ಭಾರತದ ಮೊದಲ ಪ್ರಜೆ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ದ್ರೌಪದಿ ಮುರ್ಮು ಅವರು 5,77,777 ಮೌಲ್ಯದ 2161 ಮತಗಳನ್ನು ಪಡೆದರೆ, ಯಶವಂತ್ ಸಿನ್ಹಾ 2,61,062 ಮೌಲ್ಯದ 1058 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಆರಂಭಗೊಂಡಿತ್ತು. ಮುರ್ಮು ಗೆಲುವು ಖಚಿತವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಮುರ್ಮು ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಷ್ರಪತಿ ಚುನಾವಣೆ ಮತ ಎಣಿಕೆ, ಐತಿಹಾಸಿಕ ಗೆಲುವು ಹಾಗೂ ಇಡೀ ದಿನದ ಸುದ್ದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

08:35 PM (IST) Jul 21
ರಾಷ್ಟ್ರಪತಿಯಾಗಿ ಆಯ್ಕೆಯಾದ ಬೆನ್ನಲ್ಲೇ ದ್ರೌಪದಿ ಮುರ್ಮು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರತಿಸ್ಪರ್ಧಿ ಯಶವಂತ್ ಸಿನ್ಹ, ಮತ ಹಾಕಿದ ಸಂಸದರು, ಶಾಸಕರು ಸೇರಿದಂತೆ ಎಲ್ಲರಿಗೂ ಮುರ್ಮು ಧನ್ಯವಾದ ಹೇಳಿದ್ದಾರೆ.
08:32 PM (IST) Jul 21
ದೇಶದ 15ನೇ ರಾಷ್ಟ್ರಪತಿಯಾಗಿ ಭರ್ಜರಿ ಗೆಲುವು ದಾಖಲಿಸಿದ ದ್ರೌಪದಿ ಮುರ್ಮುಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ.
08:30 PM (IST) Jul 21
ದ್ರೌಪದಿ ಮುರ್ಮು ಭಾರಿ ಅಂತರದ ಗೆಲುವು ದಾಖಲಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ.
08:28 PM (IST) Jul 21
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಆಯ್ಕೆಯಾದ ದೇಶದ ಮೊದಲ ಆದಿವಾಸಿ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
06:21 PM (IST) Jul 21
ಎರಡನೇ ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ ಸಾಧಿಸಿದ್ದು, 1,349 ಮತಗಳನ್ನು ಪಡೆದಿದ್ದಾರೆ. ಅದರ ಒಟ್ಟೂ ಮೌಲ್ಯ 4,83,299 ಆಗಿದೆ. ಯಶ್ವಂತ್ ಸಿನ್ಹಾ ಅವರಿಗೆ ಒಟ್ಟೂ 537 ಮತಗಳು ಸಿಕ್ಕಿದ್ದು ಅದರ ಮೌಲ್ಯ 1,89,876 ಆಗಿದೆ. ಎರಡನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡ ಬೆನ್ನಲ್ಲೇ ರಾಜ್ಯಸಭೆ ಸೆಕ್ರೆಟರಿ ಜನರಲ್ ಘೋಷಣೆ ಮಾಡಿದ್ದಾರೆ. ದ್ರೌಪದಿ ಮುರ್ಮು ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸುವುದಷ್ಟೇ ಬಾಕಿ ಉಳಿದಿದ್ದು, ಬಿಜೆಪಿಗರ ಪ್ರಕಾರ ವಿರೋಧ ಪಕ್ಷಗಳ ಹದಿನೇಳು ಸಂಸದರು ಮುರ್ಮು ಅವರ ಪರವಾಗಿ ಮತಹಾಕಿದ್ದಾರೆ.
02:56 PM (IST) Jul 21
ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಮೊದಲ ಸುತ್ತು ಅಂತ್ಯಗೊಂಡಿದ್ದು ದ್ರೌಪದಿ ಮುರ್ಮು ನಿರೀಕ್ಷೆಯಂತೆ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನ ಫಲಿತಾಂಶವನ್ನು ರಾಜ್ಯಸಭಾ ಸೆಕ್ರೆಟರಿ ಜನರಲ್ ಪ್ರಕಟಿಸಿದ್ದು, ದ್ರೌಪದಿ ಮುರ್ಮು ಅವರಿಗೆ 540 ಸಂಸದರ ಮತ, ಯಶವಂತ ಸಿನ್ಹಾ ಅವರಿಗೆ 208 ಸಂಸದರ ಮತ ಸಿಕ್ಕಿದೆ. 15 ಸಂಸದರ ಮತ ಅನುರ್ಜಿತವಾಗಿದೆ. ಮೊದಲ ಸುತ್ತಿನಲ್ಲಿ 332 ಮತಗಳಿಂದ ದ್ರೌಪದಿ ಮುರ್ಮು ಭಾರೀ ಮುನ್ನಡೆ ಕಾದುಕೊಂಡಿದ್ದಾರೆ.
01:00 PM (IST) Jul 21
ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ಗಂಟೆಗಳು ಕಳೆಯುತ್ತಿದೆ. ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಇಬ್ಬರಲ್ಲಿ ಯಾರು ಮುಂದಿನ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಮೂಲಗಳ ಪ್ರಕಾರ ದ್ರೌಪದಿ ಮುರ್ಮು ಆಯ್ಕೆ ಬಹುತೇಕ ಖಚಿತವಾಗಿದೆ.
12:00 PM (IST) Jul 21
ಬ್ಯಾಲಟ್ ಬಾಕ್ಸ್‌ಗಳನ್ನು ಹೊರತೆಗೆಯಲಾಗಿದ್ದು ಭಾರತದ 15ನೇ ರಾಷ್ಟ್ರಪತಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಅಂಶ ಕೆಲವೇ ಕ್ಷಣಗಳಲ್ಲಿ ಹೊರಬರಲಿದೆ. ಮತ ಎಣಿಕೆ ಆರಂಭವಾಗಿದ್ದು, ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ಖಚಿತವಾಗಿದೆ. ಯಶ್ವಂತ್ ಸಿನ್ಹಾ ಅವರಿಗೆ ಎಲ್ಲಾ ವಿರೋಧ ಪಕ್ಷಗಳ ಬೆಂಬಲ ಸಿಕ್ಕಿಲ್ಲವಾದ್ದರಿಂದ, ಗೆಲುವು ಕಷ್ಟ ಎನ್ನಲಾಗಿದೆ. ಆದರೂ ಕಡೆಯ ಕ್ಷಣದವರೆಗೂ ಕಾದು ನೋಡುವ ನಿರ್ಧಾರಕ್ಕೆ ಯಶ್ವಂತ್ ಸಿನ್ಹಾ ಬಂದಿದ್ದಾರೆ. ವಿರೋಧ ಪಕ್ಷಗಳಲ್ಲಿ ಕೆಲವು ಪಕ್ಷಗಳು ಕಡೆಯ ಹಂತದಲ್ಲಿ ಸಿನ್ಹಾ ವಿರುದ್ಧ ಮತ ಚಲಾಯಿಸಿದೆ. ಶಿವಸೇನೆ, ಜೆಡಿಎಸ್, ಎಸ್‌ಪಿ ಸೇರಿದಂತೆ ಹಲವು ಪಕ್ಷಗಳ ಸದಸ್ಯರು ಅಡ್ಡ ಮತದಾನ ಮಾಡಿದ್ದಾರೆ. ಈ ಕಾರಣದಿಂದ ಸಿನ್ಹಾ ಅವರು ಗೆಲುವಿನ ನಗೆ ಬೀರುವುದು ಕಷ್ಟ ಎನ್ನಲಾಗಿದೆ.
11:17 AM (IST) Jul 21
ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಗೆಲುವಿನ ಬಗ್ಗೆ ಎನ್‌ಡಿಎ ಭರವಸೆ ಹೊಂದಿದೆ. ಬಿಜೆಪಿ ನೇತೃತ್ವದಲ್ಲಿ ಒಟ್ಟೂ 43 ಪಕ್ಷಗಳು ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿತ್ತು. ಇತ್ತ ವಿರೋಧ ಪಕ್ಷಗಳ ಅಭ್ಯರ್ಥಿ ಯಶ್ವಂತ್ ಸಿನ್ಹಾ ಅವರ ಪರ 34 ವಿಪಕ್ಷಗಳು ಬೆಂಬಲ ಸೂಚಿಸಿದ್ದವು. ಆದರೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪರ ಸಂಖ್ಯಾಬಲ ಹೆಚ್ಚಿದೆ ಎನ್ನಲಾಗಿದ್ದು, ಗೆಲುವು ನಿಶ್ಚಿತ ಎನ್ನಲಾಗುತ್ತಿದೆ.
11:04 AM (IST) Jul 21
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದ್ರೌಪದಿ ಮುರ್ಮು ಅವರ ಹಳ್ಳಿಗೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಫಲಿತಾಂಶ ಬಂದ ನಂತರವಷ್ಟೇ ಅವರ ಭೇಟಿ ಅಧಿಕೃತವಾಗಲಿದೆ ಎಂದು ಮೂಲಗಳು ತಿಳಿಸಿವೆ.
10:38 AM (IST) Jul 21
ಒಡಿಶಾದ ಬುಡುಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುತ್ತಿರುವುದು ಬಹಳ ಹೆಮ್ಮೆ. ಇದು ಒಡಿಶಾ ಮತ್ತು ಬುಡಕಟ್ಟು ಜನಾಂಗಕ್ಕೆ ಹೆಮ್ಮೆ ಮಾತ್ರವಲ್ಲಿ, ಇಡೀ ಭಾರತಕ್ಕೆ ಹೆಮ್ಮೆಯ ವಿಷಯವೆನ್ನುತ್ತಾರೆ ದ್ರೌಪದಿ ಮುರ್ಮು ಸಹೋದರ ತಾರಿಣಿಸೇನ್ ತುಡು.
10:01 AM (IST) Jul 21
ಭಾರತದ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದೆ. ಸಂಸತ್ತಿನಲ್ಲಿ ಎಣಿಕೆಗೆ ಸಕಲ ಸಿದ್ಧತೆಗಳು ನಡೆದಿವೆ
09:56 AM (IST) Jul 21
09:33 AM (IST) Jul 21
ಎನ್‌ಡಿಎ ಅಭ್ಯರ್ಥಿ ಮುರ್ಮು ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರುವ ಬುಡಕಟ್ಟು ಸಮುದಾಯದ ಮೊದಲ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ. ಅಲ್ಲದೇ ಪ್ರತಿಭಾ ಪಾಟೀಲ್ ಬಳಿಕ ದೇಶದ 2ನೇ ಮಹಿಳಾ ರಾಷ್ಟ್ರಪತಿಯಾಗಲಿದ್ದಾರೆ. ಜಾರ್ಖಂಡನ ಮಾಜಿ ರಾಜ್ಯಪಾಲೆಯಾಗಿರುವ ಮುರ್ಮು (64) ಈವರೆಗಿನ ಅತಿ ಕಡಿಮೆ ವಯಸ್ಸಿನ ರಾಷ್ಟ್ರಪತಿ ಹಾಗೂ ಸ್ವಾತಂತ್ರ್ಯಾನಂತರ ಹುಟ್ಟಿದ ಮೊದಲ ರಾಷ್ಟ್ರಪತಿ ಕೂಡಾ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ರಾಷ್ಟ್ರಪತಿಯಾಗಿರುವ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಜು.24 ರಂದು ಮುಕ್ತಾಯವಾಗಲಿದ್ದು, ಜು.25ಕ್ಕೆ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿಕೊಳ್ಳಲಿದ್ದಾರೆ.
09:32 AM (IST) Jul 21
ಅರ್ಹ 4,796 ಸಂಸದ ಹಾಗೂ ಶಾಸಕರಲ್ಲಿ 4,754 ಜನರು ಮತ ಚಲಾಯಿಸಿದ್ದರು. ದ್ರೌಪದಿ ಮುರ್ಮು ಅವರು ಎಲೆಕ್ಟೋರಲ್ ಕಾಲೇಜಿನ 2/3ರಷ್ಟುಮತ (10,86,431) ಮತ ಪಡೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಅಂದಾಜಿಸಿದೆ. ಚುನಾವಣೆಯಲ್ಲಿ ವಿಪಕ್ಷ ನಾಯಕರು ಅಡ್ಡ ಮತ ಚಲಾಯಿಸಿ ಮುರ್ಮು ಬೆಂಬಲಿಸಿದ್ದು, ಅವರ ಆಯ್ಕೆಯನ್ನು ಇನ್ನಷ್ಟು ಖಚಿತ ಪಡಿಸಿದೆ. ಜೊತೆಗೆ ಮುರ್ಮು ದಾಖಲೆ ಮತಗಳ ಅಂತರದ ಗೆಲುವಿನ ಸಾಧ್ಯತೆಯನ್ನೂ ಊಹಿಸಲಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ