ಭಾರೀ ಕುತೂಹಲ ಮೂಡಿಸಿರುವ ಮತ್ತು ರಾಜಕೀಯ ಕೋಲಾಹಲಕ್ಕೆ ಕಾರಣವಾಗುವ ನಿರೀಕ್ಷೆ ಇರುವ ಸಂಸತ್ ವಿಶೇಷ ಕಲಾಪಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದೆ. ನ.30ರಿಂದ ಡಿ.3ರವರೆಗೆ 4 ದಿನಗಳ ಕಾಲ ವಿಶೇಷ ಕಲಾಪವನ್ನು ಸರ್ಕಾರ ಕರೆದಿದೆ. ಮಹತ್ವದ ವಿಷಯಗಳಿಗಾಗಿ ಈ ಕಲಾಪ ಕರೆಯಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ, ಇದು ಕಳೆದ ಅಧಿವೇಶನಗಳಲ್ಲಿ ಬಹುಮತವಿಲ್ಲದೆ ಸೋಲು ಕಂಡಿದ್ದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲೆಂದೇ ಕರೆಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇದಕ್ಕೆ ಪೂರಕವಾಗಿ ಶುಕ್ರವಾರ ಕೇಂದ್ರ ಸಚಿವ ಸಂಪುಟದ ಸಭೆ ಕರೆಯಲಾಗಿದ್ದು, ಅದರಲ್ಲಿ ಸಂಸತ್ತಿನ ವಿಶೇಷ ಕಲಾಪದಲ್ಲಿ ಮಂಡಿಸುವ ವಿಧೇಯಕಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಲೋಕಸಭೆ ಕಲಾಪ ನ.30 ಮತ್ತು ಜ.1ರಿಂದ ನಡೆಯಲಿದ್ದರೆ, ರಾಜ್ಯಸಭೆ ಕಲಾಪ ಡಿ.2 ಮತ್ತು 3ರಂದು ನಡೆಯಲಿದೆ.
ಮಸೂದೆ ಏಕೆ?:
1976ರ ಬಳಿಕ ಕ್ಷೇತ್ರ ಮರುವಿಂಗಡಣೆ ಆಗಿಲ್ಲ. ಕಳೆದ 50 ವರ್ಷಗಳಲ್ಲಿ ದೇಶದ ಜನಸಂಖ್ಯೆ, ನಗರ, ಹಳ್ಳಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೊಸ ಜಿಲ್ಲೆಗಳು ಸೃಷ್ಟಿ ಆಗಿವೆ. ಹೀಗಾಗಿ ಬದಲಾವಣೆ ಮತ್ತು ಬೇಡಿಕೆಗೆ ತಕ್ಕಂತೆ ಕ್ಷೇತ್ರ ಮರುವಿಂಗಡನೆ ಮಾಡಬೇಕು. ಜೊತೆಗೆ ಜಸನಂಖ್ಯೆಗೆ ಅನುಗುಣವಾಗಿ ಸಂಸತ್ತಿನ ಸ್ಥಾನ ಹೆಚ್ಚಿಸಬೇಕು. ಆಗ ಜನರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕುತ್ತದೆ ಎಂಬುದು ಸರ್ಕಾರದ ವಾದ.