ಶೀಘ್ರ ಇಸ್ರೇಲ್‌ ಜತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ

Kannadaprabha News   | Kannada Prabha
Published : Feb 27, 2026, 05:22 AM IST
PM Modi Israel Visit

ಸಾರಾಂಶ

ಪ್ರಧಾನಿ ಮೋದಿ ಅವರ 2 ದಿನಗಳ ಇಸ್ರೇಲ್‌ ಪ್ರವಾಸ ಯಶಸ್ವಿಯಾಗಿದ್ದು, ಉಭಯ ದೇಶಗಳು 27 ಒಪ್ಪಂದಗಳಿಗೆ ಸಹಿ ಹಾಕಿವೆ. ಇದಲ್ಲದೆ, ಮುಂಬರುವ ದಿನಗಳಲ್ಲಿ ಯುರೋಪ್‌ ಒಕ್ಕೂಟದ ಮಾದರಿಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಹಾಗೂ ರಕ್ಷಣಾ ಸಹಕಾರವನ್ನು ವಿಶೇಷ ದರ್ಜೆಗೆ ಏರಿಸಲು ಉಭಯ ದೇಶಗಳು ಸಮ್ಮತಿಸಿವೆ.

ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ಇಸ್ರೇಲ್‌ ಪ್ರವಾಸ ಯಶಸ್ವಿಯಾಗಿದ್ದು, ಉಭಯ ದೇಶಗಳು 27 ಒಪ್ಪಂದಗಳಿಗೆ ಸಹಿ ಹಾಕಿವೆ. ಇದಲ್ಲದೆ, ಮುಂಬರುವ ದಿನಗಳಲ್ಲಿ ಯುರೋಪ್‌ ಒಕ್ಕೂಟದ ಮಾದರಿಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಹಾಗೂ ರಕ್ಷಣಾ ಸಹಕಾರವನ್ನು ವಿಶೇಷ ದರ್ಜೆಗೆ ಏರಿಸಲು ಉಭಯ ದೇಶಗಳು ಸಮ್ಮತಿಸಿವೆ.

ಗುರುವಾರ ಜೆರುಸಲೇಂನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ 27 ಆರ್ಥಿಕ, ಭದ್ರತೆ ಮತ್ತು ರಾಜತಾಂತ್ರಿಕ ಒಪ್ಪಂದಗಳಿಗೆ ಭಾರತ ಹಾಗೂ ಇಸ್ರೇಲಿ ಪ್ರತಿನಿಧಿಗಳು ಸಹಿ ಹಾಕಿದರು.

ರಕ್ಷಣೆ, ಕೃಷಿ, ಭೂಭೌತಿಕ ಪರಿಶೋಧನೆ, ಪರಂಪರೆ, ವಿಜ್ಞಾನ, ಶಿಕ್ಷಣ, ಆರ್ಥಿಕತೆ, ಸೈಬರ್, ತಂತ್ರಜ್ಞಾನ, ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದ ಏರ್ಪಟ್ಟವು.

ಮುಂದಿನ ಐದು ವರ್ಷಗಳಲ್ಲಿ 50,000 ಭಾರತೀಯ ಕಾರ್ಮಿಕರಿಗೆ ಅವಕಾಶ ನೀಡುವುದು ಒಪ್ಪಂದದಲ್ಲಿ ಸೇರಿದೆ. ಇದರಿಂದ ಭಾರತದ ತಂತ್ರಜ್ಞರು. ಕುಶಲಕರ್ಮಿಗಳು, ಹೋಟೆಲ್‌ ಕೆಲಸಗಾರರು, ಶ್ರಮಿಕ ವರ್ಗದವರಿಗೆ ಅಲ್ಲಿ ಕೆಲಸ ಕೊಡಿಸುವ ಉದ್ದೇಶ ಹೊಂದಲಾಗಿದೆ.

ಇನ್ನು ಭಾರತದ ಯುಪಿಐ ಅನ್ನು ಇಸ್ರೇಲಲ್ಲಿ ಬಳಸಲು ಅನುವು ಮಾಡಿಕೊಡಲಾಗಿದೆ. ಇದರಿಂದ ಭಾರತೀಯ ಪ್ರವಾಸಿಗರು ಇಸ್ರೇಲ್‌ನಲ್ಲಿ ತಮ್ಮ ಯುಪಿಐ ಆ್ಯಪ್‌ ಬಳಸಿ ವಹಿವಾಟು ನಡೆಸಬಹುದಾಗಿದೆ.

ಇಸ್ರೇಲ್‌ ಕೃಷಿಯಲ್ಲಿ ಹೆಸರುವಾಸಿಯಾದ ಕಾರಣ ಜಂಟಿಯಾಗಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆಗೆ ಸಮ್ಮತಿಸಲಾಗಿದೆ.

ರಕ್ಷಣಾ ಕ್ಷೇತ್ರದಲ್ಲೂ ಒಪ್ಪಂದ ಮಾಡಿಕೊಳ್ಳಲಾಗಿದ್ದು, ರಕ್ಷಣಾ ಸಂಬಂಧವನ್ನು ‘ವಿಶೇಷ ರಕ್ಷಣಾ ಸಹಭಾಗಿತ್ವ’ಕ್ಕೆ ಏರಿಸಲು ನಿರ್ಧರಿಸಲಾಗಿದೆ. 2017ಕ್ಕೆ ಉಭಯ ದೇಶಗಳು ರಕ್ಷಣಾ ಸಹಭಾಗಿತ್ವ ಘೋಷಿಸಿದ್ದವು. ಅದಕ್ಕೆ ಈಗ ವಿಶೇಷ ಸ್ಥಾನಮಾನ ಸಿಗಲಿದೆ. ಈ ಮೂಲಕ ಜಂಟಿಯಾಗಿ ರಕ್ಷಣಾ ಸಲಕರಣೆಗಳನ್ನು ಉತ್ಪಾದಿಸಿ ರಕ್ಷಣಾ ಪಾಲುದಾರಿಕೆಯನ್ನು ವಿಸ್ತರಿಸಲು ಪ್ರತಿಜ್ಞೆ ಮಾಡಿವೆ.

ಶೀಘ್ರ ಮುಕ್ತ ವ್ಯಾಪಾರ ಒಪ್ಪಂದ- ಮೋದಿ:

ನೆತನ್ಯಾಹು ಹಾಗೂ ಇಸ್ರೇಲ್‌ ಅಧ್ಯಕ್ಷ ಇಸಾಕ್ ಹೆರ್ಜೋಗ್ ಭೇಟಿ ಬಳಿಕ ನೆತನ್ಯಾಹು ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಇಸ್ರೇಲ್ ಜೊತೆ ಪರಸ್ಪರ ಪ್ರಯೋಜನಕಾರಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಶೀಘ್ರದಲ್ಲೇ ಅಂತಿಮ ರೂಪ ನೀಡಲಿದೆ’ ಎಂದು ಹೇಳಿದ್ದಾರೆ. ಅಲ್ಲದೆ, ಇಸ್ರೇಲ್‌ನಲ್ಲಿ ಭಾರತದ ಯುಪಿಐ ಬಳಕೆಗೆ ಒಪ್ಪಂದ ಅಂತಿಮವಾಗಿದೆ’ ಎಂದರು.

ಇನ್ನು ರಕ್ಷಣಾ ಕ್ಷೇತ್ರದಲ್ಲಿ ಕೂಡ ಜಂಟಿ ಅಭಿವೃದ್ಧಿ, ಉತ್ಪಾದನೆ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಎರಡೂ ದೇಶಗಳು ಅನುಸರಿಸುತ್ತವೆ ಎಂದು ಅವರು ನುಡಿದರು.

ಮೋದಿ ಶಾಂತಿ ಮಂತ್ರ:

ಇನ್ನು ಇಸ್ರೇಲ್‌-ಹಮಾಸ್‌ ಸಂಘರ್ಷದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ಮೋದಿ, ‘ಮಾನವೀಯತೆಯು ಎಂದಿಗೂ ಸಂಘರ್ಷದ ಬಲಿಪಶುವಾಗಬಾರದು ಎಂಬುದು ಭಾರತದ ಸ್ಪಷ್ಟ ನಿಲುವು. ಗಾಜಾ ಶಾಂತಿ ಉಪಕ್ರಮದ ಮೂಲಕ ಶಾಂತಿಯ ಹಾದಿ ನಿರ್ಮಾಣವಾಗಿದೆ. ಭಾರತ ಈ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಭಾರತದ ಭದ್ರತಾ ಹಿತಾಸಕ್ತಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಸಂಬಂಧಿಸಿದೆ’ ಎಂದರು.

ಉಗ್ರವಾದದ ವಿರುದ್ಧ ಒಮ್ಮತ:

‘ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ ಎಂಬ ಒಮ್ಮತದ ದೃಷ್ಟಿಕೋನವನ್ನು ಭಾರತ ಮತ್ತು ಇಸ್ರೇಲ್ ಹೊಂದಿವೆ. ಉಗ್ರವಾದ ಮತ್ತು ಅದರ ಬೆಂಬಲಿಗರನ್ನು ಎದುರಿಸುವಲ್ಲಿ ಇಬ್ಬರೂ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಮಾನವ ಸಂವೇದನೆಗಳ ಬಲವಾದ ತಳಹದಿಯ ಮೇಲೆ ಸ್ಥಾಪಿತವಾಗಿದೆ. ಇಂದು, ನಮ್ಮ ಪಾಲುದಾರಿಕೆಯನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ ಸ್ಥಾನಮಾನಕ್ಕೆ ಏರಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ’ ಎಂದರು.

ಇಸ್ರೇಲಿ ಸಿರೀಸ್‌ ‘ಫೌದಾ’ ತಂಡದ ಜತೆ ಮೋದಿ ಸೆಲ್ಫಿ!

ಜೆರುಸಲೇಂ: ಇಸ್ರೇಲ್‌ನ ಪ್ರಸಿದ್ಧ ಬೇಹುಗಾರಿಕಾ ಸಿರೀಸ್‌ ಆದ ‘ಫೌದಾ’ದ ತಾರಾಗಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು, ಅವರೊಂದಿಗೆ ಸೆಲ್ಫಿಗೂ ಪೋಸ್‌ ಕೊಟ್ಟಿದ್ದಾರೆ.ಇದರ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ‘ಈ ಭೇಟಿ ವೇಳೆ ಸೆಲ್ಫಿ ತೆಗೆಸಿಕೊಳ್ಳಬೇಕಿತ್ತೇ ಹೊರತು ಯಾವುದೇ ರಹಸ್ಯ ಕಾರ್ಯಾಚರಣೆ ಕೈಗೊಳ್ಳಬೇಕಿರಲಿಲ್ಲ’ ಎಂದು ಚಟಾಕಿ ಹಾರಿಸಿದ್ದಾರೆ.

ಆ ಫೋಟೋದಲ್ಲಿ, 2015ರಲ್ಲಿ ಶುರುವಾದ ಈ ಶೋನ ಪಾತ್ರಧಾರಿಗಳಾದ ಲಿಯರ್ ರಾಝ್, ಅವಿ ಇಸ್ಸಾಚರೋಫ್, ನಟರು ಲೆಟಿಟಿಯಾ ಈಡೋ, ಡೊರಾನ್ ಬೆನ್-ಡೇವಿಡ್‌ ಹಾಗೂ ಇತರರು ಇದ್ದರು.

ಇಸ್ರೇಲ್‌ ಪ್ರಧಾನಿಯಿಂದ ಮೈಸೂರು ಯೋಧರ ಸ್ಮರಣೆ

ಜೆರುಸಲೇಂ: ಇಸ್ರೇಲ್‌ನ ‘ಹೈಫಾ’ ನಗರವನ್ನು ಶತ್ರುಗಳಿಂದ ಮುಕ್ತಗೊಳಿಸಿದ ಮೈಸೂರು ಲ್ಯಾನ್ಸರ್ಸ್‌ ಪಡೆಗಳ ಬಲಿದಾನವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಸ್ಮರಿಸಿದರು.ಮೊದಲ ವಿಶ್ವಯುದ್ಧದ ಸಮಯದಲ್ಲಿ ಮೈಸೂರ ಲ್ಯಾನ್ಸರ್ಸ್‌ ಪಡೆಗಳು ಹೈಫಾ ನಗರವನ್ನು ಬಂಧಮುಕ್ತಗೊಳಿಸಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿಗೆ 10 ಕೋಟಿ ಇನ್‌ಸ್ಟಾ ಹಿಂಬಾಲಕರು: ವಿಶ್ವದ ನಂ.1!
India News Live: ಟಿ20 ವಿಶ್ವಕಪ್ - ನಿನ್ನೆ ನಡೆದ ಭಾರತ-ಜಿಂಬಾಬ್ವೆ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?