ಕ್ರಿ.ಶ.5ರ ತಂತ್ರಜ್ಞಾನ ಸಾರುವ ‘ಐಎನ್‌ಎಸ್‌ವಿ ಕೌಂಡಿನ್ಯ’ ಕಡಲಯಾನ ಆರಂಭ

Kannadaprabha News   | Kannada Prabha
Published : Dec 30, 2025, 05:04 AM IST
INS Koundinya

ಸಾರಾಂಶ

ಯಾವುದೇ ಆಧುನಿಕ ತಂತ್ರಜ್ಞಾನ ಬಳಸದೆ, ಕ್ರಿ.ಶ.5ನೇ ಶತಮಾನದ (1500 ವರ್ಷ ಹಳೆಯ) ಭಾರತೀಯ ತಂತ್ರಜ್ಞಾನವನ್ನು ಬಳಸಿ ಇತ್ತೀಚೆಗೆ ನಿರ್ಮಿಸಲಾಗಿರುವ ಅತಿ ವಿಶಿಷ್ಟ ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಮೊದಲ ಬಾರಿ ಗುಜರಾತ್‌ನ ಪೋರಬಂದರ್‌ನಿಂದ ಒಮಾನ್‌ನ ಮಸ್ಕತ್‌ಗೆ ಸೋಮವಾರ ಪ್ರಯಾಣ ಆರಂಭಿಸಿದೆ.

ಪೋರಬಂದರ್: ಯಾವುದೇ ಆಧುನಿಕ ತಂತ್ರಜ್ಞಾನ ಬಳಸದೆ, ಕ್ರಿ.ಶ.5ನೇ ಶತಮಾನದ (1500 ವರ್ಷ ಹಳೆಯ) ಭಾರತೀಯ ತಂತ್ರಜ್ಞಾನವನ್ನು ಬಳಸಿ ಇತ್ತೀಚೆಗೆ ನಿರ್ಮಿಸಲಾಗಿರುವ ಅತಿ ವಿಶಿಷ್ಟ ಐಎನ್‌ಎಸ್‌ವಿ ಕೌಂಡಿನ್ಯ ಹಡಗು ಮೊದಲ ಬಾರಿ ಗುಜರಾತ್‌ನ ಪೋರಬಂದರ್‌ನಿಂದ ಒಮಾನ್‌ನ ಮಸ್ಕತ್‌ಗೆ ಸೋಮವಾರ ಪ್ರಯಾಣ ಆರಂಭಿಸಿದೆ. ಭಾರತದ ಹಡಗುಗಳ ಪ್ರಾಚೀನ ಸಮುದ್ರಯಾನ ಹೇಗಿರುತ್ತಿತ್ತು ಎಂಬುದನ್ನು ಪರೀಕ್ಷಿಸಲು ಈ ಯಾನ ನಡೆಸಲಾಗುತ್ತಿದೆ.

ಈ ಹಡಗಿಗೆ ಎಂಜಿನ್‌ ಇಲ್ಲ. ಲೋಹಗಳು ಮತ್ತು ಯಾವುದೇ ಆಧುನಿಕ ಯಂತ್ರಗಳನ್ನು ಬಳಸಲಾಗಿಲ್ಲ. ಸಂಪೂರ್ಣವಾಗಿ ಗಾಳಿಯ ಶಕ್ತಿಯಿಂದ ಸಾಗುವ ಈ ಹಡಗನ್ನು 1,500 ವರ್ಷ ಹಳೆಯ ಪ್ರಾಚೀನ ಭಾರತೀಯ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವುದು ವಿಶೇಷ.

ಏನಿದು ಐಎನ್‌ಎಸ್‌ವಿ ಕೌಂಡಿನ್ಯ?:

ಕ್ರಿ.ಪೂ.5ನೇ ಶತಮಾನದಲ್ಲಿ ಭಾರತೀಯ ನೌಕಾ ವಲಯದಲ್ಲಿ ಬಳಸುತ್ತಿದ್ದ ಕ್ರಮಗಳನ್ನು ಅನುಸರಿಸಿ ಇದನ್ನು ಸಿದ್ಧಪಡಿಸಲಾಗಿದೆ. ಅಜಂತಾ ಗುಹೆಗಳ ಮೇಲಿನ ನೌಕೆಗಳ ಚಿತ್ರ, ಪ್ರಾಚೀನ ಭಾರತೀಯ ಗ್ರಂಥಗಳು ಮತ್ತು ವಿದೇಶಿ ಪ್ರವಾಸಿಗರ ವಿವರಣೆಗಳನ್ನು ಅಧ್ಯಯನ ಮಾಡಿ ಇದನ್ನು ನಿರ್ಮಿಸಲಾಗಿದೆ.

ಕಬ್ಬಿಣವನ್ನು ಬಳಸದೆ, ಕೇವಲ ಮರದ ಹಲಗೆಗಳನ್ನು ತೆಂಗಿನ ನಾರಿನ ಮೂಲಕ ಜೋಡಿಸಲಾಗಿದೆ. ಹೀಗಾಗಿ ಇದನ್ನು ‘ಹೊಲಿದ ಹಡಗು’ ಎನ್ನುತ್ತಾರೆ. ನೀರು ಒಳಗೆ ಬರದಂತೆ ನೈಸರ್ಗಿಕ ರಾಳ, ಹತ್ತಿ ಮತ್ತು ತೈಲಗಳನ್ನು ಬಳಸಲಾಗಿದೆ. ಇದನ್ನು ‘ಟಂಕೈ’ ಎಂಬ ಸಾಂಪ್ರದಾಯಿಕ ಭಾರತೀಯ ವಿಧಾನವನ್ನು ಬಳಸಿ, ಸಂಪೂರ್ಣ ಲೋಹರಹಿತ ಮತ್ತು ಎಂಜಿನ್‌ರಹಿತವಾಗಿ ಸಿದ್ಧಪಡಿಸಲಾಗಿದೆ. ಈ ವಿಶೇಷ ಹಡಗು ಸುಮಾರು 19.6 ಮೀ. ಉದ್ದ, 6.5 ಮೀ. ಅಗಲ ಮತ್ತು 3.33 ಮೀ. ಆಳವಿದೆ. ಇದರಲ್ಲಿ 15 ಜನ ನಾವಿಕರು ಪ್ರಯಾಣ ಮಾಡಬಹುದು. ಹಡಗಿನ ಮೂಲ ಆಕೃತಿಯನ್ನು ಮೊದಲು ನಿರ್ಮಿಸಿ, ಹಲಗೆಗಳನ್ನು ನಂತರ ಜೋಡಿಸಲಾಗಿದೆ. ಇದರಿಂದಾಗಿ ಹಡಗು ಒತ್ತಡದಲ್ಲಿ ಮುರಿಯುವ ಬದಲು ಬಲವಾದ ಅಲೆಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ನಿರ್ಮಿಸಿದ್ದು ಯಾರು?:

ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೋದಿ ಇನ್ನೋವೇಶನ್ಸ್‌ ಕಂಪನಿಯ ಸಹಯೋಗದಲ್ಲಿ 2023ರ ಜುಲೈನಲ್ಲಿ ಈ ಯೋಜನೆ ಆರಂಭವಾಯಿತು. ಬಾಬು ಶಂಕರನ್‌ ನೇತೃತ್ವದ ಕೇರಳದ ಕುಶಲಕರ್ಮಿಗಳ ತಂಡ ಕೈಯಲ್ಲೇ ಈ ಹಡಗನ್ನು ನಿರ್ಮಿಸಿತು. ಯಾವುದೇ ನೀಲನಕ್ಷೆಗಳು ಇಲ್ಲದ ಕಾರಣ, ಭಾರತೀಯ ನೌಕಾಪಡೆ ಒದಗಿಸಿದ ಪ್ರಾಚೀನ ಚಿತ್ರಗಳನ್ನು ಅನುಸಿರಿಸಿ ವಿನ್ಯಾಸ ಮಾಡಲಾಯಿತು. ಸುರಕ್ಷತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಐಐಟಿ ಮದ್ರಾಸ್‌ನಲ್ಲಿ ಹೈಡ್ರೊಡೈನಾಮಿಕ್ ಅಧ್ಯಯನಗಳು ಸೇರಿದಂತೆ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲಾಯಿತು. ಈ ಹಡಗನ್ನು 2025ರ ಫೆಬ್ರವರಿಯಲ್ಲಿ ಅಂತಿಮಗೊಳಿಸಿ, ಮೇ ತಿಂಗಳಲ್ಲಿ ಕರ್ನಾಟಕದ ಕಾರವಾರದಲ್ಲಿ ಔಪಚಾರಿಕವಾಗಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

ಯಾರು ಕೌಂಡಿನ್ಯ?:

ಒಂದನೇ ಶತಮಾನದ ಭಾರತೀಯ ಕಡಲಯಾನಿ ಮಹರ್ಷಿ ಕೌಂಡಿನ್ಯರ ಸ್ಮರಣಾರ್ಥ ಹಡಗಿಗೆ ಈ ಹೆಸರಿಡಲಾಗಿದೆ. ಆಗ್ನೇಯ ಏಷ್ಯಾ ಭಾಗದಲ್ಲಿ ನೌಕಾಯಾನ ಆರಂಭಿಸಿದ್ದ ಕೌಂಡಿನ್ಯ, ಕಾಂಬೋಡಿಯಾದ ಮೆಕಾಂಗ್‌ ಡೆಲ್ಟಾ ಪ್ರದೇಶ ತಲುಪಿದಾಗ ಕಡಲ್ಗಳ್ಳರು ದಾಳಿ ಮಾಡುತ್ತಾರೆ. ಅವರನ್ನು ಹಿಮ್ಮೆಟ್ಟಿಸಿ, ‘ಫುನಾನ್‌’ ಸಾಮ್ರಾಜ್ಯದ ರಾಜಕುಮಾರಿ ಸೋಮ ಎಂಬುವವಳನ್ನು ಕೌಂಡಿನ್ಯ ವಿವಾಹವಾಗುತ್ತಾರೆ. ಜೊತೆಗೆ ಆ ಸಾಮ್ರಾಜ್ಯವನ್ನು ಬಲಪಡಿಸಲು ಮಹತ್ವದ ಕೊಡುಗೆ ನೀಡುತ್ತಾರೆ.

ಈ ಮಾರ್ಗದ ಆಯ್ಕೆ ಏಕೆ?:

ಭಾರತದಿಂದ ಒಮಾನ್‌ನ ನಡುವಿನ ಕಡಲಮಾರ್ಗ ಪ್ರಾಚೀನ ಕಾಲದಲ್ಲಿ ಪ್ರಮುಖ ವ್ಯಾಪಾರಿ ಮಾರ್ಗವಾಗಿತ್ತು. ಮಸಾಲೆ ಪದಾರ್ಥ, ಜವಳಿಯನ್ನು ರಫ್ತು ಮಾಡಲು ಮತ್ತು ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಪರ್ಕ ಕಲ್ಪಿಸಲು ಇದನ್ನು ಬಳಸಲಾಗುತ್ತಿತ್ತು.

ಭಾರತೀಯ ಚಿಹ್ನೆಗಳ ಮೆರುಗು

* ಕದಂಬರ ಲಾಂಛನವಾದ ಗಂಡಭೇರುಂಡವನ್ನು ಹಡಗಿನ ಮೇಲೆ ಅಳವಡಿಸಲಾಗಿದೆ.

* ಹಾಯಿಗಳ ಮೇಲೆ ಸೂರ್ಯನ ಚಿತ್ರವಿದೆ.* ಪೌರಾಣಿಕ ಸಿಂಹದ ಆಕೃತಿಯಾದ ಸಿಂಹ ಯಾಳಿಯನ್ನು ಚಿತ್ರಿಸಲಾಗಿದೆ.* ಡೆಕ್ (ಹಡಗಿನ ಜಗುಲಿ) ಮೇಲೆ ಹರಪ್ಪಾ ಶೈಲಿಯ ಕಲ್ಲಿನ ಆಧಾರವನ್ನು ಜೋಡಿಸಲಾಗಿದೆ.

ಇದು ಅದ್ಭುತ ಹಡಗು‘ಭಾರತದ ಪ್ರಾಚೀನ ಹೊಲಿಗೆ-ಹಡಗು ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿರುವ ಐಎನ್‌ಎಸ್‌ವಿ ಕೌಂಡಿನ್ಯ ಗುಜರಾತ್‌ನ ಪೋರ್‌ಬಂದರ್‌ನಿಂದ ಒಮಾನ್‌ನ ಮಸ್ಕತ್‌ವರೆಗೆ ತನ್ನ ಮೊದಲ ಪ್ರಯಾಣ ನಡೆಸುತ್ತಿರುವುದು ಅದ್ಭುತವಾಗಿದೆ. ಇಂಥ ಅದ್ಭುತ ಹಡಗಿಗೆ ಮತ್ತೆ ಜೀವ ತುಂಬಿದ್ದಕ್ಕಾಗಿ ವಿನ್ಯಾಸಕಾರರು, ಕುಶಲಕರ್ಮಿಗಳು, ಹಡಗು ನಿರ್ಮಾತೃಗಳು ಮತ್ತು ಭಾರತೀಯ ನೌಕಾಪಡೆಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕೊಲ್ಲಿ ಪ್ರಾಂತ್ಯದೊಂದಿಗೆ ನಮ್ಮ ಐತಿಹಾಸಿಕ ಬಾಂಧವ್ಯವನ್ನು ಮರು ಅನ್ವೇಷಿಸಲು ಹೊರಟಿರುವ ಸಿಬ್ಬಂದಿಗೆ ಶುಭ ಮತ್ತು ಸುರಕ್ಷಿತ ಪ್ರಯಾಣವನ್ನು ಆಶಿಸುತ್ತೇನೆ.’

- ನರೇಂದ್ರ ಮೋದಿ, ಪ್ರಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಾವಳಿ ಪರ್ವತ ಕುರಿತ ತನ್ನದೇ ತೀರ್ಪಿಗೆ ಸುಪ್ರೀಂ ತಡೆ
ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ, ಹಳೇ ದ್ವೇಷಕ್ಕೆ ತಂದೆ ಬಲಿಪಶು, ಕಣ್ಣೀರಿಟ್ಟ ಉನ್ನಾವೋ ಕೇಸ್ ಆರೋಪಿ ಪುತ್ರಿ