
ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರೀ ಪ್ರಮಾಣದ ತೈಲ, ಅನಿಲ ಪೂರೈಕೆ ಕೊರತೆ ಎದುರಿಸುತ್ತಿರುವ ಭಾರತ ಮತ್ತು ಇತರ ತೈಲ ಆಮದುದಾರ ದೇಶಗಳು ಪರ್ಯಾಯ ಜಲಮಾರ್ಗಗಳ ಮೂಲಕ ಇಂಧನ ತರಿಸಿಕೊಳ್ಳಲು ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ. ಆದರೂ ತೈಲ ಸಾಗಣೆ ವಿಚಾರದಲ್ಲಿ ಯುದ್ಧಪೂರ್ವದಂತೆ ಸಹಜ ಸ್ಥಿತಿ ನಿರ್ಮಾಣವು 2026ರಲ್ಲಿ ಅಸಂಭವವಾಗಿದೆ’ ಎಂದು ಮೂಡೀಸ್ ರೇಟಿಂಗ್ಸ್ ಹೇಳಿದೆ.
‘ಭಾರತವು ಹೆಚ್ಚು ಅಪಾಯಕ್ಕೆ ಒಳಗಾಗುವ ದೇಶಗಳಲ್ಲಿ ಒಂದಾಗಿದೆ. ಏಕೆಂದರೆ ಅದರ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ.46 ತೈಲ ಮಧ್ಯಪ್ರಾಚ್ಯದಿಂದ ಬರುತ್ತಿದೆ. ಕರೆನ್ಸಿ ಅಪಮೌಲ್ಯವೂ ಭಾರತದ ಮೇಲೆ ಪರಿಣಾಮ ಬೀರಲಿದೆ’ ಎಂದು ಭೌಗೋಳಿಕ ರಾಜಕೀಯ ಅಪಾಯಗಳ ಕುರಿತಾದ ಜಾಗತಿಕ ವರದಿಯಲ್ಲಿ ಮೂಡೀಸ್ ಅಭಿಪ್ರಾಯಪಟ್ಟಿದೆ.
ತೈಲ ಆಪತ್ತಿನಿಂದ ಭಾರತದ ಜಿಡಿಪಿ ಶೇ.6.8ರ ಬದಲು 6ಕ್ಕೆ ಇಳಿಯಬಹುದು ಎಂದು ಮೂಡೀಸ್ ಅಂದಾಜಿಸಿತ್ತು. ಇದರ ಬೆನ್ನಲ್ಲೇ ಈ ವರದಿ ಬಂದಿದೆ.
‘ತೈಲ ಆಮದುದಾರ ಪ್ರಮುಖ ದೇಶಗಳಾದ ಚೀನಾ, ಭಾರತ, ಜಪಾನ್ ಮತ್ತು ಕೊರಿಯಾಗಳು ಇರಾನ್ ಜೊತೆ ದ್ವಿಪಕ್ಷೀಯವಾಗಿ ಮಾತುಕತೆ ನಡೆಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ಬಹುಶಃ ಲಾರಕ್ ದ್ವೀಪದ ಬಳಿ ಮತ್ತು ಒಮಾನಿ ಪ್ರಾದೇಶಿಕ ಜಲಮಾರ್ಗದ ಮೂಲಕ ಪ್ರತ್ಯೇಕ ತೈಲ ಸಾಗಣೆ ಕಾರಿಡಾರ್ ರೂಪುಗೊಳ್ಳಬಹುದು. ಆದಾಗ್ಯೂ 2026ರಲ್ಲಿ ಯುದ್ಧಕ್ಕಿಂತ ಮೊದಲು ಇದ್ದಂತೆ ಪೂರೈಕೆ ಸಹಜ ಸ್ಥಿತಿಗೆ ಬರುವುದು ಅಸಂಭವ’ ಎಂದು ವರದಿ ಹೇಳಿದೆ.
‘ಮುಂದಿನ 6 ತಿಂಗಳಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಮಾರ್ಗ ಪುನಾರಂಭವಾದರೂ, ತೈಲ ಮಾರುಕಟ್ಟೆಗೆ ಪೂರೈಕೆ ನಿರ್ಬಂಧಿತವಾಗಿಯೇ ಇರುತ್ತದೆ. ಹೆಚ್ಚು ಬೇಡಿಕೆ ಹಾಗೂ ಅಸ್ಥಿರ ಬೆಲೆಗಳು ದೇಶಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತವೆ’ ಎಂದಿದೆ.
‘ಈ ವರ್ಷದ ಬಹುಪಾಲು ಬ್ರೆಂಟ್ ಕಚ್ಚಾ ತೈಲವು ಬ್ಯಾರಲ್‌ಗೆ 90-110 ಡಾಲರ್ ವ್ಯಾಪ್ತಿಯಲ್ಲಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದೂ ಅಂದಾಜಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ