ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಸಮೀಕ್ಷೆಯಲ್ಲಿ ಅಚ್ಚರಿಯ ವಿವರ!

By Kannadaprabha News  |  First Published Sep 12, 2020, 7:37 AM IST

ಮೇ ತಿಂಗಳಲ್ಲೇ ಭಾರತದ 64 ಲಕ್ಷ ಜನರಿಗೆ ಸೋಂಕು!| ಸೆರೋ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬಯಲು| ದೇಶದಲ್ಲಿ ಕೊರೋನಾ ಸೋಂಕು ಈಗ ಆರಂಭಿಕ ಹಂತದಲ್ಲಿದೆ: ಐಸಿಎಂಆರ್‌| ಗರಿಷ್ಠ ಮಟ್ಟಕ್ಕೇರಲು ಇನ್ನೂ ಸಮಯ ಬೇಕಾಗಬಹುದು: ತಜ್ಞರ ಅಭಿಮತ


ನವದೆಹಲಿ(ಸೆ.12): ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಮೇ ತಿಂಗಳ ಅವಧಿಯಲ್ಲೇ 64 ಲಕ್ಷ ಕೊರೋನಾ ಸೋಂಕಿತರಿದ್ದರು ಎಂಬ ಸಂಗತಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ ಮೊದಲ ಬಹುನಿರೀಕ್ಷಿತ ರಾಷ್ಟ್ರೀಯ ಸೆರೋ ಸಮೀಕ್ಷೆಯಲ್ಲಿ ಪತ್ತೆಯಾಗಿದೆ.

ಅಂದರೆ, ಆ ಅವಧಿಯಲ್ಲಿ ದೇಶದ ಶೇ.0.73ರಷ್ಟುವಯಸ್ಕರು ಕೊರೋನಾ ಸೋಂಕು ಹೊಂದಿದ್ದರು. ಅದರರ್ಥ, ಭಾರತದಲ್ಲಿ ಇನ್ನೂ ಕೊರೋನಾ ಸೋಂಕು ಆರಂಭಿಕ ಹಂತದಲ್ಲೇ ಇದೆ. ಹೀಗಾಗಿ ಸೋಂಕು ಗರಿಷ್ಠ ತುದಿ ತಲುಪಲು ಇನ್ನಷ್ಟುಸಮಯ ಬೇಕಾಗಬಹುದು. ಆದ್ದರಿಂದ ಸೋಂಕಿತರ ಪರೀಕ್ಷೆಯನ್ನು ಇನ್ನಷ್ಟುಹೆಚ್ಚಿಸುವ ಮೂಲಕ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸಬೇಕು ಎಂದು ಐಸಿಎಂಆರ್‌ ವರದಿಯನ್ನು ಉಲ್ಲೇಖಿಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ಕೇಂದ್ರ ಸರ್ಕಾರದ ಲೆಕ್ಕಾಚಾರದ ಅನ್ವಯ ದೇಶಾದ್ಯಂತ ಪತ್ತೆಯಾಗಿರುವ ಸೋಂಕಿತರ ಸಂಖ್ಯೆ 46 ಲಕ್ಷ. ಅಂದರೆ ಇದಕ್ಕಿಂತ ಹೆಚ್ಚಿನ ಪ್ರಕರಣಗಳು ಮೂರೂವರೆ ತಿಂಗಳ ಹಿಂದೆಯೇ ದಾಖಲಾಗಿತ್ತು.

Latest Videos

undefined

ಸಮೀಕ್ಷೆಯಿಂದ ತಿಳಿದ ಸಂಗತಿ:

ಮೇ ತಿಂಗಳಷ್ಟು ಆರಂಭಿಕ ಅವಧಿಯಲ್ಲೇ ದೇಶದಲ್ಲಿ 64 ಲಕ್ಷ ಸೋಂಕಿತರಿದ್ದರು ಎಂಬುದು ದೊಡ್ಡ ಸಂಖ್ಯೆಯಾಗಿ ಮೇಲ್ನೋಟಕ್ಕೆ ತೋರಬಹುದು. ಆದರೆ, 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಆಗ ಇದ್ದ ಸೋಂಕಿತರ ಪ್ರಮಾಣ ಕೇವಲ ಶೇ.0.73ರಷ್ಟಾಗುತ್ತದೆ. ಇಷ್ಟುಕಡಿಮೆ ಸಂಖ್ಯೆಯ ಜನರಲ್ಲಿ ಆ ವೇಳೆಗೆ ಕೊರೋನಾ ಪ್ರತಿಕಾಯ ಪತ್ತೆಯಾಗಿದೆ ಅಂದರೆ ಸೋಂಕು ಸಮುದಾಯಕ್ಕೆ ಹರಡಿ ದೇಶದಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಲು ಇನ್ನೂ ಬಹಳ ಸಮಯ ಹಿಡಿಯುತ್ತದೆ. ಅಂದರೆ, ಅಲ್ಲಿಯವರೆಗೂ ಸೋಂಕು ಈಗಿನಂತೆ ಏರುಗತಿಯಲ್ಲೇ ಸಾಗುತ್ತದೆ. ಆಗ ಸಾವಿನ ಸಂಖ್ಯೆಯೂ ಹೆಚ್ಚುತ್ತದೆ.

ಯಾವ ವಯಸ್ಸಿನವರಲ್ಲಿ ಎಷ್ಟು ಸೋಂಕು:

ಸೆರೋ ಸಮೀಕ್ಷೆಯನ್ನು ನಾಲ್ಕು ವಿಧದ 70 ಜಿಲ್ಲೆಗಳಲ್ಲಿ ನಡೆಸಲಾಗಿತ್ತು. ಕೊರೋನಾ ಸೋಂಕಿತರ ಸಂಖ್ಯೆ ಶೂನ್ಯ ಇದ್ದ 15 ಜಿಲ್ಲೆಗಳು, ಕಡಿಮೆ ಇದ್ದ 22 ಜಿಲ್ಲೆ, ಮಧ್ಯಮ ಪ್ರಮಾಣದಲ್ಲಿದ್ದ 16 ಜಿಲ್ಲೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿದ್ದ 17 ಜಿಲ್ಲೆಗಳ ನಗರ ಪ್ರದೇಶದ ಕೊಳಗೇರಿಗಳು ಮತ್ತು ಸೋಂಕು ಬೇಗ ತಗಲುವ ಸಾಧ್ಯತೆಯಿರುವಂತಹ ಕೆಲಸದಲ್ಲಿ ತೊಡಗಿರುವ ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 18-45 ವಯಸ್ಸಿನ ಶೇ.43.3ರಷ್ಟು, 46-60 ವಯಸ್ಸಿನ ಶೇ.39.5ರಷ್ಟುಹಾಗೂ 60ಕ್ಕಿಂತ ಮೇಲ್ಪಟ್ಟವಯಸ್ಸಿನ ಶೇ.17.2ರಷ್ಟುಜನರಲ್ಲಿ ಪ್ರತಿಕಾಯ ಪತ್ತೆಯಾಗಿದೆ.

ಸಮೀಕ್ಷೆಯ ಫಲಿತಾಂಶದ ಆಧಾರದ ಮೇಲೆ ದೇಶದಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಪ್ರತಿ ಒಬ್ಬ ವ್ಯಕ್ತಿಗೆ 82-130 ಕೊರೋನಾ ಸೋಂಕಿತರಿದ್ದಾರೆ ಎಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

70 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆ

ಯಾರ ದೇಹದಲ್ಲಿ ಕೊರೋನಾ ಪ್ರತಿಕಾಯ (ಆ್ಯಂಟಿಬಾಡಿ) ಇದೆ ಎಂಬುದನ್ನು ಪತ್ತೆಹಚ್ಚಲು ಸೆರೋ ಸಮೀಕ್ಷೆ ನಡೆಸಲಾಗುತ್ತದೆ. ಪ್ರತಿಕಾಯ ಇರುವವರ ದೇಹಕ್ಕೆ ಅದಕ್ಕಿಂತ ಮೊದಲೇ ಕೊರೋನಾ ಸೋಂಕು ತಗಲಿತ್ತು ಎಂದರ್ಥ. ಐಸಿಎಂಆರ್‌ ಮೇ 11 ಮತ್ತು ಜೂನ್‌ 4ರ ನಡುವೆ ದೇಶದ 70 ಜಿಲ್ಲೆಗಳಲ್ಲಿ 28,000 ವ್ಯಕ್ತಿಗಳ ದೇಹದ ರಕ್ತದ ಮಾದರಿ ಸಂಗ್ರಹಿಸಿ ಕೋವಿಡ್‌ ಕವಚ್‌ ಎಲಿಸಾ ಕಿಟ್‌ ಬಳಸಿ ಈ ಸಮೀಕ್ಷೆ ನಡೆಸಿತ್ತು. ಅದರ ಫಲಿತಾಂಶವನ್ನು ಇಂಡಿಯನ್‌ ಜರ್ನಲ್‌ ಆಫ್‌ ಮೆಡಿಕಲ್‌ ರೀಸಚ್‌ರ್‍ನಲ್ಲಿ ಈಗ ಪ್ರಕಟಿಸಿದೆ.

click me!