆಯಲ್ಲಿದ್ದ 17 ಜನ ಸಾವನ್ನಪ್ಪಿದ್ದಾರೆ. ವಿಖ್ರೋಲಿ ಉಪನಗರದಲ್ಲಿ ನಸುಕಿನ 2.30ಕ್ಕೆ ಭೂಕುಸಿತದ ಕಾರಣ 6 ಗುಡಿಸಲು ಧ್ವಂಸಗೊಂಡು 7 ಜನ ಹಾಗೂ ಭಂಡೂಪ್‌ನಲ್ಲಿ ಅರಣ್ಯ ಇಲಾಖೆ ಕಾಂಪೌಂಡ್‌ ಕುಸಿದು ಒಬ್ಬರು ಸಾವನ್ನಪ್ಪಿದ್ದಾರೆ. ಇತರೆಡೆ 5 ಜನರು ಸಾವನ್ನಪ್ಪಿದ್ದಾರೆ. ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಕೆಲವೆಡೆ ವಾಹನಗಳೂ ಕೊಚ್ಚಿ ಹೋಗಿವೆ.

ಎವರೆಸ್ಟ್‌ನಷ್ಟು ಎತ್ತರದಿಂದ ದೈತ್ಯ ಬಿರುಗಾಳಿ

ಹವಾಮಾನ ಇಲಾಖೆ ಕೂಡ ಅಂದಾಜಿಸದ ಇಷ್ಟೊಂದು ಮಳೆ ಬೀಳಲು ಭಾರಿ ಗುಡುಗು ಸಹಿತ ದೈತ್ಯ ಬಿರುಗಾಳಿ ಕಾರಣ. ಭೂಮಿಗಿಂತ 60 ಸಾವಿರ ಅಡಿ ಎತ್ತರದ ಮೇಲೆ (ಮೌಂಟ್‌ ಎವರೆಸ್ಟ್‌ಗಿಂತ ಎತ್ತರದಲ್ಲಿ) ಬಿರುಗಾಳಿ ಸೃಷ್ಟಿಯಾಗಿ ಬೀಸಿದ್ದು, ಇಷ್ಟೊಂದು ಮಳೆ ಸುರಿಯುವಂತೆ ಮಾಡಿದೆ.

click me!