* ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಯಾದವ್ ಅವರ ಸ್ಥಿತಿ ಅತ್ಯಂತ ಗಂಭೀರ
* ದೇಹದಲ್ಲಿ ಯಾವುದೇ ಚಲನೆ ಇಲ್ಲ ಎಂದ ತೇಜಸ್ವಿ ಯಾದವ್
* ಲಾಲೂಗಾಗಿ ಪ್ರಾರ್ಥಿಸಿ ಎಂದ ರಾಬ್ರಿ ದೇವಿ
ಪಾಟ್ನಾ(ಜು.07): ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಯಾದವ್ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರನ್ನು ತಡರಾತ್ರಿ ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದ್ದು, ಹಿರಿಯ ವೈದ್ಯರ ತಂಡ ಚಿಕಿತ್ಸೆಯಲ್ಲಿ ತೊಡಗಿದೆ. ಇದಕ್ಕೂ ಮೊದಲು ಅವರನ್ನು ಪಾಟ್ನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬುಧವಾರ ರಾತ್ರಿ ಅವರನ್ನು ಏರ್ ಆಂಬುಲೆನ್ಸ್ ಮೂಲಕ ದೆಹಲಿಗೆ ಕರೆತರಲಾಯಿತು. ವಾಸ್ತವವಾಗಿ, ಎರಡು ದಿನಗಳ ಹಿಂದೆ ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿ ಅವರ ನಿವಾಸದ ಮೆಟ್ಟಿಲುಗಳಿಂದ ಬಿದ್ದಿದ್ದರು, ಇದರಿಂದಾಗಿ ಅವರ ದೇಹದ ಮೂರು ಮೂಳೆಗಳು ಮುರಿದಿವೆ. ಲಾಲೂ ಈ ಮೊದಲೇ ಅನೇಕ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಗಾಯದಿಂದಾಗಿ ಅವರ ಸ್ಥಿತಿಯು ಮತ್ತಷ್ಟು ಹದಗೆಟ್ಟಿತು.
ದೇಹದಲ್ಲಿ ಯಾವುದೇ ಚಲನೆ ಇಲ್ಲ
ಲಾಲು ಯಾದವ್ ದೆಹಲಿ ತಲುಪಿದ ನಂತರ ಅವರ ಪುತ್ರ ತೇಜಸ್ವಿ ಯಾದವ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಮೆಟ್ಟಿಲುಗಳಿಂದ ಬಿದ್ದ ಕಾರಣ ಅವರ ದೇಹದ ಮೂರು ಮೂಳೆಗಳು ಮುರಿದಿವೆ, ಇದರಿಂದಾಗಿ ಅವರ ದೇಹವು ಸಂಪೂರ್ಣವಾಗಿ ಕುಸಿದಿದೆ. ಅವರ ದೇಹದಲ್ಲಿ ಚಲನ ವಲನಗಳಿಲ್ಲ ಎಂದು ಅವರು ಹೇಳಿದರು. ಅವರ ಸಂಪೂರ್ಣ ತಪಾಸಣೆಯನ್ನು ಏಮ್ಸ್‌ನಲ್ಲಿ ಮಾಡಲಾಗುವುದು ಎಂದು ತೇಜಸ್ವಿ ಹೇಳಿದ್ದಾರೆ. ಇದಾದ ಬಳಿಕ ಮುಂದಿನ ಚಿಕಿತ್ಸೆ ಬಗ್ಗೆ ವೈದ್ಯರ ತಂಡ ನಿರ್ಧರಿಸಲಿದೆ.
ಶ್ವಾಸಕೋಶದಲ್ಲಿ ನೀರು
ಯಾದವ್ ಕುಟುಂಬದ ಮೂಲಗಳ ಪ್ರಕಾರ ಲಾಲು ಯಾದವ್ ಅವರ ಶ್ವಾಸಕೋಶದಲ್ಲಿ ನೀರು ತುಂಬಿದೆ. ಇದರಿಂದ ಅವರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದೇ ಸಮಯದಲ್ಲಿ, ಅವರ ಕ್ರಿಯೇಟಿನೈನ್ ಕೂಡ ನಾಲ್ಕರಿಂದ ಆರು ತಲುಪಿದೆ. ಕಿಡ್ನಿ ಕಸಿ ಬಗ್ಗೆಯೂ ಮಾತನಾಡುತ್ತಿದ್ದಾರೆ. ಆರ್‌ಜೆಡಿ ಮುಖ್ಯಸ್ಥರು ಚೇತರಿಸಿಕೊಂಡ ನಂತರ ಅವರನ್ನು ಸಿಂಗಾಪುರಕ್ಕೆ ಕರೆದೊಯ್ಯಲು ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ರಾಬ್ರಿ ಭಾವನಾತ್ಮಕ ಮನವಿ ಮಾಡಿದರು
ಇದೇ ವೇಳೆ ಲಾಲು ಯಾದವ್ ಪತ್ನಿ ರಾಬ್ರಿ ದೇವಿ ಜನರಿಗೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಗಾಬರಿಯಾಗುವುದು ಬೇಡ, ಆತಂಕ ಪಡುವ ಅಗತ್ಯವಿಲ್ಲ ಎಂದು ಲಾಲು ಯಾದವ್ ಅಭಿಮಾನಿಗಳಿಗೆ ತಿಳಿಸಿದರು. ಆರ್‌ಜೆಡಿ ಅಧ್ಯಕ್ಷ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬೇಗ ನಮ್ಮೆಲ್ಲರೊಂದಿಗೆ ಇರಲೆಂದು ನೀವೆಲ್ಲರೂ ಅವರಿಗಾಗಿ ಪ್ರಾರ್ಥಿಸೋಣ ಎಂದಿದ್ದಾರೆ.