ಡಿಸೆಂಬರ್‌ ವೇಳೆ ಎಲ್ಲರಿಗೂ ಲಸಿಕೆ: ಪ್ರಕಾಶ್‌ ಜಾವ್ಡೇಕರ್‌!

By Suvarna NewsFirst Published May 29, 2021, 8:12 AM IST
Highlights

* ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ತಿರುಗೇಟು

* ಡಿಸೆಂಬರ್‌ ವೇಳೆ ಎಲ್ಲರಿಗೂ ಲಸಿಕೆ: ಪ್ರಕಾಶ್‌ ಜಾವ್ಡೇಕರ್‌

* ವರ್ಷಾಂತ್ಯದ ವೇಳೆಗೆ 108 ಕೋಟಿ ಜನರಿಗೆ 216 ಕೋಟಿ ಡೋಸ್‌ ಲಸಿಕೆ

ನವದೆಹಲಿ(ಮೇ.29): ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ, ದೇಶದ ಕೇವಲ ಶೇ.3ರಷ್ಟುಜನರಿಗೆ ಮಾತ್ರವೇ ಲಸಿಕೆ ನೀಡಲು ಮೋದಿ ಸರ್ಕಾರ ಸಫಲವಾಗಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಡಿಸೆಂಬರ್‌ ವೇಳೆಗೆ ದೇಶದ 108 ಕೋಟಿ ಅರ್ಹರಿಗೆ ಪೂರ್ಣವಾಗಿ ಲಸಿಕೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ಡಿಸೆಂಬರ್‌ ವೇಳೆಗೆ ದೇಶದ 108 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು. ಇದಕ್ಕಾಗಿ 216 ಕೋಟಿ ಲಸಿಕೆ ಸಿದ್ಧವಾಗಲಿದೆ ಎಂದು ಆರೋಗ್ಯ ಸಚಿವಾಲಯ ಈಗಾಗಲೇ ಮಾಹಿತಿ ನೀಡಿದೆ. ಇದರ ಹೊರತಾಗಿಯೂ ದೇಶದ ಜನರಿಗೆ ಪೂರ್ಣವಾಗಿ ಲಸಿಕೆ ನೀಡಲು ಇನ್ನೂ ಮೂರು ವರ್ಷ ಬೇಕು ಎಂಬ ರಾಹುಲ್‌ ಹೇಳಿಕೆ, ಜನರಲ್ಲಿ ಕೋವಿಡ್‌ ಕುರಿತ ಭೀತಿಯನ್ನು ಹೆಚ್ಚಿಸುವಂತಿದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಕೋವಿಡ್‌ ನಿರ್ವಹಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಧಾನಿ ಮೋದಿ ಅವರನ್ನು ನೌಟಂಕಿ ಎಂದೆಲ್ಲಾ ಕರೆಯುವುದು, ಟೂಲ್‌ಕಿಟ್‌ ಕಾಂಗ್ರೆಸ್‌ ಇದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪ್ರಧಾನಿ ಬಗ್ಗೆ ರಾಹುಲ್‌ ಏನು ಹೇಳಿದ್ದಾರೋ ಅದು ಅವರು ದೇಶಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.

ಅಲ್ಲದೆ ಭಾರತ ಅತಿ ವೇಗವಾಗಿ ಲಸಿಕೆ ನೀಡುತ್ತಿರುವ ಜಗತ್ತಿನ 2ನೇ ದೇಶ. ಈವರೆಗೆ 20 ಕೋಟಿ ಜನರಿಗೆ ಲಸಿಕೆ ನೀಡಿದೆ ಎಂಬುದು ಅವರಿಗೆ ನೆನಪಿರಲಿ ಎಂದು ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಹಾಗೆಯೇ ರಾಹುಲ್‌ ಜೀ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳತ್ತ ಗಮನವಹಿಸಿ. ಅಲ್ಲಿ ಅವ್ಯವಸ್ಥೆ ಇದೆ ಎಂದು ಟಾಂಗ್‌ ನೀಡಿದ್ದಾರೆ.

click me!