ಕಾಣೆಯಾಗಿದ್ದ 59 ವರ್ಷದ ವ್ಯಕ್ತಿಯೊಬ್ಬರು ಎರಡು ದಿನಗಳ ನಂತರ ಆಸ್ಪತ್ರೆಯ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಘಟನೆ ಬೆಳಕಿಗೆ ಬಂದಿದೆ.
ತಿರುವನಂತಪುರ (ಜು.15): ಕಾಣೆಯಾಗಿದ್ದ 59 ವರ್ಷದ ವ್ಯಕ್ತಿಯೊಬ್ಬರು ಎರಡು ದಿನಗಳ ನಂತರ ಆಸ್ಪತ್ರೆಯ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಘಟನೆ ಕೇರಳದಲ್ಲಿ ನಡೆದಿದೆ. ಉಳ್ಳೂರಿನ ರವೀಂದ್ರನ್ ನಾಯರ್ ಎಂಬವರನ್ನು ಎರಡು ದಿನದ ಬಳಿಕ ರಕ್ಷಿಸಲಾಗಿದೆ. 2 ದಿನದಿಂದ ಅನ್ನ ನೀರು ಇಲ್ಲದೆ ಬಳಲಿದ್ದರು. ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಸಿಬ್ಬಂದಿಯ ನಿರ್ಲಕ್ಷ್ಯಕ್ಕಾಗಿ ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಕೇರಳ ಆರೋಗ್ಯ ಇಲಾಖೆ ಸೋಮವಾರ ಅಮಾನತುಗೊಳಿಸಿದೆ. ಅಮಾನತುಗೊಂಡ ಮೂವರು ಸಿಬ್ಬಂದಿಗಳಲ್ಲಿ ಇಬ್ಬರು ಲಿಫ್ಟ್ ಆಪರೇಟರ್‌ಗಳು ಮತ್ತು ಆಸ್ಪತ್ರೆಯ ಡ್ಯೂಟಿ ಸಾರ್ಜೆಂಟ್ ಆಗಿದ್ದಾರೆ.
ಸೋಮವಾರ ಬೆಳಗಿನ ಜಾವದವರೆಗೂ ಅಧಿಕಾರಿಗಳಿಗೆ ಲಿಫ್ಟ್ ಕೆಟ್ಟಿರುವುದು ಗಮನಕ್ಕೆ ಬಂದಿರಲಿಲ್ಲ. ಈ ನಿರ್ಲಕ್ಷ್ಯದ ಆರೋಪದ ಮೇಲೆ ಆರೋಗ್ಯ ಇಲಾಖೆ ಅವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಂಡಿದೆ.
ಪೊಲೀಸರ ಮಾಹಿತಿಯಂತೆ ರವೀಂದ್ರನ್ ನಾಯರ್ ಆಸ್ಪತ್ರೆಯ ಮೊದಲ ಮಹಡಿಗೆ ತೆರಳಲು ಲಿಫ್ಟ್ ಹತ್ತಿದ್ದಾರೆ. ಆದರೆ ಅವರು ತಿಳಿಯದೇ ಒಪಿ ಬ್ಲಾಕ್‌ನಲ್ಲಿರುವ ಲಿಫ್ಟ್‌ಗೆ ಹೋಗಿದ್ದಾರೆ. ಆದರೆ ಆ ಲಿಫ್ಟ್ ಸರಿಯಾಗಿ ಕಾರ್ಯ ನಿರ್ವಹಿಸದೆ ಮೇಲಕ್ಕೆ ಏರುವ ಬದಲಾಗಿ ಲಿಫ್ಟ್ ಕೆಳಗಿಳಿದು ಸ್ಥಗಿತಗೊಂಡಿದೆ. ಲಿಫ್ಟ್‌ನ ಬಾಗಿಲುಗಳನ್ನು ತೆರೆಯಲು ಕೂಡಾ ನಾಯರ್ ಗೆ ಸಾಧ್ಯವಾಗಿಲ್ಲ. ಮಾತ್ರವಲ್ಲ ಕಾಪಾಡುವಂತೆ ಅವರು ಲಿಫ್ಟ್ ಒಳಗೆ ಬೊಬ್ಬೆ ಹೊಡೆದಿದ್ದಾರೆ. ಆದರೆ ಹೊರಗೆ ಅವರ ಧ್ವನಿ ಯಾರಿಗೂ ಕೇಳಿಸಿಲ್ಲ. ಇಷ್ಟು ಮಾತ್ರವಲ್ಲ ದುರಾದೃಷ್ಟ ಎಂಬಂತೆ ನಾಯರ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ.
ಸೋಮವಾರ ಲಿಫ್ಟ್ ಬಳಕೆ ಮಾಡಲು ಆರಂಭಿಸಿದಾಗ ಲಿಫ್ಟ್‌ನಲ್ಲಿ ವ್ಯಕ್ತಿಯೊಬ್ಬರು ಇರುವುದು ಬೆಳಕಿಗೆ ಬಂದಿದೆ. ತಕ್ಷಣ ಸಿಬ್ಬಂದಿಗಳು ಕಾರ್ಯಪ್ರವರ್ತರಾಗಿ ಅವರನ್ನು ಕಾಪಾಡಿದ್ದಾರೆ.
ಇದೆಲ್ಲದ ನಡುವೆ ರವೀಂದ್ರನ್ ನಾಯರ್ ಎರಡು ದಿನಗಳ ಕಾಲ ಮನೆಗೆ ತಲುಪದ್ದಕ್ಕೆ ಆತಂಕಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಅವರು ಲಿಫ್ಟ್‌ನಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಧಾವಿಸಿ ಬಂದಿದ್ದು, ವೈದ್ಯಕೀಯ ಕಾಲೇಜು ವಿರುದ್ಧ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯ ಹಿನ್ನೆಲೆ ದೂರು ನೀಡಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲದೆ ಲಿಫ್ಟ್ ಬಳಕೆಯಲ್ಲಿಲ್ಲ ಎಂದು ಯಾವುದೇ ಸೂಚನಾ ಫಲಕವನ್ನು ಮುಂಜಾಗೃತಾ ಕ್ರಮವಾಗಿ ಹಾಕಿರಲಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಶನಿವಾರ ಮಧ್ಯಾಹ್ನದ ವೇಳೆ ಲಿಫ್ಟ್ ಪ್ರವೇಶಿಸಿದ ನಾಯರ್ ಸೋಮವಾರ ಬೆಳಿಗ್ಗೆ 6 ಗಂಟೆಗೆ ಲಿಫ್ಟ್‌ನಿಂದ ಹೊರ ಬಂದಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ.