ಪಾಕ್- ಚೀನಾದ ಜಂಟಿ ಸಮರಾಭ್ಯಾಸ: ಅರಬ್ಬಿ ಸಮುದ್ರಕ್ಕೆ ವಿಕ್ರಮಾದಿತ್ಯ ನಿಯೋಜಿಸಿದ ಭಾರತ!

By Suvarna NewsFirst Published Jan 11, 2020, 8:56 AM IST
Highlights

ಚೀನಾ- ಪಾಕ್‌ ಮಿಲಿಟರಿ ಕವಾಯತು ಬೆನ್ನಲ್ಲೇ ನೌಕೆ ನಿಯೋಜಿಸಿದ ಭಾರತ| ಪಾಕಿಸ್ತಾನ-ಚೀನಾ ಜಂಟಿ ಸಮರಾಭ್ಯಾಸಕ್ಕೆ ಭಾರತ ತಿರುಗೇಟು

ನವದೆಹಲಿ[ಜ.11]: ಚೀನಾ ಹಾಗೂ ಪಾಕಿಸ್ತಾನ ದೇಶಗಳು ಅರಬ್ಬಿ ಸಮುದ್ರದಲ್ಲಿ ಸೋಮವಾರದಿಂದ 9 ದಿನಗಳ ಕಾಲ ಜಂಟಿ ಸಮರಾಭ್ಯಾಸ ಆರಂಭಿಸಿರುವ ಬೆನ್ನಲ್ಲೇ, ಭಾರತವು ಯುದ್ಧ ವಿಮಾನ ಹೊತ್ತೊಯ್ಯುವ ಸಾಮರ್ಥ್ಯದ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಈ ಮೂಲಕ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಬಿಕ್ಕಟ್ಟಿನ ವಾತಾವಾರಣ ನಿರ್ಮಾಣವಾದಾಗಲೇ, ಸಮರಾಭ್ಯಾಸದಲ್ಲಿ ತೊಡಗಿದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ.

ಅರಬ್ಬೀ ಸಮುದ್ರದಲ್ಲಿ ನಿಯೋಜನೆಯಾಗಿರುವ ಮಿಕೋಯನ್‌ ಮಿಗ್‌-29ಕೆ ಯುದ್ಧ ವಿಮಾನಗಳನ್ನು ಹೊತ್ತಿರುವ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯ ಕಾರ್ಯಾಚರಣೆಯ ಉತ್ಸುವಾರಿಯನ್ನು ನೌಕಾ ಸಿಬ್ಬಂದಿಯ ಉಪ ಮುಖ್ಯಸ್ಥ ಎಂ.ಎಸ್‌ ಪವಾರ್‌ ಅವರು ವಹಿಸಿಕೊಂಡಿದ್ದಾರೆ ಎಂದು ನೌಕಾಪಡೆಯ ವಕ್ತಾರ ತಿಳಿಸಿದರು.

ಒಂದೆಡೆ ಉತ್ತರ ಅರಬ್ಬಿ ಸಮುದ್ರದಲ್ಲಿ ತನ್ನ ಇರುವಿಕೆಯನ್ನು ವಿಸ್ತರಿಸುತ್ತಿರುವ ಚೀನಾ, ಮತ್ತೊಂದೆಡೆ ಇದೇ ವಲಯದಲ್ಲಿ ಪಾಕಿಸ್ತಾನದ ಆಳನೀರಿನ ಗ್ವಾದಾರ್‌ ಬಂದರನ್ನೂ ಅಭಿವೃದ್ಧಿಪಡಿಸುತ್ತಿದೆ. ಈ ಎರಡೂ ವಿಷಯಗಳನ್ನು ಭಾರತ ಗಂಭೀರವಾಗಿಯೇ ಪರಿಗಣಿಸಿದ್ದು, ಈ ವಲಯದಲ್ಲಿನ ತನ್ನ ಸಾರ್ವಭೌಮತಕ್ಕೆ ಯಾವುದೇ ದೇಶಗಳೂ ಅಡ್ಡಿ ಮಾಡಬಾರದು ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿಯೇ ವಿಕ್ರಮಾದಿತ್ಯ ನೌಕೆಯನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜಿಸಿದೆ ಎನ್ನಲಾಘಿದೆ.

ಈ ಹಿಂದೆ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತದ ಆರ್ಥಿಕ ವಲಯವನ್ನು ಪ್ರವೇಶಿಸಿದ್ದ ಚೀನಾದ ಪೀಪಲ್‌ ಲಿಬರೇಷನ್‌ ಸೇನೆಯ ಹಡಗನ್ನು ಭಾರತದ ನೌಕಾಪಡೆ ಹಿಮ್ಮೆಟ್ಟೆಸಿತ್ತು. ಅಲ್ಲದೆ, ಮುಂದಿನ ದಿನಗಳಲ್ಲಿ ಇಂಥ ನಡೆಯನ್ನು ಪುನರಾವರ್ತಿಸಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಚೀನಾಕ್ಕೆ ಕಟ್ಟೆಚ್ಚರಿಕೆ ನೀಡಿತ್ತು.

click me!