ಕರ್ನಾಟಕ ಗೋವಾ ನಡುವಿನ ಎಲ್ಲ ರೈಲುಗಳ ಸಂಚಾರ ಸ್ಥಗಿತ

By Sathish Kumar KHFirst Published Aug 12, 2024, 4:57 PM IST
Highlights

ಕರ್ನಾಟಕದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದು, ಎರಡು ರಾಜ್ಯಗಳ ನಡುವಿನ ಎಲ್ಲ ರೈಲುಗಳ ಸಂಚಾರ ಸ್ಥಗಿತವಾಗಿದೆ.

ಹುಬ್ಬಳ್ಳಿ (ಆ.12): ಕರ್ನಾಟಕ ರಾಜ್ಯದಲ್ಲಿಂದ ನೆರೆಯ ಗೋವಾ ರಾಜ್ಯಕ್ಕೆ ರೈಲು ಸಂಚಾರ ಕಲ್ಪಿಸುವ ಮಾರ್ಗದಲ್ಲಿ ಗೂಡ್ಸ್ ರೈಲು ದೂಧ್ ಸಾಗರ ಬಳಿ ಹಳಿ ತಪ್ಪಿದೆ. ರೈಲು ಹಳಿಯಿಂದ ಗೂಡ್ಸ್ ರೈಲು ತೆರವು ಕಾರ್ಯಾಚರಣೆ ಕಾರ್ಯ ಮುಂದುವರೆದಿದ್ದು, ಇಂದು ಕೂಡ ಕರ್ನಾಟಕ - ಗೋವಾ ರೈಲು ಸಂಚಾರ ಇರುವುದಿಲ್ಲ ಎಂದು ನೈರುತ್ಯ ಇಲಾಖೆ ತಿಳಿಸಿದೆ.

ಧೂದ್ ಸಾಗರ್ ಬಳಿ ಗೂಡ್ಸ್ ರೈಲು ಹಳಿ ತಪ್ಪಿದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ದಿನಗಳಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಕರ್ನಾಟಕ ಮತ್ತು ಗೋವಾ ನಡುವಿನ ಎಲ್ಲ ರೈಲುಗಳ ಸಂಚಾರ ಬಂದ್ ಆಗಿತ್ತು. ಇಂದು ಶಾಲಿಮಾರ್ – ವಾಸ್ಕೋ ಡ ಗಾಮಾ ರೈಲು ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಿದ್ದು, ಹುಬ್ಬಳ್ಳಿಯಿಂದ ರೈಲು ಪ್ರಯಾಣಿಕರಿಗೆ ಪರ್ಯಾಯವಾಗಿ ಬಸ್ಸಿನಲ್ಲಿ ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 1,200 ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

Latest Videos

ಕೊನೆಗೂ ಮಂಗಳೂರು-ಬೆಂಗಳೂರು ಪ್ಯಾಸೆಂಜರ್‌ ರೈಲು ಆರಂಭ, ಕುಸಿತದ ಸ್ಥಳದಲ್ಲೇ ಬೀಡುಬಿಟ್ಟ ತಾಂತ್ರಿಕ ವರ್ಗ

ವಾಯುವ್ಯ ರಸ್ತೆ ಸಾರಿಗೆ ನಿಗಮದ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 25 ಬಸ್‌ಗಳನ್ನು ವಿಶೇಷ ವ್ಯವಸ್ಥೆಯ ಮೂಲಕ ರೈಲು ಪ್ರಯಾಣಿಕರನ್ನು ಗೋವಾಗೆ ಕಳುಹಿಸಿ ಕೊಡಲಾಗಿದೆ. ಇನ್ನು ಎನ್‌ಡಬ್ಲ್ಯೂಕೆಆರ್‌ಟಿಸಿ ಬಸ್‌ನಲ್ಲಿ ಊಟ ಮತ್ತು ಕುಡಿಯುವ ನೀರಿಗೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ನೈರುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಂದ ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಹುಬ್ಬಳ್ಳಿಯಿಂದ ನೇರವಾಗಿ ಪಣಜಿ, ವಾಸ್ಕೋಡ ಗಾಮಾ, ಮಡಗಾಂವ್ ಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.

ಅನ್ನ ಭಾಗ್ಯ ಅಕ್ಕಿ ಹೈದರಾಬಾದ್‌ಗೆ ಮಾರಾಟ; ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಬಡಜನರಿಗೆ ಬರೆ!

ಇನ್ನು ರೈಲಿನಲ್ಲಿ ಟಿಕೆಟ್ ಬುಕಿಂಗ್ ಮಾಡಿದ್ದ ಎಲ್ಲ ಪ್ರಯಾಣಿಕರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಕ್ಕೆ ರೈಲ್ವೆ ಇಲಾಖೆ ವ್ಯವಸ್ಥೆ ಮಾಡುವ ಮೂಲಕ ಜವಾಬ್ದಾರಿಯನ್ನು ಮೆರೆದಿದೆ. ಇನ್ನು ದೂಧ್ ಸಾಗರ ಬಳಿ ಹಳಿ ತಪ್ಪಿದ ಗೂಡ್ಸ್‌ ರೈಲಿನ ಬೋಗಿಯಲ್ಲಿದ್ದ ಸರಕು ತೆರವು ಮಾಡುತ್ತಿದ್ದು, ನಂತರ ಇಂಜಿನ್ ಅನ್ನು ರೈಲು ಹಳಿಗೆ ತೆಗೆದುಕೊಂಡು ಬಂದು ಅಲ್ಲಿಂದ ತೆಗೆದುಕೊಂಡು ಹೋಗಲಾಗುತ್ತದೆ. ನಾಳೆ ವೇಳೆಗೆ ರೈಲು ಸಂಚಾರ ವ್ಯವಸ್ಥೆ ಸರಿಹೋಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ರೈಲಿನಲ್ಲಿ ಹೋಗಲು ಅನಾನುಕೂಲ ಉಂಟಾದರೂ ಪರ್ಯಾಯ ವ್ಯವಸ್ಥೆಯಾಗಿ ಬಸ್ ಕಲ್ಪಿಸಿಕೊಟ್ಟ ರೈಲ್ವೆ ಇಲಾಖೆಗೆ ಧನ್ಯವಾದ ತಿಳಿಸಿದ ಪ್ರಯಾಣಿಕರು ಎಲ್ಲರೂ ಬಸ್‌ನಲ್ಲಿ ಖುಷಿಯಿಂದ ಗೋವಾಕ್ಕೆ ತೆರಳಿದರು.

click me!